ಮಂಗಳೂರು: ಕಾರವಾರದ ನೇತ್ರಾಣಿ ದ್ವೀಪ ಹಾಗೂ ಅದರ ಉತ್ತರಕ್ಕೆ ಕಾಣಸಿಗುವ ಅಪರೂಪದ ವೇಲ್ ಶಾರ್ಕ್ ಮೀನನ್ನು ಮಂಗಳೂರು ಸಮುದ್ರದಲ್ಲಿ ರಾಜ್ಯದ ಹಕ್ಕಿವೀಕ್ಷಣಾ ತಂಡದವರು ಪತ್ತೆ ಮಾಡಿದ್ದಾರೆ.
ಮಂಗಳೂರಿನ ಅರಬಿ ಸಮುದ್ರದಲ್ಲಿ ಹಮ್ಮಿಕೊಳ್ಳಲಾದ ಸಾಗರ ಪಕ್ಷಿ ವೀಕ್ಷಣಾ ಅಭಿಯಾನದ ವೇಳೆ ಸುಮಾರು 15ರಿಂದ 20 ಕಿ.ಮೀನಷ್ಟು ದೂರ ಸಮುದ್ರದಲ್ಲಿ ಸಾಗಿರುವ ತಂಡಕ್ಕೆ ಅಪರೂಪದ ವೇಲ್ ಶಾರ್ಕ್ ಮೀನು ಸಮುದ್ರದ ಮೇಲ್ಮೈ ನೀರಿನಲ್ಲಿ ಈಜುವುದು ಕಂಡು ಬಂದಿದೆ. ಸುಮಾರು ಐದು ನಿಮಿಷ ಕಾಲ ಅದರ ವಿಡಿಯೊವನ್ನೂ ಸೆರೆಹಿಡಿದಿದ್ದಾರೆ ಈ ತಂಡದವರು.
ಮಂಗಳೂರು ಸಮುದ್ರದಲ್ಲಿ ಇದು ಇದ್ದಿರಬಹುದಾದರೂ ನೋಡಲು ಸಿಗುವುದು ಕಡಿಮೆ, ಉಳಿದಂತೆ ಗುಜರಾತ್, ಮಹಾರಾಷ್ಟ್ರ ಸಮುದ್ರ ಹಾಗೂ ನೇತ್ರಾಣಿ ದ್ವೀಪ ಭಾಗದಲ್ಲಿ ಇವು ಕಾಣಸಿಗುತ್ತವೆ ಎಂಬ ಮಾಹಿತಿಯನ್ನು ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾದ ಸಾಜನ್ ಜಾನ್ ತಮಗೆ ಸ್ಪಷ್ಟಪಡಿಸಿರುವುದಾಗಿ ಕೋಸ್ಟಲ್ ಬರ್ಡ್ ವಾಚರ್ಸ್ ನೆಟ್‌ವರ್ಕ್ ಸದಸ್ಯ ಶಿವಶಂಕರ್ ಎಂ. ಹೇಳಿದ್ದಾರೆ. 20 ಅಡಿ ಉದ್ದವಿದ್ದ ಈ ವೇಲ್ ಶಾರ್ಕ್ ನೇತ್ರಾಣಿ ಭಾಗದಿಂದ ಮಂಗಳೂರಿನತ್ತ ಬಂದಿರುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಕೋಸ್ಟಲ್ ಬರ್ಡ್ ವಾಚರ್ಸ್ ನೆಟ್‌ವರ್ಕ್ ವರ್ಷಕ್ಕೆ ಒಂದೆರಡು ಬಾರಿ ಮೀನುಗಾರಿಕಾ ಕಾಲೇಜಿನವರ ಅಥವಾ ಕರಾವಳಿ ರಕ್ಷಣಾ ಪಡೆಯವರ ನೌಕೆಯ ನೆರವಿನಲ್ಲಿ ಸಮುದ್ರದಲ್ಲಿ ಇಂತಹ ಅಭಿಯಾನ ಆಯೋಜಿಸುತ್ತದೆ.
ಈ ಬಾರಿಯ ಅಭಿಯಾನದಲ್ಲಿ ಮೈಸೂರಿನ ಶ್ರೀಕಾಂತ್ ಆರ್.ಜಿ, ವಿಜಯಲಕ್ಷ್ಮಿ, ಬೆಂಗಳೂರಿನ ಮಂಜುಳಾ, ಮಂಗಳೂರಿನ ಗೋಪಾಲಕೃಷ್ಣ, ರೋಹಿತ್ ಭಂಡಾರಿ, ಮ್ಯಾಕ್ಸಿಂ, ವಿನಯ್ ಭಟ್, 9 ವರ್ಷದ ಪೋರ ಶ್ಲೋಕ್ ಭಾಗವಹಿಸಿದ್ದರು.
ಆಗಾಗ ಇಂತಹ ಅಧ್ಯಯನ ಮಾಡುತ್ತಿದ್ದರೆ ಸಮುದ್ರ ಹಕ್ಕಿಗಳ ಬದುಕು, ಅವುಗಳ ವರ್ತನೆ, ಆಹಾರ ಇತ್ಯಾದಿಗಳನ್ನು ಅರಿತುಕೊಳ್ಳಬಹುದು. ಆದರೆ ಇದು ವೆಚ್ಚದಾಯಕ, ಅಲ್ಲದೆ ಈ ಬಾರಿ ಆಗಾಗ ಚಂಡಮಾರುತಗಳಿದ್ದುದರಿಂದಲೂ ಆಯೋಜನೆ ಕಷ್ಟವಾಯಿತು ಎನ್ನುತ್ತಾರೆ ಸದಸ್ಯರು.
ತೀರಕ್ಕೆ ಬಾರದ ಹಕ್ಕಿಗಳ ವೀಕ್ಷಣೆ!
ಪಕ್ಷಿ ವೀಕ್ಷಕರಿಗೆ ಕಡಲ ಹಕ್ಕಿಗಳ ಬಗೆಗೆ ಸದಾ ಕುತೂಹಲ. ಮೀನುಗಳನ್ನು ತಿನ್ನುತ್ತಾ ಕಡಲಿನಲ್ಲೇ ವಾಸಿಸುವ ಈ ಹಕ್ಕಿಗಳು ಕಡಲ ತೀರಕ್ಕೆ ಬರುವುದು ಕಡಿಮೆ. ಹಾಗಾಗಿ ಅವುಗಳ ವೀಕ್ಷಣೆಗೆ ಸಮುದ್ರದಲ್ಲೇ ಸಾಗಬೇಕು. ಹಾರುತ್ತಿರುವ, ಕಡಲಿನಲ್ಲಿ ತೇಲುತ್ತಿರುವ ಅಥವಾ ಮೀನುಗಳನ್ನು ತಿನ್ನುವಾಗ ಅವುಗಳನ್ನು ನೋಡಬಹುದು ಎಂದು ಶಿವಶಂಕರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಸ್ಕುವಾ ಪ್ರಭೇದಕ್ಕೆ ಸೇರಿದ ಆರ‌್ಟಿಕ್ ಸ್ಕುವಾ, ಪಮೋರಿಯನ್ ಸ್ಕುವಾ, ಲಾಂಗ್‌ಟೇಲ್ಡ್ ಸ್ಕುವಾ, ಸ್ಟಾರ್ಮ್ ಪ್ಯಾಟ್ರೆಲ್, ಶೀಯರ್ ವಾಟರ್ ಬರ್ಡ್, ಮಾಸ್ಕ್‌ಡ್ ಬೂಬಿ, ಫ್ರಿಗೇಟ್ ಬರ್ಡ್ ಇತ್ಯಾದಿ ಸಮುದ್ರ ಹಕ್ಕಿಗಳನ್ನು 10 ವರ್ಷಗಳ ಅಭಿಯಾನದಲ್ಲಿ ಮಂಗಳೂರು ಆಸುಪಾಸಿನ ಸಮುದ್ರದಲ್ಲಿ ಪತ್ತೆ ಮಾಡಲಾಗಿದೆ. ಈ ಬಾರಿಯ ಅಭಿಯಾನದಲ್ಲೂ ಸ್ಕುವಾ ಪ್ರಭೇದದ ಹಕ್ಕಿಗಳು ಅಲ್ಲದೆ ಡಾಲ್ಫಿನ್ ಮೀನುಗಳು, ಸೀ ಗಲ್ಸ್‌ಗಳನ್ನು ಪತ್ತೆ ಮಾಡಲಾಗಿದೆ.