41 ಹತ್ಯೆಗೆ ಪ್ರತಿಯಾಗಿ 82 ಉಗ್ರರನ್ನು ಹತ್ಯೆಮಾಡಬೇಕು ಎಂದ ಪಂಜಾಬ್‌ ಸಿಎಂ

ನವದೆಹಲಿ: ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ಮಾಡಿ 40ಕ್ಕೂ ಅಧಿಕ ಯೋಧರನ್ನು ಬಲಿ ತೆಗೆದುಕೊಂಡ ಪಾಕಿಸ್ತಾನದ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್ ಒತ್ತಾಯಿಸಿದ್ದಾರೆ.

ರಾಜ್ಯ ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ತಕ್ಕ ಸಂದೇಶವನ್ನು ರವಾನಿಸಲು ನಮ್ಮ ಭದ್ರತಾ ಪಡೆಯು ಒಂದಕ್ಕೆ ಎರಡರಂತೆ ಉಗ್ರರ ಹತ್ಯೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ರಾಜಕೀಯಕ್ಕೆ ಬರುವುದಕ್ಕೂ ಮುಂಚೆ ಸೇನಾ ಅಧಿಕಾರಿಯಾಗಿದ್ದ ಸಿಂಗ್‌, ನಮ್ಮ 41 ಯೋಧರ ಹತ್ಯೆಗೆ ಪ್ರತಿಯಾಗಿ ನಾವು 82 ಉಗ್ರರನ್ನು ಹತ್ಯೆ ಮಾಡಲೇಬೇಕಿದೆ. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎಂಬ ನೀತಿಯನ್ನು ಪಾಲಿಸಬೇಕು. ಪಾಕ್‌ ವಿರುದ್ಧ ಕ್ರಮ ಕೈಗೊಳ್ಳಲು ಇದು ಸೂಕ್ತ ಸಮಯ ಎಂದು ಒತ್ತಾಯಿಸಿದ್ದಾರೆ.

ಯುದ್ಧಕ್ಕಾಗಿ ಯಾರು ಯಾರನ್ನು ಆಹ್ವಾನಿಸುವುದಿಲ್ಲ. ಆದರೆ ನಮ್ಮ ಸೈನಿಕರ ಹತ್ಯೆಗಳು ತಮಾಷೆಯಲ್ಲ. ಇದಕ್ಕಾಗಿ ಏನನ್ನಾದರೂ ಮಾಡಲೇಬೇಕಿದೆ. ಈ ಘಟನೆಯಿಂದಾಗಿ ನಾನು ಸೇರಿದಂತೆ ಇಡೀ ದೇಶವೇ ದುಖಃಕ್ಕೀಡಾಗಿದೆ. ಪಾಕಿಸ್ತಾನದಿಂದ ನ್ಯೂಕ್ಲಿಯರ್‌ ಬೆದರಿಕೆ ಒಡ್ಡಿದೆ ಎನ್ನುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಗಿಲ್‌ ವೇಳೆಯಲ್ಲಿ ಶಸ್ತ್ರಾಸ್ತ್ರಗಳಿಂದಲೇ ಭಾರತೀಯ ಸೇನೆಯ ವಿರುದ್ಧ ಪಾಕ್‌ ಸೋತಿತ್ತು. ಇದೀಗ ನ್ಯೂಕ್ಲಿಯರ್‌ ಇದೆ ಎಂದು ಭಾರತವನ್ನು ಪಾಕ್‌ ಎದುರಿಸಲು ಸಾಧ್ಯವಿಲ್ಲ. ಏಕೆಂದರೆ ಭಾರತ ಕೂಡ ನ್ಯೂಕ್ಲಿಯರ್‌ ರಾಷ್ಟ್ರವಾಗಿದೆ ಎಂದರು. (ಏಜೆನ್ಸೀಸ್)