ನಾಳೆ ಬಾ ಎನ್ನುವ ಶ್ರದ್ಧಾ ಕಪೂರ್!

ಯಾವುದೋ ಒಂದು ಪ್ರಕಾರಕ್ಕೆ ಸೀಮಿತವಾಗದೆ ಎಲ್ಲ ಬಗೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಶ್ರದ್ಧಾ ಕಪೂರ್ ಈಗ ಹಾರರ್ ಸುಳಿಯಲ್ಲಿ ಸಿಲುಕಿದ್ದಾರೆ. ‘ಸ್ತ್ರೀ’ ಶೀರ್ಷಿಕೆಯ ಹೊಸ ಚಿತ್ರದ ಮೂಲಕ ಅವರು ಪ್ರೇಕ್ಷಕರನ್ನು ಹೆದರಿಸಲು ಬರುತ್ತಿದ್ದಾರೆ. ಪ್ರೇಮಕಥೆ, ನೃತ್ಯಪ್ರಧಾನ, ಸಂಗೀತಪ್ರಧಾನ, ಥ್ರಿಲ್ಲರ್ ಮತ್ತಿತರ ಪ್ರಕಾರದ ಸಿನಿಮಾಗಳಲ್ಲಿ ಕಾಣಿಸಿಕೊಂಡ ಅವರು ಹಾರರ್ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಅಚ್ಚರಿ ಎಂದರೆ ಬಾಲಿವುಡ್​ನ ಈ ಚಿತ್ರದ ಕಥೆಗೂ ಕರ್ನಾಟಕಕ್ಕೂ ದೊಡ್ಡ ಸಂಬಂಧವಿದೆ! ಹೌದು, ನಿರ್ದೇಶಕ ಅಮರ್ ಕೌಶಿಕ್ ಅವರಿಗೆ ‘ಸ್ತ್ರೀ’ ಕಥೆ ಹೊಳೆದಿದ್ದೇ ಕನ್ನಡದ ನೆಲದಲ್ಲಿ ಎಂಬುದು ಅಚ್ಚರಿ. ಕರ್ನಾಟಕದ ಹಲವು ಹಳ್ಳಿಗಳಲ್ಲಿ ಒಂದು ಸುತ್ತು ಹಾಕಿ ಬಂದರೆ ಅಲ್ಲಿನ ಮನೆ ಬಾಗಿಲಿನ ಮೇಲೆ ‘ನಾಳೆ ಬಾ’ ಎಂಬ ಬರಹ ಕಾಣಿಸುತ್ತದೆ. ಅಕ್ಷರಸ್ಥರ ಮನೆ ಬಾಗಿಲುಗಳು ಕೂಡ ಇದಕ್ಕೆ ಹೊರತಲ್ಲ! ಯಾಕೆ ಹೀಗೆ ಎಂದು ಕೇಳಿದರೆ, ‘ರಾತ್ರಿ ವೇಳೆ ದೆವ್ವ ಬಂದು ಪರಿಚಿತರ ಧ್ವನಿಯಲ್ಲಿ ನಮ್ಮನ್ನು ಕರೆಯುತ್ತದೆ. ಒಂದು ವೇಳೆ ಯಾಮಾರಿ ಓಗೊಟ್ಟು ಬಾಗಿಲು ತೆಗೆದರೆ ಅಪಾಯ ಗ್ಯಾರಂಟಿ. ಅದರ ಬದಲು ‘ನಾಳೆ ಬಾ’ ಎಂದು ಬರೆದರೆ ಅದನ್ನು ನೋಡಿ ದೆವ್ವ ವಾಪಸು ಹೋಗುತ್ತದೆ’ ಎಂಬ ಸಮಜಾಯಿಷಿ ಸಿಗುತ್ತದೆ. ಇದು ನಂಬಿಕೆಯೋ, ಮೂಢನಂಬಿಕೆಯೋ ಅವರವರಿಗೇ ಬಿಟ್ಟಿದ್ದು. ‘ನಾಳೆ ಬಾ’ ಎಂಬುದು ಎಷ್ಟರಮಟ್ಟಿಗೆ ಫೇಮಸ್ ಎಂದರೆ, ಈ ವಿಷಯದ ಮೇಲೊಂದು ವಿಕಿಪೀಡಿಯಾ ಪುಟ ಕೂಡ ಇದೆ. ಈ ‘ನಾಳೆ ಬಾ’ ಎಂಬ ಸಂಗತಿಯನ್ನೇ ಸ್ಪೂರ್ತಿಯಾಗಿ ಇಟ್ಟುಕೊಂಡು ‘ಸ್ತ್ರೀ’ ಚಿತ್ರ ಮಾಡಿದ್ದಾರೆ ನಿರ್ದೇಶಕರು. ‘ಸ್ತ್ರೀ’ ಕಥೆ ಕೂಡ ಇದೇ ಮಾದರಿಯಲ್ಲಿ ಸಾಗಲಿದೆಯಂತೆ. ಶ್ರದ್ಧಾ ಜತೆ ಮುಖ್ಯ ಭೂಮಿಕೆಯಲ್ಲಿ ರಾಜ್​ಕುಮಾರ್ ರಾವ್ ಕೂಡ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ ಪೋಸ್ಟರ್​ನಲ್ಲಿ ನಾಯಕ-ನಾಯಕಿ ರೊಮ್ಯಾಂಟಿಕ್ ಆಗಿ ಪೋಸ್ ನೀಡಿದ್ದರೆ, ನಾಯಕಿಯ ನೆರಳು ಭಯ ಹುಟ್ಟಿಸುವಂತಿದೆ. ಈಗ ಟ್ರೇಲರ್ ಕೂಡ ಬಿಡುಗಡೆ ಆಗಿದ್ದು, ಸಿನಿಪ್ರಿಯರಲ್ಲಿ ನಿರೀಕ್ಷೆ ಹುಟ್ಟಿಸಿದೆ. ಆ. 31ರಂದು ‘ಸ್ತ್ರೀ’ ಥಿಯೇಟರ್ ಬಾಗಿಲು ಬಡಿಯಲಿದ್ದಾಳೆ. ಅರ್ಥಾತ್, ಚಿತ್ರ ರಿಲೀಸ್ ಆಗಲಿದೆ. ನೆನಪಿಡಿ, ಈ ‘ಸ್ತ್ರೀ’ ಗಂಡಸರನ್ನೇ ಟಾರ್ಗೆಟ್ ಮಾಡಲಿದ್ದಾಳಂತೆ. ಅದೇ ಕಾರಣಕ್ಕೆ ‘ಮರ್ದ್ ಕೊ ದರ್ದ್ ಹೋಗಾ’ ಎಂಬ ಅಡಿಬರಹ ಕೂಡ ಈ ಚಿತ್ರಕ್ಕಿದೆ.