ಒಂಬತ್ತು ವರ್ಷಗಳಿಂದ ಮಾಡೆಲಿಂಗ್ನಲ್ಲಿರುವ ಗ್ಲಾಮರ್ ಗೊಂಬೆ ಸಾರಾ ಹರೀಶ್, ಸೂರ್ಯನಂತೆ ಇದೀಗ ಪಥ ಬದಲಾಯಿಸಿದ್ದಾರೆ. ಅಂದರೆ ಅವರೀಗ ಮಾಡೆಲಿಂಗ್ನಿಂದ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿರುವುದರಿಂದ ಅವರ ವೃತ್ತಿಜೀವನದಲ್ಲಿ ಸಂಕ್ರಮಣದ ಜತೆಗೆ ಸಿನಿಕ್ರಮಣವೂ ಆಗಿದೆ. ಅದಕ್ಕೆ ಕಾರಣವಾಗಿರುವ ಅವರ ಅಭಿನಯದ ಮೊದಲ ಸಿನಿಮಾ ‘ಶ್ರೀಭರತ ಬಾಹುಬಲಿ’ ಸಂಕ್ರಾಂತಿ ಬೆನ್ನಿಗೇ (ಜ. 17) ಬಿಡುಗಡೆ ಆಗುತ್ತಿದೆ. ಹೀಗೆ 2020ರಲ್ಲಿನ ಹೊಸ ಕರಿಯರ್ ಕುರಿತು ವಿಜಯವಾಣಿ ಜತೆ ಸಾರಾ ಹಂಚಿಕೊಂಡಿರುವ ಅನಿಸಿಕೆಗಳ ಸಾರಾಂಶ ಇಲ್ಲಿದೆ.
‘ಒಂದು ಸಿನಿಮಾ ಅಲ್ವಾ, ಟ್ರೖೆ ಮಾಡೋಣ ಎಂದುಕೊಂಡು ಬಂದೆ. ಆದರೆ ಒಂದೇ ಸಿನಿಮಾದಿಂದ ಮುಂದೆ ಇನ್ನೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಬೇಕು ಅನಿಸುತ್ತಿದೆ..’ ಇದು ತಮ್ಮ ವೃತ್ತಿಬದುಕಿಗೆ ತಿರುವು ಕೊಟ್ಟ ‘ಶ್ರೀಭರತ ಬಾಹುಬಲಿ’ ಸಿನಿಮಾ ಕುರಿತು ಸ್ಯಾಂಡಲ್ವುಡ್ನ ನವನಟಿ ಸಾರಾ ಹರೀಶ್ ವ್ಯಕ್ತಪಡಿಸಿರುವ ಅಭಿಪ್ರಾಯ. ಒಂಬತ್ತು ವರ್ಷಗಳಿಂದ ಮಾಡೆಲಿಂಗ್ ಹಾಗೂ ಜಾಹೀರಾತು ಜಗತ್ತಿನಲ್ಲಿ ತೊಡಗಿಸಿಕೊಂಡಿರುವ ಸಾರಾಗೆ ಈ ‘ಭರತ-ಬಾಹುಬಲಿ’ ಈಗ ಚಿತ್ರರಂಗದ ಕುರಿತು ವಿಶೇಷ ಆಸಕ್ತಿ ಮೂಡಿಸಿಬಿಟ್ಟಿದ್ದಾರೆ. ‘ನಾನು ಅಭಿನಯಿಸಿದ್ದ ಟಿವಿ ಜಾಹೀರಾತೊಂದನ್ನು ನೋಡಿದ ‘ಶ್ರೀ ಭರತ ಬಾಹುಬಲಿ’ ಸಿನಿಮಾದ ನಿರ್ದೇಶಕರು ಒಂದು ದಿನ ಆಡಿಷನ್ಗೆ ಕರೆದರು. ಹಾಗೇ ಹೋಗಿ ಆಡಿಷನ್ ಕೊಟ್ಟಾಗ ನನ್ನ ಇಂಗ್ಲಿಷ್ ಅವರಿಗೆ ಇಷ್ಟವಾಗಿ ಸಿನಿಮಾಗೆ ಆಯ್ಕೆ ಮಾಡಿಕೊಂಡರು’ ಎನ್ನುತ್ತ ತಾವು ಈ ಚಿತ್ರತಂಡವನ್ನು ಸೇರಿಕೊಂಡ ಬಗ್ಗೆ ತಿಳಿಸಿದರು ಸಾರಾ. ‘ಈ ಚಿತ್ರದಲ್ಲಿ ನಾನು ‘ಶ್ರೀ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನಿಲ್ಲಿ ಅನಿವಾಸಿ ಭಾರತೀಯ (ಎನ್ಆರ್ಐ) ಯುವತಿ. ಆಕೆ ಪುನರ್ಜನ್ಮದ ಜಾಡು ಹಿಡಿದು ಭಾರತಕ್ಕೆ ಬರುತ್ತಾಳೆ, ಇಲ್ಲಿ ಅವಳಿಗೆ ಭರತ-ಬಾಹುಬಲಿ ಸಿಗುತ್ತಾರೆ’ ಎಂದು ತಮ್ಮ ಪಾತ್ರದ ಬಗ್ಗೆ ಅವರು ಮಾಹಿತಿ ನೀಡಿದರು.
ಮೊದಲ ಸಿನಿಮಾನೇ ಸೂಪರ್
ಸಾಮಾನ್ಯವಾಗಿ ಕನ್ನಡ ಸಿನಿಮಾಗಳಲ್ಲಿ ಹೀರೋಯಿನ್ಗಿಂತ ಹೀರೋಗೇ ಹೆಚ್ಚು ಸ್ಕೋಪ್ ಇರುತ್ತದೆ. ಆದರೆ ಈ ಸಿನಿಮಾದಲ್ಲಿ ಹಾಗಿರದ್ದರಿಂದ ಸಾರಾ ತುಂಬ ಖುಷಿಯಾಗಿದ್ದಾರೆ. ‘ಇದು ನನ್ನ ಮೊದಲ ಸಿನಿಮಾ ಆಗಿದ್ದರೂ ನನ್ನ ಪಾತ್ರಕ್ಕೆ ಇಲ್ಲಿ ಪ್ರಾಮುಖ್ಯತೆ ಇದೆ. ಕಥೆಯಲ್ಲಿ ನನ್ನ ಪಾತ್ರ ಮಹತ್ವದ್ದು. ಅದರಲ್ಲೂ ಇಡೀ ಸಿನಿಮಾದಲ್ಲಿ ನನಗೆ ಸ್ಕ್ರೀನ್ಸ್ಪೇಸ್ ಸಿಕ್ಕಿದೆ. ಮೊದಲ ಸಿನಿಮಾದಲ್ಲೇ ಇಷ್ಟೆಲ್ಲ ಸಿಕ್ಕಿರುವುದರಿಂದ ಈ ಸಿನಿಮಾ ಸೂಪರ್ ಎನಿಸುತ್ತಿದೆ’ ಎಂಬ ಸಂತೋಷ ಸಾರಾ ಅವರದು. ಇನ್ನು ಅವರು ಮೊದಲ ಸಿನಿಮಾದಲ್ಲಿನ ಶೂಟಿಂಗ್ ಅನುಭವ ಕೂಡ ವಿಶೇಷವಾಗಿತ್ತು ಎನ್ನುತ್ತಾರೆ. ‘ಶೂಟಿಂಗ್ ಅನುಭವ ಅದ್ಭುತ. ಹೊಸಬಳು ಎನ್ನುವಂತೆ ಯಾರೂ ನೋಡಿಕೊಳ್ಳಲಿಲ್ಲ. ಉಡುಗೆ ವಿಷಯದಲ್ಲೂ ನನಗೆ ಸ್ವಾತಂತ್ರ್ಯವಿತ್ತು. ಸಂಭಾಷಣೆ ಕ್ಲಿಷ್ಟವಾಗಿದ್ದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಕೊಟ್ಟಿದ್ದರು. ಎಲ್ಲಕ್ಕಿಂತ ಹೆಚ್ಚು ಟೀಮ್ ಚೆನ್ನಾಗಿದೆ’ ಎಂಬ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಸಾರಾ.
ನಂಬಲಿಕ್ಕೇ ಆಗುತ್ತಿಲ್ಲ!
ಸಾರಾಗೆ ಮೊದಲಿನಿಂದಲೂ ಗ್ಲಾಮರ್ ಬಗ್ಗೆ ಅತೀವ ಆಸಕ್ತಿ. ಅದೇ ಕಾರಣಕ್ಕೆ ಮಾಡೆಲಿಂಗ್ಗೆ ಬಂದಿರುವ ಅವರಿಗೆ ಈಗ ಸಿನಿಮಾ ಹೆಚ್ಚಿನ ಖುಷಿ ನೀಡುತ್ತಿದೆಯಂತೆ. ‘ಸಾಮಾನ್ಯವಾಗಿ ಎಲ್ಲರಿಗೂ ಗುರುತಿಸಿಕೊಳ್ಳಬೇಕು, ಜನಪ್ರಿಯರಾಗಬೇಕು ಎಂಬ ಆಸೆ ಇರುತ್ತದೆ. ಸಿನಿಮಾದಿಂದಾಗಿ ನನ್ನನ್ನು ಈಗ ಹಲವರು ಗುರುತಿಸುತ್ತಿದ್ದಾರೆ. ಸಂದರ್ಶನ-ಸುದ್ದಿಗಾಗಿ ಮಾತನಾಡಿಸುತ್ತಿದ್ದಾರೆ. ರಸ್ತೆಯಲ್ಲಿ ಸಿನಿಮಾ ಪೋಸ್ಟರ್ಗಳಲ್ಲಿ ನನ್ನ ಫೋಟೋ-ಹೆಸರು ನೋಡುವಾಗ ತುಂಬ ಖುಷಿ ಆಗುತ್ತದೆ. ಈಗಲೂ ಇವೆಲ್ಲ ನಿಜವಾ ಎಂದು ನಂಬಲಿಕ್ಕೇ ಆಗದಷ್ಟು ಅಚ್ಚರಿ ಅಗುತ್ತಿದೆ’ ಎನ್ನುತ್ತಾರೆ ಸಾರಾ. ಈ ಖುಷಿ ಈಗ ಅವರಲ್ಲಿ ಇನ್ನೂ ಹೆಚ್ಚು ಸಿನಿಮಾಗಳನ್ನು ಮಾಡಬೇಕು ಎಂಬ ಆಸೆ ಹುಟ್ಟಿಸಿದೆ. ‘ಸದ್ಯ ನನ್ನ ಮುಂದಿನ ಗಮನವೆಲ್ಲ ಸಿನಿಮಾಗಳ ಮೇಲೆ. ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುತ್ತೇನೆ. ಪಾತ್ರಗಳನ್ನು ಆರಿಸಿಕೊಳ್ಳುವಾಗ ಕಥೆ-ಅಭಿನಯಕ್ಕೆ ಆದ್ಯತೆ ಕೊಡುತ್ತೇನೆ. ಗ್ಲಾಮರ್ ನನಗಿಷ್ಟವಾದರೂ ಕಥೆಗೆ ಅಗತ್ಯವೆನಿಸಿದರೆ, ಆ ಪಾತ್ರ ಮಹತ್ವದ್ದೆನಿಸಿದರೆ ಡಿ-ಗ್ಲಾಮ್ ಪಾತ್ರಗಳನ್ನೂ ಮಾಡುತ್ತೇನೆ’ ಎನ್ನುತ್ತಾರೆ. ‘ಬಾಲ್ಯದಲ್ಲಿ ಒಂದಷ್ಟು ನಾಟಕಗಳಲ್ಲಿ ಅಭಿನಯಿಸಿದ್ದೆ. ಜತೆಗೆ ಮಾಡೆಲಿಂಗ್ನಿಂದಾಗಿ ನನಗೆ ನಟನೆ ಸುಲಭ ಎನಿಸಿತು. ಅಲ್ಲದೆ ಮಾಡೆಲಿಂಗ್ನಿಂದಾಗಿಯೇ ನನಗೆ ಈ ಅವಕಾಶ ಸಿಕ್ಕಿತು. ಹೀಗಾಗಿ ಸಿನಿಮಾ ಜತೆಗೆ ಮಾಡೆಲಿಂಗ್ ಕೂಡ ಮುಂದುವರಿಸಿಕೊಂಡು ಹೋಗುತ್ತೇನೆ’ ಎನ್ನುವ ಸಾರಾ, ‘ಭರತ-ಬಾಹುಬಲಿ’ ಬಳಿಕ ಮತ್ತಷ್ಟು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಅದೊಂದೇ ಪಶ್ಚಾತ್ತಾಪ
ಕಾಲೇಜು ದಿನಗಳಿಂದಲೇ ಮಾಡೆಲಿಂಗ್ನಲ್ಲಿ ತೊಡಗಿಸಿಕೊಂಡಿರುವ ಸಾರಾ, ಒಂಬತ್ತು ವರ್ಷಗಳಿಂದ ಮಾಡೆಲ್ ಆಗಿ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಒಂದು ಹಂತದಲ್ಲಿ ನನಗೆ ಮಾಡೆಲಿಂಗ್, ಜಾಹೀರಾತು ಏಕತಾನತೆ ಅನಿಸಲಾರಂಭಿಸಿತು. ಏನಾದರೂ ಹೊಸದನ್ನು ಮಾಡಬೇಕು, ಸ್ವಲ್ಪ ಚೇಂಜ್ ಇರಬೇಕು ಎಂದೆನಿಸುತ್ತಿತ್ತು. ಅದೇ ಸಮಯದಲ್ಲಿ ‘ಶ್ರೀಭರತ ಬಾಹುಬಲಿ’ ಆಫರ್ ಸಿಕ್ಕಿದ್ದರಿಂದ ಒಪ್ಪಿದೆ. ಅದಕ್ಕೂ ಮುನ್ನ ಕೂಡ ನನಗೆ ಸಿನಿಮಾ ಆಫರ್ಗಳು ಬಂದಿದ್ದವು. ಆದರೆ ಆಗ ನನಗೆ ನಟಿ ಆಗುವ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಯಾವಾಗ ಈ ಚಿತ್ರದಲ್ಲಿ ನಟಿಸಲು ಆರಂಭಿಸಿದೆನೋ ಆಗ ನಾನೂ ನಟಿಸಬಲ್ಲೆ ಎಂಬ ಆತ್ಮವಿಶ್ವಾಸ ಹೆಚ್ಚಾಯಿತು, ನಟಿ ಆಗಬೇಕು ಎಂಬ ಆಸೆ ಕೂಡ ಬೆಳೆಯಿತು’ ಎನ್ನುವ ಸಾರಾ, ‘ನಾನು ಏಳೆಂಟು ವರ್ಷಗಳ ಹಿಂದೆಯೇ ನಟಿ ಆಗಬೇಕಿತ್ತು. ಆಗ ಬಂದ ಆಫರ್ಗಳನ್ನು ಒಪ್ಪಲಿಲ್ಲವಲ್ಲ ಎಂಬುದಷ್ಟೇ ರಿಗ್ರೆಟ್ಸ್ ಈಗ’ ಎಂದು ಹೇಳುತ್ತಾರೆ.
| ರವಿಕಾಂತ ಕುಂದಾಪುರ, ಬೆಂಗಳೂರು