More

    ಶಿವಕುಮಾರ ಸ್ವಾಮೀಜಿ ಪ್ರಥಮ ಪುಣ್ಯಸಂಸ್ಮರಣೋತ್ಸವ ನಾಳೆ: ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

    ತುಮಕೂರು: ತ್ರಿವಿಧ ದಾಸೋಹಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಪ್ರಥಮ ಪುಣ್ಯಸಂಸ್ಮರಣೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ನಾಡಿನೆಲ್ಲೆಡೆಯಿಂದ 1 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಶ್ರೀಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ 30 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಭಾನುವಾರ (ಜ.19) ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಇದಕ್ಕೂ ಮೊದಲು ಡಾ.ಶಿವಕುಮಾರ ಸ್ವಾಮೀಜಿ ಕುಳಿತ ಭಂಗಿಯಲ್ಲಿರುವ 3 ಅಡಿ ಎತ್ತರದ ಬೆಳ್ಳಿ ಪುತ್ಥಳಿ ಮೆರವಣಿಗೆ ಶ್ರೀಗಳ ಗದ್ದುಗೆಯಿಂದ ಗೋಸಲ ಸಿದ್ದೇಶ್ವರ ವೇದಿಕೆವರೆಗೆ 108 ಕಳಶ, ಪೂರ್ಣಕುಂಭ, ನಂದಿಧ್ವಜ, ಲಿಂಗವೀರರು ಸಮ್ಮುಖದಲ್ಲಿ ನಡೆಯಲಿದೆ.

    7 ಕಡೆ ದಾಸೋಹ: ನಾಡಿನೆಲ್ಲೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲು ಶ್ರೀಮಠದ ಆಡಳಿತ ಮಂಡಳಿ ಸಜ್ಜಾಗಿದೆ. ಶ್ರೀಮಠದ 7 ಕಡೆ ದಾಸೋಹ ನಡೆಯಲಿದೆ. ಬೆಳಗ್ಗೆ 7ರಿಂದ 11ರವರೆಗೆ ಬೆಳಗಿನ ಉಪಹಾರ, 11.30ಕ್ಕೆ ಆರಂಭವಾಗಲಿರುವ ದಾಸೋಹ ರಾತ್ರಿ 11ರವರೆಗೆ ನಿರಂತರವಾಗಿ ನಡೆಯಲಿದೆ. ಬೂಂದಿ, ಕೀರು, ಚಿತ್ರಾನ್ನ, ಪಲ್ಯ, ಹೆಸರುಬೇಳೆ ಪಲ್ಯ, ಅನ್ನ-ಸಾಂಬಾರು, ಮಜ್ಜಿಗೆ ಮಧ್ಯಾಹ್ನದ ಪ್ರಸಾದಕ್ಕೆ ನೀಡಲಾಗುವುದು. ಶ್ರೀಗಳ ಗದ್ದುಗೆ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದು, ವಾಹನಗಳ ನಿಲುಗಡೆಗೂ ತೊಂದರೆಯಾಗದಂತೆ ಸೂಕ್ತ ಅವಕಾಶ ಕಲ್ಪಿಸಲಾಗಿದೆ.

    ಸಿಎಂ, ಮಾಜಿ ಸಿಎಂಗಳು ಭಾಗಿ

    ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಸಿಎಂ ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಬೇಲಿಮಠದ ಶ್ರೀಶಿವರುದ್ರಸ್ವಾಮೀಜಿ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಉಪಸ್ಥಿತರಿರುವರು. ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಸಿ.ಸಿ.ಪಾಟೀಲ್, ಶಾಸಕ ಡಾ.ಜಿ.ಪರಮೇಶ್ವರ್ ಮತ್ತಿತರರು ಭಾಗವಹಿಸುವರು. ದೆಹಲಿ ಮೂಲದ ಕೈಗಾರಿಕೋದ್ಯಮಿ ಮುಖೇಶ್ ಗರ್ಗ್ ಹಾಗೂ ನವದೆಹಲಿ ಉಗ್ರ ನಿಗ್ರಹ ದಳದ ಮುಖ್ಯಸ್ಥ ಮಣೀಂದರ್​ಜೀತ್ ಸಿಂಗ್ ಬಿಟ್ಟ ಅವರನ್ನು ಸನ್ಮಾನಿಸಲಾಗುವುದು.

    ಕೃತಿಗಳ ಲೋಕಾರ್ಪಣೆ, ವೆಬ್​ಸೈಟ್ ಬಿಡುಗಡೆ

    ಸಿ.ಎನ್.ಸದಾಶಿವಯ್ಯ ವಿರಚಿತ ‘ಶ್ರೀಗುರು ಕರುಣೆ ಮತ್ತು ನಿಷ್ಠೆ’, ಬ್ಯಾಲಕೆರೆ ಶಿವಣ್ಣ ವಿರಚಿತ ‘ಯೋಗಾಂಗ ತ್ರಿವಿಧಿ’ ಹಾಗೂ ಮುದ್ದೇನಹಳ್ಳಿ ನಂಜಯ್ಯ ವಿರಚಿತ ‘ಶ್ರೀ ಶಿವಕುಮಾರ ಚರಿತೆ’ ಪುಸ್ತಕ ಲೋಕಾರ್ಪಣೆ ಮಾಡಲಾಗುವುದು. ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ ವತಿಯಿಂದ ಕಾರ್ಯಸೂಚಿ ಕೈಪಿಡಿ ಮತ್ತು ವೆಬ್​ಸೈಟ್ ಬಿಡುಗಡೆ ಸಹ ಇರಲಿದೆ. ಮಧ್ಯಾಹ್ನ 3ಕ್ಕೆ ಜಾನಪದ ಜಾತ್ರೆ ಇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts