Thalapathy vijay | ನಟ ದಳಪತಿ ವಿಜಯ್ ಅವರ ಕೊನೆಯ ಚಿತ್ರವಾದ ಜನ ನಾಯಗನ್ ಚಿತ್ರೀಕರಣವನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಗಿದೆ. ಹಾಗಿದ್ರೆ ಚಿತ್ರದ ಶೂಟಿಂಗ್ ಏಕೆ ನಿಂತು ಹೋಯಿತು ಎಂಬ ಬಗ್ಗೆ ತಿಳಿಯೋಣ.
ನಟ ದಳಪತಿ ವಿಜಯ್ ಅವರು ತಮ್ಮ 69ನೇ ಚಿತ್ರವಾದ ಜನ ನಾಯಗನ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಹೆಚ್. ವಿನೋದ್ ನಿರ್ದೇಶನ ಮಾಡ್ತಾ ಇದ್ದು, ಈ ಚಿತ್ರದಲ್ಲಿ ವಿಜಯ್ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡ್ತಿರೋ ಈ ಸಿನಿಮಾಗೆ ಅನಿರುದ್ಧ್ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಜಯ್ ಜೊತೆಗೆ ಬಾಬಿ ಡಿಯೋಲ್, ಮಮಿತಾ ಬೈಹು, ಗೌತಮ್ ಮೆನನ್, ಪ್ರಕಾಶ್ ರಾಜ್ ಮತ್ತು ಪ್ರಿಯಾಮಣಿ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ.
‘ಜನ ನಾಯಗನ್’ ಚಿತ್ರೀಕರಣಕ್ಕೆ ಬ್ರೇಕ್
ಜನ ನಾಯಗನ್ ಚಿತ್ರದ ಚಿತ್ರೀಕರಣ ಇನ್ನೇನೊ ಅಂತಿಮ ಹಂತಕ್ಕೆ ತಲುಪಿದೆ. ಈ ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿತ್ತು. ಆದರೆ ಇದು ರಾಜಕೀಯ ಕಥೆ ಹೊಂದಿರುವ ಚಿತ್ರವಾಗಿದೆ ಎನ್ನಲಾಗಿದೆ. ಮುಂದಿನ ವರ್ಷ ಪೊಂಗಲ್‌ಗೆ ಚಿತ್ರವನ್ನು ಬಿಡುಗಡೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಜನ ನಾಯಗನ್ ಚಿತ್ರದ ಚಿತ್ರೀಕರಣವನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಗಿದೆ ಎಂಬ ಸುದ್ದಿ ಕೋಲಾಹಲಕ್ಕೆ ಕಾರಣವಾಗಿದೆ. ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಂಬಳ ಮತ್ತು ಬೋನಸ್ ಪಾವತಿಸಲು ಸಾಧ್ಯವಾಗದ ಕಾರಣ ಚಿತ್ರೀಕರಣ ಸ್ಥಗಿತಗೊಂಡಿದೆ ಎಂದು ಹೇಳಲಾಗ್ತಾ ಇದೆ.
ಇನ್ನೂ ಈ ಚಿತ್ರವನ್ನು ನಿರ್ಮಾಣ ಮಾಡ್ತಾ ಇರೋ ಕೆವಿಎನ್ ಸಂಸ್ಥೆ ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನೇ ನಿರ್ಮಿಸುವಷ್ಟು ಸದೃಢವಾಗಿದೆ. ಆದರೆ ಇಂತಹ ದೊಡ್ಡ ಸಂಸ್ಥೆಯಿಂದಲೇ ಸಂಬಳ ಬಾಕಿ ಪಾವತಿಸಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದಾಗ, ಒಂದು ತಿರುವು ಸಿಕ್ಕಿದೆ. ಇತ್ತೀಚೆಗೆ ಈ ಕಂಪನಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಐಟಿ ದಾಳಿ ನಡೆಸಲಾಗಿದ್ದು, ಈ ಕಂಪನಿಯ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿರೋದು ತಿಳಿದು ಬಂದಿದೆ. ಹಾಗಾಗಿ ಬಾಕಿ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ವಿಜಯ್ ಕೊನೆ ಸಿನಿಮಾ
ಮೇಲೆ ತಿಳಿಸಿದ ಕಾರಣದಿಂದಾಗಿ ಸದ್ಯ ಜನ ನಾಯಗನ್ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಈ ಘಟನೆಯಿಂದ ನಟ ವಿಜಯ್ ಕೂಡ ಮಾನಸಿಕವಾಗಿ ನೊಂದಿದ್ದಾರೆ ಎನ್ನಲಾಗಿದೆ. ಜನ ನಾಯಗನ್ ಸಿನಿಮಾ, ನಟ ವಿಜಯ್ ಅವರ ಕೊನೆಯ ಚಿತ್ರವಾಗಿದ್ದು, ಈ ಚಿತ್ರದೊಂದಿಗೆ ವಿಜಯ್ ಸಿನಿಮಾರಂಗವನ್ನು ತ್ಯಜಿಸಲಿದ್ದಾರೆ. ಈ ಚಿತ್ರಕ್ಕಾಗಿ ನಟ ವಿಜಯ್ 275 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದಾರೆ. ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆ ದಿನೇ ದಿನೇ ಹೆಚ್ಚುತ್ತಿದೆ. ಈ ಮೂಲಕ ತಮಿಳು ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗಿದ್ದಾರೆ.