ಪಂಚಪೀಠ ಜಗದ್ಗುರುಗಳ ಶ್ರಾವಣ ಪೂಜಾನುಷ್ಠಾನ

ವೀರಶೈವ ಪರಂಪರೆಯ ಮೂಲ ಗುರುಪೀಠಗಳ ಜಗದ್ಗುರು ಪಂಚಪೀಠಾಧೀಶ್ವರರು ಶ್ರಾವಣದಲ್ಲಿ ಒಂದು ತಿಂಗಳ ಕಾಲ ವಿಶೇಷ ಪೂಜೆ, ಅನುಷ್ಠಾನ, ಪ್ರವಚನಗಳನ್ನು ನಡೆಸುತ್ತಾರೆ. ಶ್ರಾವಣಮಾಸದ ಒಂದು ತಿಂಗಳ ಪರ್ಯಂತ ಒಂದೇ ಸ್ಥಳದಲ್ಲಿದ್ದು ಅನುಷ್ಠಾನ ಕೈಗೊಳ್ಳುತ್ತಾರೆ. ಪೀಠದ ಶಾಖಾಮಠಗಳ ಶಿವಾಚಾರ್ಯರು ಹಾಗೂ ವಿರಕ್ತಮಠಗಳ ಮಠಾಧೀಶರು ಕೂಡ ಶ್ರಾವಣದಲ್ಲಿ ತಮ್ಮ ತಮ್ಮ ಮಠಗಳಲ್ಲಿ ವಿಶೇಷ ಪೂಜೆ, ಪ್ರವಚನಗಳನ್ನು ಕೈಗೊಂಡು ಭಕ್ತರಲ್ಲಿ ಧರ್ಮಜಾಗೃತಿಯನ್ನು ಮೂಡಿಸುತ್ತಾರೆ.

| ಪ್ರಶಾಂತ ರಿಪ್ಪನ್​ಪೇಟೆ

ಶ್ರಾವಣಮಾಸ ಬಂತೆಂದರೆ ಎಲ್ಲೆಡೆ ವಿಶೇಷ ಧಾರ್ವಿುಕ ಕಾರ್ಯಕ್ರಮಗಳ ಆಚರಣೆಯನ್ನು ಕಾಣುತ್ತೇವೆ. ಸಾಲುಸಾಲು ಪೂಜೆ, ವ್ರತ, ಹಬ್ಬಗಳು ಮೇಲಿಂದ ಮೇಲೆ ನಡೆಯುವ ಅತ್ಯಂತ ಪವಿತ್ರ ಮಾಸ ಎಂಬ ಹೆಗ್ಗಳಿಕೆ ಶ್ರಾವಣಕ್ಕಿದೆ. ತಪಸ್ಸು, ಅನುಷ್ಠಾನ, ವ್ರತಗಳನ್ನು ಆಚರಿಸುವುದಕ್ಕೂ ಈ ಮಾಸ ಪವಿತ್ರ ಎಂಬ ಮಾತು ಶಾಸ್ತ್ರಗಳಲ್ಲಿದೆ. ಶ್ರವಣ ಎಂದರೆ ಕೇಳು ಎಂದರ್ಥ. ಶ್ರಾವಣ ಮಾಸದಲ್ಲಿ ಸದಾ ಒಳ್ಳೆಯದನ್ನೇ ಕೇಳಬೇಕು ಎಂಬ ಕಾರಣಕ್ಕೆ ನಮ್ಮ ಹಿರಿಯರು ಪುರಾಣ ಪಠಣ, ಪುಣ್ಯಕಥಾ ಶ್ರವಣ ಇತ್ಯಾದಿ ಪದ್ಧತಿಗಳನ್ನು ರೂಢಿಯಲ್ಲಿ ತಂದಿದ್ದಾರೆ. ಶ್ರಾವಣಮಾಸದಲ್ಲಿ ವೀರಶೈವ ಪರಂಪರೆಯ ಗುರುಗಳು ಪೂಜಾನುಷ್ಠಾನಗಳಿಗೆ ವಿಶೇಷ ಆದ್ಯತೆ ನೀಡುತ್ತಾರೆ.

ಶ್ರೀಮದ್ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ

ಪಂಚಪೀಠಗಳಲ್ಲಿ ಪ್ರಥಮ ಪೀಠವಾದ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ ಎನ್.ಆರ್.ಪುರ ತಾಲೂಕಿನ ಭದ್ರಾನದಿಯ ತಟದಲ್ಲಿ ನೆಲೆಗೊಂಡಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ಱರಿಗೆ ಶಿವಾದ್ವೈತ ಧರ್ಮದರ್ಶನ ಬೋಧಿಸಿದ ತಪೋತಾಣ ಇದಾಗಿದ್ದು ಮಲಯಾಚಲ ಪರ್ವತ ಶ್ರೇಣಿಯಲ್ಲಿ ಶೋಭಿಸುತ್ತಿದೆ. ಶ್ರೀ ಜಗದ್ಗುರು ರೇವಣಸಿದ್ಧರು ಮತ್ತು ಭೂಗರ್ಭಸಂಜಾತ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರು ಮೊದಲ್ಗೊಂಡು 120 ಪರಮಾಚಾರ್ಯರು ಧರ್ಮಪೀಠಾರೋಹಣ ಮಾಡಿದ್ದಾರೆ.

ಪ್ರಸ್ತುತ ಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳು 121ನೇ ಜಗದ್ಗುರುಗಳಾಗಿ ಪೂರ್ವಾಚಾರ್ಯರ ಸತ್ಯಸಂಕಲ್ಪಗಳನ್ನು ಸಾಕಾರಗೊಳಿಸಿದ್ದಾರೆ. ಬಾಳೆಹೊನ್ನೂರು ಧರ್ಮಪೀಠದ ಚಿತ್ರಣವನ್ನೇ ಬದಲಿಸಿದ್ದಾರೆ. ಧರ್ಮ, ಸಾಹಿತ್ಯ, ಸಾಮಾಜಿಕ, ಕೃಷಿ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿಕಾರ್ಯ ಕೈಗೊಂಡ ಶ್ರೇಯಸ್ಸು ಇವರದು. ಪ್ರತಿವರ್ಷ ಶ್ರಾವಣಮಾಸವಿಡೀ ಶ್ರೀಪೀಠದಲ್ಲಿದ್ದು ಇಷ್ಟಲಿಂಗ ಪೂಜಾ ತಪೋನುಷ್ಠಾನ ಮಾಡುತ್ತಿದ್ದಾರೆ. ಇದೇ ಆ. 12ರಿಂದ 27ನೇ ವರ್ಷದ ಶ್ರಾವಣ ಇಷ್ಟಲಿಂಗ ಪೂಜಾ ತಪೋನುಷ್ಠಾನವನ್ನು ಕೈಗೊಳ್ಳಲಿದ್ದಾರೆ.

ಜಗದ್ಗುರುಗಳ ತ್ರಿಕಾಲ ಇಷ್ಟಲಿಂಗ ಪೂಜಾನುಷ್ಠಾನದಲ್ಲಿ ಬೆಳಗ್ಗೆ ಸೇವಾಕರ್ತರು ಹಾಗೂ ಭಕ್ತಾದಿಗಳು ಪಾಲ್ಗೊಳ್ಳಲು ಅವಕಾಶವಿದೆ. ಪ್ರತಿದಿನ ಸಂಜೆ ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರಿಂದ ‘ಶ್ರೀ ಜಗದ್ಗುರು ರೇಣುಕವಿಜಯ’ ಪುರಾಣ ಪ್ರವಚನ ನಡೆಯುತ್ತದೆ. ಆಗಮಿಸುವ ಪಟ್ಟಾಧ್ಯಕ್ಷರು ಹಾಗೂ ವಾಗ್ಮಿಗಳಿಂದ ನುಡಿಸೇವೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ಸೋಮವಾರ ಮತ್ತು ಗುರುವಾರ ರಂಭಾಪುರಿ ಜಗದ್ಗುರುಗಳು ಸಭೆಗೆ ಆಗಮಿಸಿ ಆಶೀರ್ವಾದ ಸಂದೇಶ ನೀಡುವರು.

ಪ್ರತಿನಿತ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ, ಶಕ್ತಿಮಾತೆ ಚೌಡೇಶ್ವರಿಗೆ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಲ ವಿಶೇಷ ಪೂಜೆ ನಡೆಯುವುದು. ಶ್ರಾವಣ ಮೊದಲ ದಿನ ಜಗದ್ಗುರು ರೇಣುಕಾಚಾರ್ಯರಿಗೆ ಬೆಳ್ಳಿ ಕವಚ ಸಮರ್ಪಣೆ ಮಾಡಲಾಗುತ್ತದೆ.

ಆ. 14ರಂದು ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪುಣ್ಯಸ್ಮರಣೋತ್ಸವ ಜರುಗಲಿದ್ದು ಖಾಂಡ್ಯ ಮತ್ತು ಜಾಗರ ಹೋಬಳಿ ಶಿಷ್ಯರು ಪೂಜಾ ದಾಸೋಹ ಸೇವೆ ನಡೆಸುವರು. ಆ. 18ರಂದು ಶ್ರೀಮದ್ರಂಭಾಪುರಿ ಜಗದ್ಗುರು ಪ್ರಸನ್ನರೇಣುಕ ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರ ಲಿಂಗಾಂಗ ಸಾಮರಸ್ಯದ ಪುಣ್ಯಸ್ಮರಣೆ ಜರುಗಲಿದೆ. ಆಗಮಿಸುವ ಭಕ್ತರಿಗೆ ನಿತ್ಯ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.

ಉಜ್ಜಯಿನಿ, ಕೇದಾರ ಜಗದ್ಗುರುಗಳ ಲಿಂಗಾನುಷ್ಠಾನ

ಉಜ್ಜಯಿನಿ ಮತ್ತು ಕೇದಾರ ಜಗದ್ಗುರುಗಳು ಕೂಡ ಶ್ರಾವಣಮಾಸದ ಅಂಗವಾಗಿ ಒಂದು ತಿಂಗಳ ಕಾಲ ವಿಶೇಷ ಪೂಜಾನುಷ್ಠಾನ ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ರಾಜದೇಶಿಕೇಂದ್ರ ಭಗವತ್ಪಾದರು ಉಜ್ಜಯಿನಿ ಪೀಠದಲ್ಲಿ ಒಂದು ತಿಂಗಳ ಅನುಷ್ಠಾನ ಕೈಗೊಂಡಿದ್ದು, ನಿತ್ಯ ಮರುಳಸಿದ್ದೇಶ್ವರಸ್ವಾಮಿಗೆ ರುದ್ರಾಭಿಷೇಕ ಸಹಿತ ಮಹಾಪೂಜೆ ನಡೆಯಲಿದೆ. ಆಗಮಿಸುವ ಭಕ್ತರಿಗೆ ಧರ್ಮಜಾಗೃತಿ ಮೂಡಿಸಲು ಪ್ರವಚನ ನಡೆಸುವ ಜಗದ್ಗುರುಗಳು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ರಾವಲ್ ಪದವಿ ಭೂಷಿತ ಕೇದಾರ ಜಗದ್ಗುರು ಶ್ರೀ ಭೀಮಾಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಮಹಾರಾಷ್ಟ್ರದ ನಾಂದೇಡ್​ನಲ್ಲಿ ತಪೋನುಷ್ಠಾನ ಕೈಗೊಂಡಿದ್ದು, ನಿತ್ಯ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಶ್ರೀಶೈಲ, ಶ್ರೀ ಕಾಶಿ ಜಗದ್ಗುರುಗಳ ಪೂಜಾನುಷ್ಠಾನ

ಪ್ರತಿವರ್ಷದಂತೆ ಶ್ರೀಶೈಲ ಸೂರ್ಯಸಿಂಹಾಸನ ಪೀಠದ ಪ್ರಸ್ತುತ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಒಂದು ತಿಂಗಳ ಪರ್ಯಂತ ಶ್ರೀಶೈಲ ಕ್ಷೇತ್ರದಲ್ಲಿ ಲಿಂಗಾನುಷ್ಠಾನ ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆ. 15ರಿಂದ ಆರಂಭವಾಗುವ ಕಾರ್ಯಕ್ರಮಗಳು ಸೆ. 9ಕ್ಕೆ ಸಂಪನ್ನಗೊಳ್ಳಲಿವೆ. ನಿತ್ಯ ಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಸಂಜೆ ಜೈನಾಪುರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳಿಂದ ಪುರಾಣ ಪ್ರವಚನ ನಡೆಯಲಿದೆ. ಆ. 19ರಂದು ಕನ್ನಡದ ಪ್ರಸಿದ್ಧ ದ್ಯಾಮಪುರದ ಚನ್ನಕವಿ ವಿರಚಿತ ಮಲ್ಲಮ್ಮ ಪುರಾಣ ಕೃತಿಯ ತೆಲುಗು ಅನುವಾದ ಕೃತಿ ಲೋಕಾರ್ಪಣೆಗೊಳ್ಳಲಿದೆ. ಆ. 23ರಂದು ಜಂಗಮವಟುಗಳಿಗೆ ಅಯ್ಯಾಚಾರ ಲಿಂಗದೀಕ್ಷೆ ಕಾರ್ಯಕ್ರಮ ನಡೆಯಲಿದೆ. ಸೆ. 5 ಮತ್ತು 6ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಶ್ರಾವಣಮಾಸದ ವಿಶೇಷವೇ ಪೂಜೆ ಹಾಗೂ ಪ್ರವಚನ. ಪ್ರವಚನಕ್ಕೆ ದೇಶದಲ್ಲೇ ಪ್ರಸಿದ್ಧವಾಗಿರುವ ಶ್ರೀ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಪೂಜೆ ಮತ್ತು ಪ್ರವಚನವು ರಾಯಚೂರು ಜಿಲ್ಲೆ ಲಿಂಗಸುಗೂರಿನ ಈಶ್ವರ ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ. ಅದ್ವೈತ ಪರಂಪರೆಯ ಸಾರ್ವಭೌಮ ಶ್ರೀ ಸಿದ್ಧಾರೂಢರ ಗುರುಸ್ಥಾನವಾದ ಭೂಪುರ ಮಠದ ಶ್ರೀ ಗಜಗಂಡ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಆ. 15ರಿಂದ ಆರಂಭವಾಗಿ ಸೆ. 9ಕ್ಕೆ ಸಂಪನ್ನವಾಗಲಿದೆ. ಪ್ರತಿನಿತ್ಯ ಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಸಂಜೆ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ನೆರವೇರಲಿದೆ. ನಡುವೆ ಲಿಂಗಸುಗೂರು ಸೀಮೆಯ 60 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ರೈತರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯಕ್ರಮವನ್ನು ಶ್ರೀಗಳು ಹಮ್ಮಿಕೊಂಡಿದ್ದಾರೆ.

ವಿವಿಧ ಶಿವಾಚಾರ್ಯರ ಅನುಷ್ಠಾನಗಳು

ನಾಡಿನ ವಿವಿಧ ಮಠಗಳ ಶಿವಾಚಾರ್ಯರೂ ಶ್ರಾವಣದಲ್ಲಿ ವಿಶೇಷ ಪೂಜೆ ಪ್ರವಚನಗಳನ್ನು ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಭಕ್ತರ ಮನೆಯಿಂದ ಮನೆಗೆ ಶಿವಾನುಭವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಶ್ರಾವಣಮಾಸದ ಅಂಗವಾಗಿ ವಿಶೇಷ ಪೂಜೆ ಹಾಗೂ ನಿತ್ಯ ಪ್ರವಚನ ಹಮ್ಮಿಕೊಂಡಿದ್ದಾರೆ. ಶಿವಗಂಗೆ, ನಾಗಲಾಪುರ, ರಾಜಾಪುರ, ಸಿಂಧನೂರ, ಮಳಲಿಮಠ ಸೇರಿದಂತೆ ನಾಡಿನ ನೂರಾರು ಮಠಗಳ ಮಠಾಧೀಶರು ಶ್ರಾವಣಮಾಸದ ವಿಶೇಷ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ.

Leave a Reply

Your email address will not be published. Required fields are marked *