ಕಿಸ್ಸಿಂಗ್ ದೃಶ್ಯದಲ್ಲಿ ನಟಿಸ್ತೀರಾ ಎಂಬ ಪ್ರಶ್ನೆಗೆ ಶ್ರದ್ಧಾ ಶ್ರೀನಾಥ್​ ಕೊಟ್ಟ ಉತ್ತರ ಹೀಗಿತ್ತು…

ಬಣ್ಣದ ಲೋಕದಲ್ಲಿ ಹಂತಹಂತವಾಗಿ ಮೇಲೇರುತ್ತಿದ್ದಾರೆ ನಟಿ ಶ್ರದ್ಧಾ ಶ್ರೀನಾಥ್. ಕನ್ನಡದ ಬಳಿಕ ತಮಿಳಿನಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ಅವರಿಗೆ ಈಗ ಬಾಲಿವುಡ್​ನಲ್ಲೂ ವೇದಿಕೆ ಸಜ್ಜಾಗಿದೆ. ಹಿಂದಿಯಲ್ಲಿ ಶ್ರದ್ಧಾ ನಟಿಸಿದ ಚೊಚ್ಚಲ ಚಿತ್ರ ‘ಮಿಲನ್ ಟಾಕೀಸ್’ ಇಂದು (ಮಾ.15) ವಿಶ್ವಾದ್ಯಂತ ತೆರೆಕಾಣುತ್ತಿದ್ದು, ಅವರಿಗೆ ಜೋಡಿಯಾಗಿ ಅಲಿ ಫಜಲ್ ತೆರೆಹಂಚಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ತಿಗ್ಮಾಂಶು ದುಲಿಯಾ ಆಕ್ಷನ್-ಕಟ್ ಹೇಳಿರುವ ಈ ಸಿನಿಮಾದಲ್ಲಿ ಹಲವು ವಿಶೇಷಗಳಿವೆ. ಅದೆಲ್ಲದರ ಕುರಿತು ಸಿನಿವಾಣಿ ಜತೆ ಶ್ರದ್ಧಾ ಹಂಚಿಕೊಂಡಿರುವ ಮಾತುಗಳು ಇಲ್ಲಿವೆ…

ಮದನ್ ಬೆಂಗಳೂರು

‘ಮಿಲನ್ ಟಾಕೀಸ್’ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದೀರಿ. ಹೇಗನಿಸುತ್ತಿದೆ?

ಪ್ರತಿ ಬಾರಿ ಹೊಸದೊಂದು ಚಿತ್ರರಂಗಕ್ಕೆ ಪ್ರವೇಶ ಪಡೆದಾಗಲೂ ಒಂದಷ್ಟು ನಿರೀಕ್ಷೆಗಳು ಇರುತ್ತವೆ. ಹೊಸ ಜನರು ಪರಿಚಯ ಆಗುತ್ತಾರೆ. ಅವರೆಲ್ಲ ನಮ್ಮನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಕೌತುಕ ಇರುತ್ತದೆ. ಹಾಗಂತ ಖಂಡಿತ ನರ್ವಸ್ ಆಗಿಲ್ಲ. ತುಂಬ ಶಾಂತಚಿತ್ತಳಾಗಿದ್ದೇನೆ, ಖುಷಿಯಾಗಿದ್ದೇನೆ. ಇಷ್ಟವಾದ ಟೀಮ್ ಜತೆ ಕೆಲಸ ಮಾಡಿದ ಸಂತಸ ಇದೆ. ಚಿತ್ರ ಬಿಡುಗಡೆ ಆಗುತ್ತಿರುವುದನ್ನು ಸೆಲೆಬ್ರೆಟ್ ಮಾಡುತ್ತಿದ್ದೇನೆ.

ಬಾಲಿವುಡ್​ನಲ್ಲಿ ನಟಿಸಬೇಕು ಎಂಬುದು ನಿಮ್ಮ ಕನಸಾಗಿತ್ತಾ?

ಕನಸಂತೂ ಖಂಡಿತ ಇರಲಿಲ್ಲ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿ, ನಂತರ ಬಾಲಿವುಡ್​ಗೆ ಹಾರಬೇಕು ಎಂದುಕೊಂಡವಳು ನಾನಲ್ಲ. ಆಫರ್ ಸಿಕ್ಕರೆ ಮಾಡೋಣ ಎಂಬ ಆಲೋಚನೆ ಇತ್ತಷ್ಟೇ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದಿದ್ದರೂ ಒಳ್ಳೆಯ ಸಿನಿಮಾ ಮೂಲಕವೇ ಹಿಂದಿ ಚಿತ್ರರಂಗವನ್ನು ಪ್ರವೇಶಿಸುವ ಅವಕಾಶ ಒದಗಿಬಂದಿದೆ.

ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಬಂದ ಅಲಿ ಫಜಲ್ ಜತೆ ತೆರೆಹಂಚಿಕೊಂಡ ಅನುಭವ ಹೇಗಿತ್ತು?

ನಮ್ಮಿಬ್ಬರ ನಡುವಿನ ಕೆಮಿಸ್ಟ್ರೀ ತುಂಬ ನೈಜವಾಗಿತ್ತು. ಎಷ್ಟೋ ಬಾರಿ ನಮ್ಮ ಸಹ ನಟನ ಜತೆ ನಮಗೆ ಕೆಮಿಸ್ಟ್ರೀ ಸಾಧ್ಯವಾಗದಿದ್ದಾಗ ನಟನೆ ಯಾಂತ್ರಿಕ ಎನಿಸಿಬಿಡುತ್ತದೆ. ಆದರೆ ಅಲಿ ಮತ್ತು ನನ್ನ ನಡುವೆ ಆ ಸಮಸ್ಯೆ ಎದುರಾಗಲಿಲ್ಲ. ಆರಂಭದಲ್ಲೇ ನಾವು ಸ್ನೇಹಿತರಾಗಿಬಿಟ್ಟೆವು. ಅವರು ತುಂಬ ಪ್ರೊಫೆಷನಲ್ ಆಗಿದ್ದಾರೆ. ಹಾಲಿವುಡ್​ನಲ್ಲೂ ನಟಿಸಿ ಬಂದ ಅವರ ಅನುಭವವನ್ನು ತಿಳಿದುಕೊಳ್ಳಲು ನಾನು ಕಾತರಿಸುತ್ತಿದ್ದೆ. ಅದೇ ರೀತಿ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಾನು ಪಡೆದ ಅನುಭವಗಳ ಬಗ್ಗೆ ತಿಳಿದುಕೊಳ್ಳಲು ಅವರು ಹಂಬಲಿಸುತ್ತಿದ್ದರು. ಮಾತನಾಡಲು ನಮ್ಮ ನಡುವೆ ಸಾಕಷ್ಟು ವಿಷಯಗಳಿದ್ದವು.

ನಿರ್ದೇಶಕ ತಿಗ್ಮಾಂಶು ದುಲಿಯಾ ಕಾರ್ಯವೈಖರಿ ಬಗ್ಗೆ ಏನು ಹೇಳುತ್ತೀರಿ?

ಅವರು ಕೆಲಸ ಮಾಡುವ ರೀತಿ ತುಂಬ ವಿಶಿಷ್ಟವಾಗಿದೆ. ಅವರು ಸ್ವತಃ ನಟರಾಗಿರುವುದರಿಂದ ಕಲಾವಿದರನ್ನು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿ ಅವರಿಗೆ ನಿರ್ದೇಶನ ಮಾಡುವುದು ಸುಲಭ ಆಗುತ್ತದೆ. ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯುವ ಮುನ್ನ ಒಂದಷ್ಟು ವಿಷಯಗಳನ್ನು ನಮ್ಮ ಜತೆ ಹಂಚಿಕೊಳ್ಳುತ್ತಾರೆ. ಅವುಗಳನ್ನು ಕೇಳುತ್ತಿದ್ದರೆ ನಾವೇ ಆ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಂತೆ ಅನುಭವ ಆಗುತ್ತದೆ. ಅಂಥ ವಾತಾವರಣವನ್ನು ಸೃಷ್ಟಿಸಿ ನಮ್ಮನ್ನು ಕ್ಯಾಮರಾ ಎದುರು ನಿಲ್ಲಿಸುತ್ತಾರೆ. ಪರಿಣಾಮ, ನಮ್ಮ ನಟನೆ ರಿಯಲಿಸ್ಟಿಕ್ ಆಗಿ ಮೂಡಿಬರಲು ಸಾಧ್ಯವಾಗುತ್ತದೆ.

ಕನ್ನಡ ಮತ್ತು ಹಿಂದಿ ಚಿತ್ರರಂಗದ ನಡುವೆ ನೀವು ಕಂಡ ವ್ಯತ್ಯಾಸಗಳೇನು?

ಹೆಚ್ಚೇನೂ ವ್ಯತ್ಯಾಸ ಇಲ್ಲ. ಕೆಲಸ ಮಾಡುವ ರೀತಿ ಎಲ್ಲೆಡೆಯೂ ಒಂದೇ. ಭಿನ್ನ ಪ್ರಕಾರದ ಸಿನಿಮಾಗಳನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗ ಮಾಡುತ್ತಿದ್ದಾರೆ. ಆದರೆ ಹಿಂದಿಯಲ್ಲಿ ಒಂದು ದಶಕದ ಹಿಂದೆಯೇ ಅಂತಹ ಪ್ರಯೋಗಗಳಾಗಿದ್ದವು. ಬಾಲಿವುಡ್ ಎಂಬುದು ದೊಡ್ಡ ಮಾರುಕಟ್ಟೆ. ಬಜೆಟ್ ಮತ್ತು ಪ್ರೇಕ್ಷಕರ ಸಂಖ್ಯೆ ಹಿರಿದಾಗಿದೆ. ಆ ಸಿನಿಮಾಗಳಿಗೆ ಸಿಗುವ ಚಿತ್ರಮಂದಿರಗಳ ಸಂಖ್ಯೆಯೂ ದೊಡ್ಡದು. ಅದು ಬಿಟ್ಟರೆ ಬೇರೇನೂ ವ್ಯತ್ಯಾಸ ಕಾಣಿಸಿಲ್ಲ.

ಹಿಂದಿ ಭಾಷೆ ನಿಮಗೆ ಎಷ್ಟು ಪರಿಚಿತ? ನಟಿಸೋದು ಕಷ್ಟ ಎನಿಸಲಿಲ್ಲವೇ?

ನಮ್ಮ ತಂದೆ ಆರ್ವಿುನಲ್ಲಿ ಇದಿದ್ದರಿಂದ ಹಿಂದಿ ನನಗೆ ಚೆನ್ನಾಗಿ ಬರುತ್ತದೆ. ಮನೆಯನ್ನು ನಾವು ಕನ್ನಡ ಮಾತನಾಡುವಷ್ಟೇ ಸಹಜವಾಗಿ ಹಿಂದಿಯನ್ನೂ ಬಳಸುತ್ತೇವೆ. ಈ ಚಿತ್ರದ ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ತುಂಬ ಜಾಗೃತವಾಗಿ ಹಿಂದಿ ಮಾತನಾಡುವುದು ಅಭ್ಯಾಸ ಮಾಡಿಕೊಂಡೆ. ಹಾಗಾಗಿ ಕಷ್ಟ ಆಗಲಿಲ್ಲ. ಸಿಂಕ್ ಸೌಂಡ್​ನಲ್ಲಿ ಚಿತ್ರ ತಯಾರಾಗಿದೆ. ಡಬ್ಬಿಂಗ್0 ಅವಶ್ಯಕತೆ ಇರುವ ಕಡೆಗಳಲ್ಲಿಯೂ ನಾನೇ ಧ್ವನಿ ನೀಡಿದ್ದೇನೆ.

ಬಿಟೌನ್​ಗೆ ಹೊಸಬರಾದ ನಿಮಗೆ ಅಲ್ಲಿ ಪರಕೀಯಳು ಎಂಬ ಭಾವ ಕಾಡಿದ್ದುಂಟೆ? ಅಲ್ಲಿ ನಿಮ್ಮನ್ನು ಎಲ್ಲರೂ ಹೇಗೆ ಬರಮಾಡಿಕೊಂಡರು?

ಸೆಟ್​ನಲ್ಲಿ ಮೊದಲ ದಿನದಿಂದ ಶೂಟಿಂಗ್ ಮುಗಿಯುವವರೆಗೆ ಒಮ್ಮೆಯೂ ನಾನು ಹೊರಗಿನವಳು ಎಂಬ ಭಾವ ಕಾಡಲೇ ಇಲ್ಲ. ಅಷ್ಟು ಚೆನ್ನಾಗಿ ನನ್ನನ್ನು ಎಲ್ಲರೂ ನೋಡಿಕೊಂಡರು. ದಕ್ಷಿಣ ಭಾರತದಲ್ಲಿ ಸಿಕ್ಕಷ್ಟೇ ಗೌರವ ಬಾಲಿವುಡ್​ನಲ್ಲೂ ಸಿಕ್ಕಿತು. ಆದರೆ ಪ್ರಚಾರದ ಸಂದರ್ಭದಲ್ಲಿ ಕೆಲವೊಮ್ಮೆ ಅಲ್ಲಿನ ಮಾಧ್ಯಮಗಳ ಎದುರಿನಲ್ಲಿ ಅಪರಿಚಿತಳು ಎಂಬ ಭಾವ ಮೂಡಿತ್ತು. ಮತ್ತೊಂದು ಸಿನಿಮಾ ಮಾಡುವಷ್ಟರಲ್ಲಿ ಎಲ್ಲವೂ ಸರಿ ಹೋಗುತ್ತದೆ ಎನಿಸುತ್ತದೆ.

ನಿಮ್ಮ ಪಾತ್ರದ ಬಗ್ಗೆ ಹೇಳಿ..

ಮೈಥಿಲಿ ಎಂಬ ಪಾತ್ರವನ್ನು ನಿಭಾಯಿಸಿದ್ದೇನೆ. ಆಕೆ ಕಾಲೇಜು ವಿದ್ಯಾರ್ಥಿನಿ. ಮನೆಯಲ್ಲಿ ಮದುವೆ ಫಿಕ್ಸ್ ಮಾಡಿದ್ದಾರೆ. ಅವಳು ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಮದುವೆ ನಡೆಯುತ್ತದೆ. ಆದರೆ ಪಾಸ್ ಆಗುವುದೇ ಅವಳಿಗೆ ಕಷ್ಟದ ಕೆಲಸ. ಅದಕ್ಕಾಗಿ ನಾಯಕನ ಸಹಾಯ ಪಡೆದುಕೊಳ್ಳುತ್ತಾಳೆ. ಈ ಪ್ರಕ್ರಿಯೆಯಲ್ಲಿ ಅವರಿಬ್ಬರ ನಡುವೆಯೇ ಪ್ರೀತಿ ಚಿಗುರುತ್ತದೆ. ಹೀರೋಗೆ ಸಿನಿಮಾ ಬಗ್ಗೆ ಕ್ರೇಝå್ ಇರುತ್ತದೆ. ಇವರಿಬ್ಬರ ಲವ್​ಸ್ಟೋರಿ ಕೂಡ ಫಿಲ್ಮೀ ಸ್ವರೂಪ ಪಡೆದುಕೊಳ್ಳುತ್ತದೆ. ಈ ಎಲ್ಲ ಘಟನೆಗಳು ಸಿಂಗಲ್ ಸ್ಕ್ರೀನ್ ಚಿತ್ರಮಂದಿರದ ಹಿನ್ನೆಲೆಯಲ್ಲಿ ನಡೆಯುತ್ತದೆ.

ಟ್ರೇಲರ್​ನಲ್ಲಿನ ಚುಂಬನ ದೃಶ್ಯಗಳನ್ನು ಕಂಡು ಜನರು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ?

ಒಂದು ಆಕ್ಷನ್ ಸಿನಿಮಾ ಮಾಡಿದಾಗ ‘ಅಯ್ಯೋ ಈ ಚಿತ್ರದಲ್ಲಿ ಆಕ್ಷನ್​ಗೆ ಜಾಸ್ತಿ ಮಹತ್ವ ನೀಡಿದ್ದಾರಪ್ಪ..’ ಎಂದು ಯಾರಾದರೂ ಹೇಳುತ್ತಾರಾ? ಖಂಡಿತ ಇಲ್ಲ. ಲವ್​ಸ್ಟೋರಿ ಸಿನಿಮಾ ಮಾಡಿದ್ದೇವೆ ಎಂದರೆ ಅದರಲ್ಲಿ ರೊಮ್ಯಾನ್ಸ್ ಇದ್ದೇ ಇರುತ್ತದೆ. ಕೆಲವರು ಅದನ್ನು ನೋಡಿ ಯಾಕೆ ಕಣ್ಣರಳಿಸುತ್ತಾರೋ ಗೊತ್ತಿಲ್ಲ. ನಿಜಜೀವನದಲ್ಲಿ ಪ್ರೇಮಿಗಳು ಕಿಸ್ ಮಾಡುವುದಿಲ್ಲವೇ? ಅದನ್ನು ಮುಚ್ಚಿಟ್ಟು ಒಂದು ಪ್ರೇಮಕಥೆಯನ್ನು ಹೇಳುತ್ತೇವೆ ಎಂದರೆ 60ರ ದಶಕದ ರೀತಿ ತೋರಿಸಬೇಕಾಗುತ್ತದೆ. ಕಥೆಗೆ ಅಗತ್ಯ ಇದ್ದರೆ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಲು ನನಗೆ ಯಾವುದೇ ಅಭ್ಯಂತರ ಇಲ್ಲ. ಆದರೆ ಅದನ್ನು ನನಗೆ ಮೊದಲೇ ಹೇಳಿರಬೇಕು. ಕೊನೇ ಕ್ಷಣದಲ್ಲಿ ಇಲ್ಲೊಂದು ಕಿಸ್ಸಿಂಗ್ ದೃಶ್ಯ ಸೇರಿಸುತ್ತೇವೆ ಎಂದರೆ ಅದಕ್ಕೆ ನನ್ನ ಒಪ್ಪಿಗೆ ಇರುವುದಿಲ್ಲ.

ಬಾಲಿವುಡ್​ನಲ್ಲಿ ಬೇರೆ ಅವಕಾಶಗಳು ಬರುತ್ತಿವೆಯೇ?

ಹೌದು, ಮಾತುಕತೆ ನಡೆಯುತ್ತಿದೆ, ಆ ಬಗ್ಗೆ ಮಾಹಿತಿ ನೀಡಲು ಸಮಯ ಬರಬೇಕು. ಸದ್ಯಕ್ಕೆ ಬಾಲಿವುಡ್​ನವರು ಒಂದು ಟ್ರೇಲರ್ ನೋಡಿ ನನ್ನ ಬಗ್ಗೆ ಏನನ್ನೂ ಜಡ್ಜ್ ಮಾಡಲು ಸಾಧ್ಯವಿಲ್ಲ. ‘ಮಿಲನ್ ಟಾಕೀಸ್’ ತೆರೆಕಂಡ ಬಳಿಕ ಯಾವುದು ಸೂಕ್ತ ಆಫರ್ ಎಂಬುದುನ್ನು ನೋಡಿಕೊಂಡು ಒಪ್ಪಿಕೊಳ್ಳುತ್ತೇನೆ.

ಈಗ ಪಂಚಭಾಷಾ ನಟಿ ಕೂಡ ಆಗಿದ್ದೀರಿ…

ಹ್ಹಹ್ಹಹ್ಹ… ಈಗ ತಾನೇ ಎಲ್ಲವೂ ಆರಂಭ ಆಗಿದೆ. ಹೇಳಿಕೊಳ್ಳಲು 5 ಭಾಷೆಯಲ್ಲಿ ಸಿನಿಮಾ ಮಾಡಿದ್ದೇನೆ. ಆದರೆ ಸಾಧಿಸಬೇಕಿರುವುದು ಇನ್ನೂ ತುಂಬ ಇದೆ. ಎಲ್ಲ ಭಾಷೆಯಲ್ಲೂ ದೊಡ್ಡ ಮಟ್ಟದ ಮನ್ನಣೆ ಸಿಕ್ಕರೆ ಪಂಚಭಾಷಾ ನಟಿ ಎಂದು ಕರೆಸಿಕೊಳ್ಳಲು ಹೆಮ್ಮೆ ಎನಿಸುತ್ತದೆ.