ಗಣನೀ ಆರ್ಯಿಕಾ ಶ್ರೀಮಾತಾಜಿಯವರಿಗೆ ಅಭಿನಂದನೆ

ಶ್ರವಣಬೆಳಗೊಳ: ಧಾರ್ಮಿಕ ಕ್ಷೇತ್ರಕ್ಕೆ ಪೂಜ್ಯ ಗಣನೀ ಆರ್ಯಿಕಾ ಶ್ರೀಮಾತಾಜಿಯವರ ಕೊಡುಗೆ ಅಪಾರ ಎಂದು ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಆಯೋಜಿಸಿದ್ದ ಸಮಸ್ತ ಪೂಜ್ಯ ಗಣನೀ ಆರ್ಯಿಕಾ ಶ್ರೀಮಾತಾಜಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ನೂತನ ಅಧ್ಯಕ್ಷರ ಸ್ವಾಗತ ಕಾರ್ಯಕ್ರಮದಲ್ಲಿ ಆಶೀರ್ಚನ ನೀಡಿ ಮಾತನಾಡಿದರು.


ಮಹಾಮಸ್ತಕಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿ ಚಾತುರ್ಮಾಸ ಕೈಗೊಂಡಿದ್ದ ಸಮಸ್ತ ಮಾತಾಜಿಯವರು ಧಾರ್ಮಿಕ ಕಲ್ಯಾಣ ಕಾರ್ಯಗಳನ್ನು ನೆರವೇರಿಸಿರುವುದು ನಮ್ಮೆಲ್ಲರ ಪುಣ್ಯ. ಚಾತುರ್ಮಾಸ ಮುಗಿಸಿ ಮಂಗಳ ವಿಹಾರ ಮಾಡುತ್ತಿರುವ ಮಾತಾಜಿ ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಕರ್ನಾಟಕ ಜೈನ ಅಸೋಸಿಯೇಷನ್ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟಗಳು ರಾಜ್ಯದಲ್ಲಿ ಮಾದರಿ ಸಣಘಟನೆಗಳಾಗಿವೆ. ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಂಗಳೂರಿನ ಪದ್ಮಿನಿ ಪದ್ಮರಾಜ್ ಅವರು ರಾಜ್ಯದ ಎಲ್ಲ ಮಹಿಳಾ ಸಂಘಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಸಬೇಕು. ನೊಂದವರ ಉದ್ಧಾರಕ್ಕೆ ಆದ್ಯತೆ ನೀಡಿ ಉತ್ತಮ ಯೋಜನೆಗಳನ್ನು ರೂಪಿಸಿ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.

ಅಭಿನಂದನಾ ಸಮಾರಂಭದಲ್ಲಿ ಪೂಜ್ಯ ಗಣನೀ ಆರ್ಯಿಕಾ ಶ್ರೀಜಿನದೇವಿ ಮಾತಾಜಿ, ಪೂಜ್ಯ ಗಣನೀ ಆರ್ಯಿಕಾ ಶ್ರೀಸರಸ್ವತಿ ಮಾತಾಜಿ, ಪೂಜ್ಯ ಗಣನೀ ಆರ್ಯಿಕಾ ಶ್ರೀವಿಶಾಶ್ರೀ ಮಾತಾಜಿ, ಪೂಜ್ಯ ಗಣನೀ ಆರ್ಯಿಕಾ ಶ್ರೀಸುವಿಧಿಮತಿ ಮಾತಾಜಿ, ಪೂಜ್ಯ ಗಣನೀ ಆರ್ಯಿಕಾ ಶ್ರೀಜಿನವಾಣಿ ಮಾತಾಜಿ, ಪೂಜ್ಯ ಗಣನೀ ಆರ್ಯಿಕಾ ಶ್ರೀಗುರುವಾಣಿ ಮಾತಾಜಿಯವರಿಗೆ ಮಹಿಳಾ ಆದರ್ಶ ಸಾದ್ವಿ ರತ್ನ ಬಿರುದನ್ನು ನೀಡಿ ಅಭಿನಂದನೆ ಸಲ್ಲಿಸಲಾಯಿತು.

ನಂತರ ಆಚಾರ್ಯ ಶ್ರೀವರ್ಧಮಾನ ಸಾಗರ ಮಹಾರಾಜರು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಆಚಾರ್ಯ ಶ್ರೀಸುವಿಧಿಸಾಗರ ಮಹಾರಾಜರು, ಆಚಾರ್ಯ ಶ್ರೀಪಂಚಕಲ್ಯಾಣಕ ಸಾಗರ ಮಹಾರಾಜರು, ಆಚಾರ್ಯ ಶ್ರೀಸುದೇಶಸಾಗರ ಮಹಾರಾಜರು, ಆಚಾರ್ಯ ಶ್ರೀತೀರ್ಥನಂದಿಸಾಗರ ಮಹಾರಾಜರು, ಆಚಾರ್ಯ ಶ್ರೀಶ್ರೇಯಸಾಗರ ಮಹಾರಾಜರು ಹಾಗೂ ಮುನಿ ವೃಂದದವರು ಪಾವನ ಸಾನ್ನಿಧ್ಯ ವಹಿಸಿದ್ದರು. ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಶೀಲಾ ಅನಂತರಾಜ್ ಇದ್ದರು.