ಹಿಂದು ಪರಂಪರೆ ವಿರುದ್ಧ ಕುತಂತ್ರ

ವಿಶ್ವದಲ್ಲಿಯೇ ಅವಿಚ್ಛಿನ್ನ ಪರಂಪರೆಯ ಏಕೈಕ ಮಠ ಎಂಬ ಹೆಗ್ಗಳಿಕೆ; ಗೋ ಸಂರಕ್ಷಣೆಯಲ್ಲಿ ಮುಂಚೂಣಿ ಹೆಸರು. ಇದು ಶಿವಮೊಗ್ಗದ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ವಿಶೇಷತೆ. ಗೋಕರ್ಣ ದೇವಸ್ಥಾನವನ್ನು ಸರ್ಕಾರ ಮಠಕ್ಕೆ ಮರಳಿ ಒಪ್ಪಿಸಿದ್ದು ಈಚಿನ ಘಟನೆ. ರಾಮಮಂದಿರ ನಿರ್ವಣದ ಅನಿವಾರ್ಯತೆ, ದೇವಸ್ಥಾನಗಳಲ್ಲಿ ಸರ್ಕಾರದ ಹಸ್ತಕ್ಷೇಪ, ಸಂಸ್ಕೃತಿ ರಕ್ಷಣೆ ಹಾಗೂ ತಮ್ಮ ಇತ್ತೀಚಿನ ಗೋಸ್ವರ್ಗ ಯೋಜನೆ ಮುಂತಾದ ವಿಷಯಗಳ ಕುರಿತು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.

| ರಮೇಶ ದೊಡ್ಡಪುರ

# ರಾಮಚಂದ್ರಾಪುರ ಮಠದ ಅವಿಚ್ಛಿನ್ನ ಪರಂಪರೆಯ ಕುರಿತು ತಿಳಿಸಬಹುದೇ?

ಜಗತ್ತಿನ ಏಕೈಕ ಅವಿಚ್ಛಿನ್ನ ಪರಂಪರೆಯ ಮಠ ರಾಮಚಂದ್ರಾಪುರ ಸಂಸ್ಥಾನ. ಆದಿಶಂಕರರು ಸ್ಥಾಪಿಸಿದ ಅನೇಕ ಪೀಠಗಳಲ್ಲಿ ಅಲ್ಲಿಂದ ಈವರೆಗೆ ಒಮ್ಮೆಯೂ ಶೂನ್ಯವಾಗದ ಮಠ. ಅಂದರೆ ಪೀಠಾಧಿಪತಿ ಇಲ್ಲದ ಸಮಯವಿಲ್ಲ. ಉತ್ತರಾಧಿಕಾರಿಯನ್ನು ನೇಮಿಸುವ ಮೊದಲೆ ಯಾವ ಗುರುವೂ ಇಹಲೋಕ ತ್ಯಜಿಸಿಲ್ಲ. ಪ್ರತಿ ಸಂಸ್ಥಾನಕ್ಕೂ ತನ್ನದೇ ಆದ ಪರಂಪರೆ, ರಹಸ್ಯ ಸಂಗತಿಗಳಿರುತ್ತವೆ. ಒಮ್ಮೆ ಪೀಠ ಶೂನ್ಯವಾದರೆ ಬೇರೆ ಸಂಪ್ರದಾಯದ ಯತಿಯಿಂದ ದೀಕ್ಷೆ ಕೊಡಿಸಬೇಕಾಗುತ್ತದೆ. ಆಗ ಇಂತಹ ಮಹತ್ವದ ರಹಸ್ಯ ಸಂಗತಿಗಳು, ವೈಶಿಷ್ಟ್ಯಗಳು ಮಾಯವಾಗುತ್ತವೆ. ಅದಕ್ಕೆ ಅವಕಾಶ ನೀಡದಂತೆ ನಡೆದುಬಂದಿರುವುದು ಅವಿಚ್ಛಿನ್ನ ಪರಂಪರೆಯ ಪ್ರಾಮುಖ್ಯ.

#ಇಂಥ ಇತಿಹಾಸದ ಮಠದ ಸುತ್ತ ನಡೆಯುತ್ತಿರುವ ವಿವಾದಗಳಿಗೆ ಕಾರಣವೇನು?

ಅಸೂಯೆಯೇ ಪ್ರಮುಖ ಕಾರಣ. ಹೊರಗಿನವರು ನೇರವಾಗಿ ನಮ್ಮನ್ನು ಎಂದಿಗೂ ಆಕ್ರಮಣ ಮಾಡಲಾಗಿಲ್ಲ. ಅಂದು ಪೃಥ್ವಿರಾಜ ಚೌಹಾಣನಿಗೆ ಜಯಚಂದ್ರ ದ್ರೋಹ ಬಗೆದಂತೆ ಇಂದಿಗೂ ಅಂಥವರು ಇದ್ದಾರೆ. ವಿಶ್ವಮಂಗಳ ಗೋಗ್ರಾಮ ಯಾತ್ರೆ ಸಮಾರೋಪದಲ್ಲಿ ಸಾವಿರಾರು ಸಂತರು ನಮ್ಮ ಜತೆ ಸೇರಿದ್ದರು. ಈ ಹಿಂದೆ ಅನೇಕ ಕಾರಣಗಳಿಂದಾಗಿ ಮಠದ ಭಕ್ತರಿಗೇ ಮಠದ ಪ್ರಾಮುಖ್ಯತೆ ಕುರಿತು ತಿಳಿಯದಿದ್ದ ಸ್ಥಿತಿಯಿಂದ, ಒಂದು ಹಿಂದು ಕೇಂದ್ರವಾಗಿ ರೂಪುಗೊಳ್ಳುವತ್ತ ಸಾಗಿತ್ತು. ಆದರೆ ಪ್ರತಿ ಬಾರಿ ನಮ್ಮ ಮೇಲೆ ದಾಳಿಗಳಾದಾಗಲೂ ಮಠದ ಕುರಿತು ಭಕ್ತ ಸಮೂಹದ ಶ್ರದ್ಧೆ ಬಲವಾಗಿದೆ. ನಾಳೆಯನ್ನು ನೋಡುತ್ತೇವೆಯೋ ಇಲ್ಲವೋ ಎಂಬ ಆತಂಕದಿಂದ ಹೊರಬಂದ ಸಾಕಷ್ಟು ನಿದರ್ಶನಗಳಿವೆ.

# ಸಂಕಷ್ಟವನ್ನು ಎದುರಿಸಲು ನಿಮಗೆ ಬಲ ಯಾವುದು?

ನಮಗೆ ಬರುವ ಸಂಕಷ್ಟವನ್ನು ರಾಮನೇ ನಿವಾರಿಸುತ್ತ ತನ್ನ ಇರುವಿಕೆಯನ್ನು ತೋರಿಸಿಕೊಟ್ಟಿದ್ದಾನೆ. ರಾಮನ ಕೃಪೆಯಿಂದಲೇ ಮಠ ಇಂದಿಗೂ ಉಳಿದುಕೊಂಡು ಬಂದಿದೆ. ಸತ್ಯದ ಬಲದಿಂದ, ದೈವ ಕರುಣೆಯಿಂದ, ದೈವ ಸಹಾಯದಿಂದ ನಾವು ಮಠವನ್ನು ಕಾವಲು ಕಾಯುತ್ತಿದ್ದೇವೆ. ನಮ್ಮನ್ನು ಭಕ್ತರು, ಸಮುದಾಯ ಕಾವಲು ಕಾಯುತ್ತಿದೆ.

# ಬೇಡವೆಂದರೂ ರಾಜಕೀಯದ ಜತೆಗೆ ಧರ್ಮದ ನಂಟು ಹೆಚ್ಚುತ್ತಿದೆ. ಇಂತಹ ಸನ್ನಿವೇಶದಲ್ಲಿ ಧರ್ವಚಾರ್ಯರ ಪಾತ್ರ ಯಾವ ರೀತಿ ಇರಬೇಕು?

ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲೂ ತಮ್ಮ ಪರಂಪರೆ ಹಾಗೂ ನಂಬಿಕೆಗಳ ಕುರಿತು ಗೌರವ ಹೆಚ್ಚುತ್ತಿದೆ. ನಮ್ಮ ದೇಶದಲ್ಲಿ ಸಂಪ್ರದಾಯವನ್ನು ಗೊಡ್ಡು ಎಂದು ಕೆಲವರು ಹೇಳುತ್ತಾರೆ. ಆದರೆ ಅದು ಗೊಡ್ಡು ಎಂದು ಎಲ್ಲಿ, ಯಾವಾಗ, ಯಾರು ನಿರೂಪಿಸಿದ್ದಾರೆ? ರಾಜಕೀಯವಾಗಿ ಹಿಂದುಗಳು ಸಂಘಟಿತರಾಗಬಾರದು ಎಂಬುದು ಇದೆಲ್ಲದರ ಹಿಂದಿನ ಉದ್ದೇಶ. ಹಿಂದು ಶಕ್ತಿಕೇಂದ್ರವಾಗಿ ಮಠ ರೂಪುಗೊಳ್ಳುತ್ತದೆ, ಇದರಿಂದ ಜನರು ಮತ ಚಲಾಯಿಸವಾಗಲೂ ಪರಿಣಾಮ ಆಗುತ್ತದೆ ಎಂಬ ಕಾರಣಕ್ಕೆ ಕುತಂತ್ರ ನಡೆಯುತ್ತದೆ. ನಾವು ಇತರ ಯಾವುದೇ ಧರ್ಮವನ್ನು ಕೀಳಾಗಿ ಭಾವಿಸುವುದಿಲ್ಲ. ಹೊಸನಗರದಲ್ಲಿ ನಮ್ಮ ಮುಖ್ಯ ಮಠದ ಪಕ್ಕದಲ್ಲೆ ಮುಸ್ಲಿಂ ಕುಟುಂಬಕ್ಕೆ ಭೂಮಿ ನೀಡಿದ್ದೇವೆ. ಆದರೆ ನಮ್ಮತನವನ್ನು ಎಂದಿಗೂ ಬಿಡಬಾರದು.

# ಗೋಕರ್ಣ ದೇವಸ್ಥಾನ ಹಾಗೂ ಮಠಕ್ಕೆ ಸಂಬಂಧ ಹೇಗೆ? ದೇವಸ್ಥಾನ ಮಠದ ಕೈತಪ್ಪಿದ್ದು ಹೇಗೆ?

ಮಠದ ಗುರುಗಳ ಆದೇಶವನ್ನು ‘ರಾಯಸ’ ಎನ್ನುತ್ತೇವೆ. ಮಠದ ಪ್ರಾರಂಭದಿಂದಲೂ ಎಲ್ಲ ರಾಯಸಗಳಲ್ಲಿ ಗುರುಗಳ ಹೆಸರನ್ನು ಗೋಕರ್ಣ ಮಂಡಲಾಧೀಶ್ವರ ಎಂಬುದರ ಜತೆಯೇ ನಮೂದಿಸಲಾಗಿದೆ. ಶಂಕರಾಚಾರ್ಯರು ಮಠ ಸ್ಥಾಪನೆ ಮಾಡಿದಾಗಲೇ ಗೋಕರ್ಣ ದೇವಸ್ಥಾನವನ್ನು ಜತೆಗೆ ನೀಡಿ ಆದೇಶಿಸಿದ್ದರು. ಗೋಕರ್ಣ ಹೊರತುಪಡಿಸಿ ಬೇರೆ ಎಲ್ಲಿಯೂ ದೇವಸ್ಥಾನವನ್ನು ಸಂಸ್ಥಾನ ಎಂದಿಲ್ಲ.

2003ರವರೆಗೂ ಗೋಕರ್ಣ ದೇವಸ್ಥಾನಕ್ಕೆ ಮಠವೇ ಟ್ರಸ್ಟಿಗಳನ್ನು ನೇಮಿಸುತ್ತಿತ್ತು. 2003ರಲ್ಲಿ ಟ್ರಸ್ಟಿ ನಿಧನರಾದಾಗ ಸರ್ಕಾರ ಅಧಿಸೂಚನೆ ಹೊರಡಿಸಿ ವಶಕ್ಕೆ ಪಡೆಯಿತು. 2008ರಲ್ಲಿ ಸರ್ಕಾರಕ್ಕೆ ತನ್ನ ತಪ್ಪಿನ ಅರಿವಾಗಿ, ದೇವಸ್ಥಾನವನ್ನು ಮತ್ತೆ ಮಠಕ್ಕೆ ಬಿಟ್ಟುಕೊಟ್ಟಿತು. ಈಗ ನಡೆಯತ್ತಿರುವ ಎಲ್ಲ ಸಂಚುಗಳು, ಸುಳ್ಳು ಪ್ರಕರಣಗಳು 2008ರಿಂದಲೇ ಆರಂಭವಾಗಿದ್ದು. ಸತ್ಯ, ನ್ಯಾಯ, ನ್ಯಾಯಾಂಗ ಮಾರ್ಗದಿಂದಲೇ ಇದನ್ನು ಎದುರಿಸಿ ಜಯಿಸುವ ವಿಶ್ವಾಸವಿದೆ.

# ಹಿಂದು ದೇವಸ್ಥಾನಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಕುರಿತು ನಿಮ್ಮ ನಿಲುವೇನು?

ದೇವಸ್ಥಾನ ನಿರ್ವಹಣೆ ಸರ್ಕಾರದ ಕೆಲಸವಲ್ಲ. ರಸ್ತೆ, ನೀರು, ಶಿಕ್ಷಣ, ಉದ್ಯೋಗ ಸೃಷ್ಟಿ ಸೇರಿ ಅನೇಕ ಕೆಲಸಗಳು ಸರ್ಕಾರಕ್ಕಿವೆ. ಪ್ರತಿ ದೇವಸ್ಥಾನಕ್ಕೂ ಪ್ರತ್ಯೇಕ ಪರಂಪರೆಯಿದ್ದು, ಸರ್ಕಾರಕ್ಕೆ ಅವು ಅರ್ಥವಾಗುವುದಿಲ್ಲ. ಅಲ್ಲಿ ನೇಮಕವಾಗುವ ಅಧಿಕಾರಿಗಳಿಗೆ ದೇವಸ್ಥಾನದ ಬಗ್ಗೆ ಶ್ರದ್ಧೆ ಇರುವುದಿಲ್ಲ. ಎಂದಿಗೂ ಬೇರೆ ಧರ್ಮಗಳವರ ಹಣ ತೆಗೆದು ಹಿಂದುಗಳಿಗೆ ನೀಡಿಲ್ಲ. ಆದರೆ ದೇವಸ್ಥಾನದ ಹಣ ತೆಗೆದು ಹಜ್ ಯಾತ್ರೆಗೆ ನೀಡಿದ್ದಾರೆ.

ಗೋಕರ್ಣ ದೇಗುಲವನ್ನು ಇತ್ತೀಚೆಗೆ 43 ದಿನ ಸರ್ಕಾರ ವಶಕ್ಕೆ ಪಡೆದಾಗಲೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಭಕ್ತರ ಸಂಖ್ಯೆ ಕಡಿಮೆಯಾಯಿತು, ಸಿಬ್ಬಂದಿಗೆ ವೇತನ ನೀಡಲೂ ಸಾಧ್ಯವಾಗಲಿಲ್ಲ. ಸುಪ್ರೀಂಕೋರ್ಟ್​ವರೆಗಿನ ಹೋರಾಟದಲ್ಲಿ ಗೋಕರ್ಣ ಸಂಸ್ಥಾನ ಜಯಿಸುತ್ತಿರುವುದು ಉಳಿದೆಲ್ಲ ದೇವಸ್ಥಾನಗಳಿಗೂ ರಕ್ಷಣೆ ನೀಡಿದಂತಾಗಿದೆ. ಗೋಕರ್ಣ ಸಂಸ್ಥಾನವನ್ನೇ ಸರ್ಕಾರ ವಶಪಡಿಸಿಕೊಂಡರೆ ಉಳಿದ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವುದು ಸುಲಭದ ಮಾತು.

# ಗೋಮಾಂಸ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿರುವುದು ದುರಂತವಲ್ಲವೇ?

ನಿಜಕ್ಕೂ ಇದು ಯೋಚಿಸಬೇಕಾದ ಸಂಗತಿ. ವಿಶ್ವಮಂಗಲ ಯಾತ್ರೆಯ ಸಮಾರೋಪದಲ್ಲಿಯೇ 1,300 ಸಂತರು ಈ ಬಗ್ಗೆ ನಿರ್ಣಯ ಕೈಗೊಂಡಿದ್ದರು. ಗೋಮಾಂಸದ ಬದಲು ಗೋಮೂತ್ರವನ್ನು ರಫ್ತು ಮಾಡಲು ಕೋರಲಾಗಿತ್ತು. ಗೋಮಾಂಸ ಆರ್ಥಿಕತೆಗೆ ಗೋಮೂತ್ರ ಆರ್ಥಿಕತೆಯೇ ಪರ್ಯಾಯ. ಗೋಮಾಂಸ ಉದ್ಯಮದಲ್ಲಿ ನಿರತರಾಗಿರುವವರ ಜೀವನವೂ ಉತ್ತಮವಾಗಿರುವುದಿಲ್ಲ. ಪಾಪದ ಕೆಲಸ ಮಾಡುತ್ತಿರುತ್ತಾರೆ. ಆದರೆ ಗೋಮೂತ್ರದ ಕಾರ್ಯದಲ್ಲಿ ತೊಡಗಿರುವವರ ಆರೋಗ್ಯ ಉತ್ತಮವಾಗಿರುತ್ತದೆ. ಗೋಮಾಂಸ ಕ್ಯಾನ್ಸರ್ ಕಾರಕವಾದರೆ, ಗೋಮೂತ್ರ ಕ್ಯಾನ್ಸರ್ ನಿವಾರಕ. ಇದನ್ನು ಸರ್ಕಾರಗಳಿಗೆ ಅವುಗಳು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಮುಟ್ಟಿಸಬೇಕಿದೆ. ಇತ್ತೀಚೆಗಷ್ಟೆ ಅಭಯಾಕ್ಷರ ಅಭಿಯಾನ ಮುಕ್ತಾಯವಾಗಿದ್ದು, ಸದ್ಯದಲ್ಲೆ ಪ್ರಧಾನಿಯವರಿಗೆ ಮನವಿ ಸಲ್ಲಿಸಲಿದ್ದೇವೆ.

# ಗೋವಧೆ ಹಾಗೂ ಗೋಮಾಂಸ ಭಕ್ಷಣೆ ಪರವಾಗಿರುವವರು, ಆಹಾರ ಸಂಸ್ಕೃತಿ ಎನ್ನುವವರೂ ಇದ್ದಾರಲ್ಲ?

ಗೋವಧೆ ಪರವಾಗಿರುವವರ ಸಂಖ್ಯೆ ತೀರಾ ಕಡಿಮೆ ಎಂಬುದು ನಮ್ಮ ಅಭಿಯಾನಗಳು, ಪ್ರವಾಸದಲ್ಲಿ ಅರಿವಿಗೆ ಬಂದಿದೆ. ಕಡಿಮೆ ಬೆಲೆ ಎಂಬ ಕಾರಣಕ್ಕೆ ಕೆಲವರು ಗೋಮಾಂಸ ಸೇವಿಸುತ್ತಾರೆಯೇ ವಿನಾ ಇಷ್ಟಪಟ್ಟಲ್ಲ. ಗೋಮಾಂಸ ಸೇವಿಸುವ ಪರಂಪರೆ ನಮ್ಮಲ್ಲಿ ಎಂದಿಗೂ ಇಲ್ಲ. ಯಾವ ಶಾಸ್ತ್ರವೂ ಇದಕ್ಕೆ ಅನುಮತಿ ನೀಡಿಲ್ಲ. ಗೋವನ್ನು ಅಗ್ನಿಯಾ, ಅಂದರೆ ಹಿಂಸೆಗೆ ಯೋಗ್ಯವಲ್ಲದ್ದು ಎಂದು ತಿಳಿಸಲಾಗಿದೆ. ಜನರಲ್ಲಿ ತಪು್ಪಕಲ್ಪನೆ ಮೂಡಿಸಲಾಗುತ್ತಿದೆ.

# ಸ್ತ್ರೀಯರಿಗೆ ಸಮಾನತೆ ನೀಡುವ ಕುರಿತು ಧರ್ಮಗ್ರಂಥಗಳು ಹೇಳುವುದೇನು?

ಗುರುವಾದವನಿಗೆ ಯಾರಲ್ಲೂ ಲಿಂಗಭೇದವಿಲ್ಲ. ಭಕ್ತರು ಆಗಮಿಸಿದಾಗ ಪುರುಷರಿಗೊಂದು, ಮಹಿಳೆಯರಿಗೊಂದು ರೀತಿ ನಡೆಸಿಕೊಳ್ಳುವಂತಿಲ್ಲ. ತಾಯಿಯೇ ಇಲ್ಲದೆ ಯಾವ ಮಹಾಪುರುಷನೂ ರೂಪುಗೊಂಡಿಲ್ಲ. ಹಿಂದು ಧರ್ಮದ ಯಾವ ಶಾಸ್ತ್ರಗ್ರಂಥಗಳೂ ಸ್ತ್ರೀ-ಪುರುಷರಲ್ಲಿ ಭೇದವನ್ನು ಸಮರ್ಥಿಸಿಲ್ಲ. ಸ್ತ್ರೀಯನ್ನು ಕೀಳಾಗಿ ಕಾಣಬಾರದು ಎಂದೇ ಶಾಸ್ತ್ರಗಳು ಸ್ಪಷ್ಟವಾಗಿ ತಿಳಿಸುತ್ತವೆ. ನಮ್ಮ ಮಠದ ಮಹಾಮಂಡಲದ ಅಧ್ಯಕ್ಷತೆಯನ್ನು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ವಹಿಸಿಕೊಂಡು ಸಮರ್ಥವಾಗಿ ನಡೆಸುತ್ತಿದ್ದಾರೆ.

# ಗೋಸಂರಕ್ಷಣೆ ಕುರಿತು ಇತ್ತೀಚೆಗೆ ಗೋ ಸ್ವರ್ಗ ಯೋಜನೆ ಕೈಗೆತ್ತಿಕೊಂಡಿದ್ದೀರಿ. ಅದರ ಬಗ್ಗೆ ತಿಳಿಸಬಹುದೇ?

ಕಾಮಧೇನು ಸ್ವರ್ಗದಲ್ಲಿರುತ್ತದೆ. ಭೂಮಿಯಲ್ಲೇ ಗೋವುಗಳಿಗೆ ಸ್ವರ್ಗ ನಿರ್ವಿುಸಬಹುದೇ ಎಂಬ ಪ್ರಯತ್ನವೇ ಗೋಸ್ವರ್ಗ ಯೋಜನೆ. 3.5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಎಲ್ಲಿಯೂ ಗೋವುಗಳನ್ನು ಕಟ್ಟಿ ಹಾಕಿಲ್ಲ. ಒಂದು ಕೋಲೂ ಇಲ್ಲ. ಗೋವುಗಳಿಗೆ ಬೈಗುಳವೂ ಇಲ್ಲ. ತಮ್ಮಿಷ್ಟದ ಆಹಾರ, ನೀರನ್ನು ತಮಗಿಷ್ಟ ಬಂದ ಸಮಯಕ್ಕೆ ಪಡೆಯುತ್ತವೆ. ತಾಯಿ-ಕರುವನ್ನು ಬೇರೆ ಮಾಡುವುದಿಲ್ಲ. ಕರುವಿಗೆ ಅಗತ್ಯವಿರುವ ಹಾಲನ್ನು ಪಡೆಯುವುದಿಲ್ಲ. ಬೃಹತ್ ಪ್ರದೇಶದಲ್ಲಿ ಸಾವಯವ ಹುಲ್ಲು ಬೆಳೆಯಲಾಗುತ್ತಿದೆ. ಇಂತಹ ವಾತಾವರಣ ನಿರ್ವಿುಸುವ ಸುಮಾರು 25 ಕೋಟಿ ರೂ. ಯೋಜನೆಯ ಎರಡನೆಯ ಹಂತ ಮುಕ್ತಾಯವಾಗಿದೆ. ಈಗಾಗಲೆ ಇದು ವಿಶ್ವದಲ್ಲಿ ಅತಿ ಉತ್ತಮ ಗೋಶಾಲೆಯಾಗಿದ್ದು, ಮುಂದೆ ಮತ್ತಷ್ಟು ಅಭಿವೃದ್ಧಿಯಾಗಲಿದೆ.

ರಾಮಮಂದಿರ ಆಗಲೇಬೇಕು

# 2019ರ ಲೋಕಸಭೆ ಚುನಾವಣೆ ಜತೆಜತೆಗೇ ಅಯೋಧ್ಯೆ ರಾಮಮಂದಿರ ವಿಚಾರವೂ ಚರ್ಚೆಯಾಗುತ್ತಿದೆಯಲ್ಲ?

ರಾಮಮಂದಿರ ಅಲ್ಲೇ ಆಗಲೇಬೇಕು. ಶ್ರೀರಾಮಚಂದ್ರ ನಮ್ಮ ಸಂಸ್ಕೃತಿಯ ಅಸ್ಮಿತೆ. ದೇಶಕ್ಕೆ ಹಿರಿಮೆ-ಗರಿಮೆ ತಂದುಕೊಟ್ಟವ ರಾಮ. ರಾಮನನ್ನು ಬಿಟ್ಟರೆ ನಮಗೆ ಸ್ಪೂರ್ತಿಯಿಲ್ಲ. ಅಂತಹ ರಾಮನಿಗೆ ಜನ್ಮಸ್ಥಾನದಲ್ಲೊಂದು ಮಂದಿರ ಕಟ್ಟಲೂ ನಮ್ಮಿಂದ ಆಗುವುದಿಲ್ಲವೇ? ಇದು ಒಂದು ಸಿದ್ಧಾಂತದ ಪ್ರಶ್ನೆಯಲ್ಲ. ರಾಮನನ್ನು ಮಹಾಪುರುಷ, ಆದರ್ಶಪುರುಷ ಎಂದು ಒಪು್ಪವ ಎಲ್ಲರೂ ಒಟ್ಟಾದರೆ ಮಂದಿರ ನಿರ್ವಣಕ್ಕೆ ಒಂದೇ ದಿನ ಸಾಕು.