ವೈಭವದ ಶ್ರೀಕೃಷ್ಣ ಲೀಲೋತ್ಸವ ಸಂಪನ್ನ

ವಿಜಯವಾಣಿ ಸುದ್ದಿಜಾಲ ಉಡುಪಿ
ಪೊಡವಿಗೊಡೆಯ ಶ್ರೀಕೃಷ್ಣನ ಜನ್ಮದಿನದ ಸಂಭ್ರಮದ ವಿಟ್ಲಪಿಂಡಿ ಶ್ರೀಕೃಷ್ಣ ಲೀಲೋತ್ಸವ ಶ್ರೀ ಕೃಷ್ಣಮಠದ ರಥಬೀದಿಯಲ್ಲಿ ಸೋಮವಾರ ಸಂಜೆ ಸಾವಿರಾರು ಮಂದಿ ಭಕ್ತರ ನಡುವೆ ವೈಭವದಿಂದ ಸಂಪನ್ನಗೊಂಡಿತು.
ಸೋಮವಾರ ಬೆಳಗ್ಗೆ ಶ್ರೀಕೃಷ್ಣನಿಗೆ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮತ್ತು ಅದಮಾರು ಕಿರಿಯ ಶ್ರೀಪಾದರು ವಿಶೇಷ ಪೂಜೆ ನೆರವೇರಿಸಿದರು. ಮುಖ್ಯಪ್ರಾಣ ದೇವರಿಗೆ ಉಂಡೆ ಚಕ್ಕುಲಿ ಸಮರ್ಪಣೆ ಬಳಿಕ ಶ್ರೀಕೃಷ್ಣ ಪ್ರಸಾದವನ್ನು ಭಕ್ತರಿಗೆ ಹಂಚಲಾಯಿತು. ಪರ್ಯಾಯ ಶ್ರೀಗಳು ಸಾರ್ವಜನಿಕ ಅನ್ನಸಂತರ್ಪಣೆಗೆ ಪಲ್ಲಪೂಜೆ ನೆರವೇರಿಸಿದರು.

ಹಾಲು ಪಾಯಸ ಭೋಜನ:  ವಿಟ್ಲ ಪಿಂಡಿ ವಿಶೇಷ ಹಾಲು ಪಾಯಸ ಪ್ರಸಾದ ಸ್ವೀಕಾರಕ್ಕೆ ಭಕ್ತ ಸಮೂಹ ಕಿಕ್ಕಿರಿದು ತುಂಬಿತ್ತು. ರಾಜಾಂಗಣದಲ್ಲಿ ಭಕ್ತರಿಗೆ ಬಡಿಸುವ ಮೂಲಕ ಅನ್ನಸಂತರ್ಪಣೆಗೆ ಪರ್ಯಾಯ ಪಲಿಮಾರು ಶ್ರೀಗಳು ಚಾಲನೆ ನೀಡಿದರು. ಬೆಳಗ್ಗೆ 11ರ ಸುಮಾರಿಗೆ ಪ್ರಾರಂಭಗೊಂಡ ಹಾಲು ಪಾಯಸ ಪ್ರಸಾದ ಭೋಜನ ವಿತರಣೆ ಮಧ್ಯಾಹ್ನ 3ಗಂಟೆವರೆಗೆ ಮುಂದುವರಿಯಿತು. ಸಾವಿರಾರು ಭಕ್ತರು ಹಾಲುಪಾಯಸ, ಲಾಡು, ಉಂಡೆ, ಚಕ್ಕುಲಿ ಸಹಿತ ಮಹಾ ಅನ್ನಸಂತರ್ಪಣೆ ಪ್ರಸಾದ ಸ್ವೀಕರಿಸಿ ಪುನೀತರಾದರು. ಅಷ್ಟಮಿ ವಿಶೇಷ ಪ್ರಸಾದ ಉಂಡೆ, ಚಕ್ಕುಲಿಯನ್ನು ಪ್ರತ್ಯೇಕ ಕೌಂಟರ್‌ಗಳಲ್ಲಿ ವಿತರಿಸಲಾಯಿತು.

ಮೃಣ್ಮಯ ಮೂರ್ತಿಗೆ ಸ್ವರ್ಣರಥದಲ್ಲಿ ಪೂಜೆ :  ಮಧ್ಯಾಹ್ನ 3 ಗಂಟೆಗೆ ಶ್ರೀಕೃಷ್ಣ ಮಠದ ಒಳಭಾಗದಿಂದ ಶ್ರೀ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ತಂದು ಶ್ರೀ ಕೃಷ್ಣ ಮಠದ ಮುಖ್ಯದ್ವಾರದ ಎದುರು ಹೂವಿನಿಂದ ಅಲಂಕರಿಸಲಾದ ಚಿನ್ನದ ರಥದಲ್ಲಿಟ್ಟು ಪಲಿಮಾರು ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಮಂಗಳಾರತಿ ಮೂಲಕ ವಿಟ್ಲಪಿಂಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಭಕ್ತರಿಗೆ ಉಂಡೆ, ಚಕ್ಕುಲಿ ಹಾಗೂ ಲಾಡು ಸಹಿತ ಪ್ರಸಾದವನ್ನು ಸಾಂಕೇತಿಕವಾಗಿ ವಿತರಿಸಿದರು. ಶ್ರೀ ಕೃಷ್ಣ ಮಠದ ಮುಖ್ಯದ್ವಾರದಿಂದ ನವರತ್ನ ರಥದಲ್ಲಿ ಶ್ರೀ ಅನಂತೇಶ್ವರ ಹಾಗೂ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ಮೂರ್ತಿ ಹಾಗೂ ಚಿನ್ನದ ರಥದಲ್ಲಿ ಶ್ರೀ ಕೃಷ್ಣ ಮೃಣ್ಮಯ ಮೂರ್ತಿ ರಥಬೀದಿಯಲ್ಲಿ ಸಾವಿರಾರು ಭಕ್ತರ ನಡುವೆ ವೈಭವದಿಂದ ಸಾಗಿ ಬಂತು.

ಮಧ್ವ ಸರೋವರದಲ್ಲಿ ಜಲಸ್ತಂಭನ:  ಮೆರವಣಿಗೆಯಲ್ಲಿ ಮೊದಲು ನವರತ್ನ ರಥದಲ್ಲಿ ಶ್ರೀ ಆನಂತೇಶ್ವರ ಹಾಗೂ ಶ್ರೀ ಚಂದ್ರಮೌಳೀಶ್ವರ ಮೂರ್ತಿ, ಉತ್ಸವದ ಕೊನೆಯಲ್ಲಿ ಮೃಣ್ಮಯ ಮೂರ್ತಿಯ ಸ್ವರ್ಣರಥ ಮೆರವಣಿಗೆ ಬಂದು ಶ್ರೀ ಕೃಷ್ಣ ಮಠದ ಮುಖ್ಯದ್ವಾರದಲ್ಲಿ ಸಂಪನ್ನಗೊಂಡಿತು. ಶ್ರೀ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ತಂಭನಗೊಳಿಸಲಾಯಿತು. ಅವಭೃತ ಸ್ನಾನದ ಬಳಿಕ ರಾಜಾಂಗಣದಲ್ಲಿ 7 ತಂಡಗಳಿಂದ ನಡೆದ ಹುಲಿವೇಷ ಸ್ಪರ್ಧೆಯನ್ನು ಪಲಿಮಾರು ಶ್ರೀಗಳು ವೀಕ್ಷಣೆ ಮಾಡಿದರು. ಕೃಷ್ಣ ಜಯಂತಿ ಅಂಗವಾಗಿ ವಿಟ್ಲಪಿಂಡಿ ಉತ್ಸವದಲ್ಲಿ ಮುಂಬೈ ಯುವಪ್ರೇರಣಾ ತಂಡದ 175 ಸದಸ್ಯರಿಂದ ಆಲಾರೆ ಗೋವಿಂದ 50 ಅಡಿ ಎತ್ತರದಿಂದ ಮಡಿಕೆ ಒಡೆಯುವ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿತ್ತು.

ಶಿರೂರು ಶ್ರೀಗಳ ನೆನಪಲ್ಲಿ  10 ಸಾವಿರ ಚಕ್ಕುಲಿ ವಿತರಣೆ:  ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ಬ್ರಹ್ಮಗಿರಿ ವತಿಯಿಂದ ವೃಂದಾವನಸ್ಥ ಶಿರೂರು ಮಠದ ಶ್ರೀ ಲಕ್ಷ್ಮೀ ವರ ತೀರ್ಥ ಶ್ರೀಪಾದರ ಸ್ಮರಣಾರ್ಥ ಭಕ್ತರಿಗೆ ಹತ್ತು ಸಾವಿರಕ್ಕೂ ಹೆಚ್ಚು ಉಚಿತ ಚಕ್ಕುಲಿ ಹಾಗೂ ಲಡ್ಡುಗಳನ್ನು ವಿತರಿಸಲಾಯಿತು. ಭಾಸ್ಕರ್ ದೇವಾಡಿಗ ಕುಂಜಿಬೆಟ್ಟು ಉಚಿತವಾಗಿ ನೀಡಿದ್ದರು.