More

    ಶ್ರೀದತ್ತ ಭಾಗವತ ಲೋಕಾರ್ಪಣೆ: ಭಗವಾನ್ ಶ್ರೀ ದತ್ತಾತ್ರೇಯ ಚರಿತೆಯ ಮರುಮುದ್ರಿತ ಮಹಾಕೃತಿ..

    ಬೆಂಗಳೂರು: ಭಗವಾನ್ ಶ್ರೀ ದತ್ತಾತ್ರೇಯ ಅವರ ಕುರಿತು ಬೀದರ್ ಜಿಲ್ಲೆಯ ಸಾಹಿತಿ ಹಣವಂತ ವಲ್ಲೇಪುರ (ಹಂಶಕವಿ) ಅವರು ರಚಿಸಿರುವ ‘ಶ್ರೀ ದತ್ತ ಭಾಗವತ’ ಮರುಮುದ್ರಿತ ಮಹಾಕೃತಿಯನ್ನು ಬೆಂಗಳೂರಿನ ದಿಗ್ವಿಜಯ ಸುದ್ದಿವಾಹಿನಿ ಕಚೇರಿಯಲ್ಲಿ ಸೋಮವಾರ ರಾಜಗುರು ದ್ವಾರಕಾನಾಥ್, ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಲೋಕಾರ್ಪಣೆ ಮಾಡಿದರು.

    ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ ಮಾತನಾಡಿ, ಸಂಸ್ಕಾರ ಇಲ್ಲದ ಭಾಷೆ ಮತ್ತು ಜೀವನ ಸ್ಮಶಾನವಿದ್ದಂತೆ. ಇಂದಿನ ನಮ್ಮ ಯುವಪೀಳಿಗೆಗೆ ಗುರಿ ಎಂಬುದಿಲ್ಲ. ತಾವು ದುಡಿಯುತ್ತಿರುವುದು ಏಕೆ ಎಂಬುದೂ ತಿಳಿದಿಲ್ಲ. ಹಾಗಾಗಿ ಈ ಎಲ್ಲವನ್ನು ತಿಳಿಯಲು ಧರ್ಮಗ್ರಂಥಗಳ ಪಠಣ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲ ಶಾಲೆಗಳಲ್ಲೂ ವೃತ್ತಿಪರ ಕೌಶಲದ ಜತೆಗೆ ವೇದವನ್ನೂ ಕಲಿಸಬೇಕು. ಅಂದರೆ ಹಣ ಸಂಪಾದಿಸುವುದನ್ನು ಹೇಳಿಕೊಡುವುದರ ಜತೆಗೆ ಅದನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನೂ ಕಲಿಸಬೇಕು. ಅದಕ್ಕಾಗಿ ಸಂಗೀತ, ಯೋಗದ ರೀತಿಯಲ್ಲಿ ವೇದಾಧ್ಯಯನವನ್ನು ಕಡ್ಡಾಯಗೊಳಿಸಬೇಕು ಎಂದು ಹೇಳಿದರು.

    ಜಗತ್ತನ್ನು ಗುರುವೆಂದು ಹೇಳಿದ ದತ್ತನಿಗೇ 24 ಗುರುಗಳು. ಯಾರು ತನ್ನನ್ನು ಅತ್ರೆಗೆ ದಾನ ಮಾಡುವನೋ ಆತನೇ ದತ್ತ. ಅವನಿಗೆ ಹೆಸರಿಲ್ಲ, ರೂಪವಿಲ್ಲ. ಅವನೇ ಶಿವ. ಶಿವ ಲಿಂಗ ಯಾವ ಕಡೆ ನೋಡಿದರೂ ಒಂದೇ ರೀತಿ ಕಾಣುತ್ತದೆ. ಅದಕ್ಕೆ ಒಂದು ರೂಪ ತಂದುಕೊಟ್ಟವನೇ ದತ್ತಾತ್ರೇಯ. ಶ್ರೀ ದತ್ತ ಶ್ರೀಪಾದ ಚರಿತ್ರೆಯಲ್ಲಿ ಬರುವ 6 ಸಿದ್ಧಮಂಗಳ ಸ್ತೋತ್ರಗಳನ್ನು ಶ್ರವಣ ಮಾಡಿದರೆ ಒಳಿತಾಗುತ್ತದೆ ಎಂದು ದತ್ತಾತ್ರೇಯ ಸ್ಮರಣೆಯ ಮಹತ್ವ ತಿಳಿಸಿದರು.

    ನಿರ್ಗಣ ಆಗಿದ್ದು ಸಗುಣ ಆಗಿ ಬಂತು ನೋಡ ಎಂಬ ಮಾತಿದೆ. ಅದರಂತೆ ಎಲ್ಲ ಗುಣವನ್ನು ಮೀರಿದ್ದು ನಿರ್ಗಣ ಅದು ಸಗುಣ ಆದಾಗ ದತ್ತ ಎಂಬ ಹೆಸರು ಬಂತು. ಅವನಲ್ಲಿ ಒಳಿತು ಕೆಟ್ಟದ್ದು ಎರಡೂ ಉಂಟು. ಅದು ನಮ್ಮಲ್ಲಿರುವ ಜ್ಞಾನ ಮತ್ತು ಅಜ್ಞಾನ. ಶಿವನಲ್ಲಿ ಮೂರು ಕಣ್ಣುಗಳುಂಟು. ಅವುಗಳಲ್ಲಿ ಒಂದು ಸತ್ಯ ಮತ್ತೊಂದು ಅಸತ್ಯ. ನಾವೇ ಸೃಷ್ಟಿಸಿಕೊಂಡಿರುವುದು. ಈ ಎರಡನ್ನೂ ಮೀರಿದ್ದು ಒಂದು ಕಣ್ಣಿದೆ. ಅದು ಒಳಗಿನ ಬೆಳಕು. ಅದುವೇ ಅಂತರ್ ಚಕ್ಷು. ಅದನ್ನು ಅರಿಯಬೇಕು. ಆ ಕಾರ್ಯ ಇಂದು ಆಗಿದೆ ಎಂದರು. ಭಾರತಾಂಬೆಯನ್ನು ರಕ್ಷಿಸಲು ಯೋಧರು ಪ್ರಾಣತ್ಯಾಗ ಮಾಡಿದ ಈ ದಿನ ಸ್ಮರಣೀಯ. ಅವರ ತ್ಯಾಗ ಬಲಿದಾನದಿಂದಾಗಿ ದೇಶದ ಜನ ನೆಮ್ಮದಿಯಾಗಿ ಅನ್ನ ತಿನ್ನಲು ಸಾಧ್ಯವಾಗಿದೆ ಎಂದು ಯೋಧರ ಕೊಡುಗೆಯನ್ನು ವಿನಯ್ ಗುರೂಜಿ ಸ್ಮರಿಸಿದರು.

    ವಿಜಯ ಸಂಕೇಶ್ವರ ದಂಪತಿಯಲ್ಲಿರುವ ಶ್ರದ್ಧೆ ಹಾಗೂ ಸಮಯ ನಿಷ್ಠೆ, ಅವರ ಮಕ್ಕಳಲ್ಲೂ ಕಂಡಿದ್ದೇನೆ. ಸನಾತನ ಧರ್ಮ ಹಾಗೂ ದೇಶ ಭಕ್ತಿ ಅವರ ರಕ್ತದ ಕಣಕಣದಲ್ಲೂ ಹರಿದಾಡುತ್ತಿದೆ ಎಂದರು. ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ, ಶಿವ ಸಂಕೇಶ್ವರ ಉಪಸ್ಥಿತರಿದ್ದರು.

    ಎಲ್ಲರೂ ದತ್ತರ ಬಗ್ಗೆ ತಿಳಿಯಬೇಕು: ಹಣವಂತ ವಲ್ಲೇಪುರ ಮಾತನಾಡಿ, ವೇದ ಬಲ್ಲವನಲ್ಲ, ಶಾಸ್ತ್ರಗಳನ್ನು ಅರಿತಿಲ್ಲ, ಪುರಾಣ ಪೂರ್ತಿಗಳೆಲ್ಲ ನನಗೇನು ತಿಳಿದಿಲ್ಲ. ನಿನ್ನ ಹೊರತು ನನಗಿಲ್ಲ ಬೇರೇನೂ ಕಾಣುತ್ತಿಲ್ಲ, ನೀನರುಹಿದಂತೆ ಬರೆದೆ ಎನ್ನ ದತ್ತ ದಿಗಂಬರ… ಎಂದು ಹೇಳುತ್ತ ‘ಶ್ರೀ ದತ್ತ ಭಾಗವತ’ ಸಂಪುಟ ರಚನೆಗೆ ಪ್ರೇರಣೆ ನೀಡಿದವರು ಹಾಗೂ ಅದಕ್ಕೆ ನಡೆಸಿದ ಅಧ್ಯಯನ ಕುರಿತು ವಿವರಿಸಿದರು. ದತ್ತ ಭಾಗವತದ ಈ ಕೃತಿ 53 ಭಾಷೆಗಳಲ್ಲೂ ಮೂಡಿಬರಬೇಕು. ಜಗತ್ತಿನ ಎಲ್ಲರೂ ದತ್ತರ ಬಗ್ಗೆ ತಿಳಿಯಬೇಕು. ಅದಕ್ಕಾಗಿ ವಿಶ್ವಾದ್ಯಂತ ನೆಲೆಸಿರುವ ದತ್ತ ಭಕ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

    ಗದಗದಲ್ಲಿ ಸಂಕೇಶ್ವರ ಪ್ರಿಂಟರ್ಸ್​ನಲ್ಲೇ ಮುದ್ರಣ: ಬೆಂಗಳೂರು ಮತ್ತು ಶಿವಕಾಶಿಯಲ್ಲಿ ಕಡಿಮೆ ಬೆಲೆ ಹಾಗೂ ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳನ್ನು ಮುದ್ರಿಸಲಾಗುತ್ತದೆ ಎಂಬ ಭಾವನೆ ಇದೆ. ಆದರೆ, ಗದಗದಲ್ಲಿನ ಸಂಕೇಶ್ವರ ಪ್ರಿಂಟರ್ಸ್ ಪ್ರೖೆವೇಟ್ ಲಿಮಿಟೆಡ್ ಸಂಸ್ಥೆಯಲ್ಲೂ ಇಂತಹ ಸೌಲಭ್ಯ ಹಾಗೂ ಸೇವೆ ದೊರೆಯುತ್ತದೆ. ‘ಶ್ರೀ ದತ್ತ ಭಾಗವತ’ ಪುಸ್ತಕವನ್ನು ಈ ಸಂಸ್ಥೆಯ ಮುದ್ರಣಾಲಯದಲ್ಲೇ ಅಚ್ಚುಕಟ್ಟಾಗಿ ಮುದ್ರಿಸಿರುವುದು ಇದಕ್ಕೆ ಸಾಕ್ಷಿ.

    ಪುಸ್ತಕಕ್ಕೆ ಸಂಪರ್ಕಿಸಿ

    ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020.

    ದೂ.ಸಂ.-0836 4252498, ಮೊ.ಸಂ.: 96208 23802, 94481 10034.

    ವೆಬ್​ಸೈಟ್: https://sahityaprakashan.com

    ಧರ್ಮಪ್ರಚಾರದಲ್ಲಿ ತೊಡಗಿಸಿಕೊಳ್ಳೋಣ

    ಮಹಾನ್ ತಪಸ್ವಿಗಳು ಕಟ್ಟಿಕೊಟ್ಟಿರುವ ಈ ದೇಶವನ್ನು ಧರ್ಮ ಪ್ರಚಾರ ಮಾಡುವ ಮೂಲಕ ಉಳಿಸಿಕೊಳ್ಳಬೇಕಿದೆ ಎಂದು ರಾಜಗುರು ಬಿ.ಎಸ್. ದ್ವಾರಕಾನಾಥ್ ಗುರೂಜಿ ಹೇಳಿದರು. ಅನ್ಯಾಯ, ಅಧರ್ಮ ಹೋಗುವ ಕಾಲ ಹತ್ತಿರ ಬಂದಿದೆ. 1972ರ ಸಮಯದಲ್ಲಿ ಕಲ್ಕಿ ಬರುತ್ತಾನೆ ಎಂದು ಹೇಳುತ್ತಿದ್ದರು. ಅದರಂತೆ 18ನೇ ಅವತಾರದಲ್ಲಿ ರಾಮನಾಗಿ,19ನೇ ಅವತಾರದಲ್ಲಿ ಶ್ರೀಕೃಷ್ಣನಾಗಿ ಅವತರಿಸಿದ್ದ ದತ್ತಾತ್ರೇಯರು 24ನೇ ಅವತಾರದಲ್ಲಿ ಕಲ್ಕಿ ಆಗಿ ಬರಲಿದ್ದಾರೆ. ಸಾಧು-ಸಂತರು, ಸನ್ಯಾಸಿಗಳು ಈ ಲೋಕಕ್ಕೆ ಬರುತ್ತಾರೆ. ದಾನ-ಧರ್ಮಗಳನ್ನು ಮಾಡುತ್ತಾರೆ. ಹಾಗೆಯೇ ಅವರೆಲ್ಲರೂ ಸಮಾಧಿ ಆಗುತ್ತಾರೆ. ಆದರೆ, ದತ್ತಾತ್ರೇಯರು ಸಮಾಧಿ ಆದ ದಾಖಲೆಯೇ ಇಲ್ಲ. ಇಂತಹ ಮಹಾಪುರುಷರು ಲೋಕಕಲ್ಯಾಣಕ್ಕಾಗಿ ಅವತರಿಸುತ್ತಾರೆ ಎಂದರು.

    ದತ್ತನ ಅವತಾರ ಹಿಮಾಲಯದಲ್ಲಿ ಆಗಿದೆ. ಆತ ಕಲ್ಕಿ ಆಗಿ ಬರಲಿದ್ದಾನೆ ಎಂಬುದನ್ನು ಈ ಪುಸ್ತಕದಲ್ಲಿ ಸೊಗಸಾಗಿ ಲೇಖಕರು ಕಟ್ಟಿಕೊಟ್ಡಿದ್ದಾರೆ. ದತ್ತಾತ್ರೇಯನ ಜಪ ಮಾಡಿದರೆ ಯಾವ ಸಮಸ್ಯೆಗಳೂ ಹತ್ತಿರ ಸುಳಿಯುವುದಿಲ್ಲ. ದತ್ತನ ಕುರಿತಾದ ಈ ಮಹಾನ್ ಗ್ರಂಥವನ್ನು ಮನೆಯಲ್ಲಿ ಇಟ್ಟರೆ ಸಾಕು, ಯಾವುದೇ ರೋಗ ಹತ್ತಿರ ಸುಳಿಯುವುದಿಲ್ಲ. ವೈದ್ಯರು, ಔಷಧದ ಅಗತ್ಯ ಬೀಳುವುದಿಲ್ಲ ಎಂದು ದತ್ತನ ಆರಾಧನೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ತಮ್ಮ ತಂದೆ ಗುಣಮುಖರಾಗಿದ್ದನ್ನು ಹೇಳುತ್ತಾ ದತ್ತಾತ್ರೇಯರ ಪ್ರಾರ್ಥನೆಯ ಫಲಗಳ ಕುರಿತು ವಿವರಿಸಿದರು.

    ಸಂಕೇಶ್ವರರಿಗೆ ಶ್ಲಾಘನೆ

    ಜೀವನದಲ್ಲಿ ಶಿಸ್ತು ರೂಢಿಸಿಕೊಂಡು ಉದ್ಯಮ, ಮಾಧ್ಯಮ, ರಾಜಕೀಯ ಸೇರಿ ಎಲ್ಲ ಕ್ಷೇತ್ರದಲ್ಲೂ ಡಾ. ವಿಜಯ ಸಂಕೇಶ್ವರ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತಮ್ಮ ಸ್ವಂತ ಶಕ್ತಿಯಿಂದ ಮುಂದೆ ಬಂದಿದ್ದಾರೆ. ಇದೀಗ ದೇವರ ಅನುಗ್ರಹದಿಂದ ಈ ಗ್ರಂಥದ ಮರುಮುದ್ರಣ ಮಾಡಿಸಿ ಕಡಿಮೆ ಬೆಲೆಯಲ್ಲಿ ಜನರಿಗೆ ತಲುಪಿಸುವ ಮಹಾನ್ ಕಾರ್ಯ ಮಾಡಿದ್ದಾರೆ ಎಂದು ದ್ವಾರಕಾನಾಥ್ ಶ್ಲಾಘಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts