ಶೋಕ ಕಳೆಯುವ ಮಹಾಮಾತೆ

ಮಹಾಗೌರಿ ದೇವಿ:

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ | 

ಮಹಾಗೌರಿ ಶುಭಂ ದದ್ಯಾನ್ಮಹಾದೇವ ಪ್ರಮೋದದಾ ||

ನವರಾತ್ರಿಯ 9ನೇ ದಿನ ದೇವಿಯನ್ನು ಮಹಾಗೌರಿ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದೇವಿಗೆ 4 ಕೈಗಳಿವೆ. ಮೇಲಿನ ಬಲಗೈಯಲ್ಲಿ ಅಭಯ ಮುದ್ರೆ ಮತ್ತು ಕೆಳಗಿನ ಬಲಗೈಯಲ್ಲಿ ತ್ರಿಶೂಲ, ಮೇಲಿನ ಎಡಗೈಯಲ್ಲಿ ಡಮರು ಹಾಗೂ ಕೆಳಗಿನ ಎಡಗೈಯಲ್ಲಿ ವರಮುದ್ರೆ ಇದೆ. ಈಕೆಯ ವಾಹನ ವೃಷಭ. ಇದರ ಬಣ್ಣ ಬಿಳಿ.

ಅವತಾರದ ಹಿನ್ನೆಲೆ: ಕಠೋರವಾದ ತಪಸ್ಸು ಮಾಡಿ ಶಿವನನ್ನು ತನ್ನ ಪತಿಯಾಗಿ ಪಡೆದವಳು. ಕಠಿಣವಾದ ತಪಸ್ಸಿನಿಂದ ದೇಹ ಕಪ್ಪಾಗಿತ್ತು. ತಪಸ್ಸಿಗೆ ಮೆಚ್ಚಿ ಶಿವನು ಇವಳ ಶರೀರವನ್ನು ಗಂಗೆಯ ಪವಿತ್ರ ಜಲದಿಂದ ತೊಳೆದಾಗ ಅದು ಅತ್ಯಂತ ತೇಜಸ್ಸು ಪಡೆದುಕೊಂಡಿತು. ಅಂದಿನಿಂದ ಈ ದೇವಿ ಗೌರಿ ಎಂದು ಹೆಸರು ಪಡೆದಳು.

ಪೂಜಾವಿಧಿ: ಮಹಾಗೌರಿ ದೇವಿಯನ್ನು ಶ್ವೇತವರ್ಣದ ಸೀರೆ, ಕುಪ್ಪಸದಿಂದ ಅಲಂಕರಿಸ ಬೇಕು. ಬಿಳಿ ಬಣ್ಣದ ಹೂವು (ಮಲ್ಲಿಗೆ), ಅಕ್ಷತೆ, ಗೆಜ್ಜೆವಸ, ಬಳೆಯನ್ನು ಅರ್ಪಿಸಿ, ಪೂಜಿಸಬೇಕು. ಗೌರಿ ಅಷ್ಟೋತ್ತರದಿಂದ ಕುಂಕುಮಾರ್ಚನೆ ಮಾಡಬೇಕು. ಈಕೆ ಎಲ್ಲ ವಾಹನ ಆಯುಧಗಳಿಗೆ ಅಧಿದೇವತೆ ಆಗಿರುವಳು. ಆದ್ದರಿಂದ ನಾವು ಅಂದು ವಾಹನಗಳಿಗೆ, ಆಯುಧಗಳಿಗೆ ಪೂಜೆಯನ್ನು ಸಲ್ಲಿಸಬೇಕು ಹಾಗೂ ಅವುಗಳಿಂದ ಏನೂ ತೊಂದರೆ ಆಗದಿರಲಿ ಎಂದು ಪ್ರಾರ್ಥಿಸಬೇಕು. ಅಂದು ಸೀಮೇ ಅಕ್ಕಿ ಯಿಂದ ಪಾಯಸ ಹಾಗೂ ಅನ್ನವನ್ನು ಮಾಡಿ ನೈವೇದ್ಯ ಮಾಡಬೇಕು. ಅನ್ನಪೂರ್ಣ ಅಲಂಕಾರ ಮಾಡಬೇಕು.
ಫಲ: ಮಹಾಗೌರಿ ದೇವಿಯನ್ನು ಪೂಜಿಸುವುದರಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ. ಭಕ್ತರ ಎಲ್ಲ ಕಲ್ಮಶಗಳು ತೊಳೆದು ಹೋಗುತ್ತವೆ. ಪಾಪಗಳು ನಾಶವಾಗುತ್ತವೆ. ಸಂತಾನ, ಧನಲಾಭ ಲಭಿಸುತ್ತದೆ. ಯೋಗಿಗಳು ಈ ದೇವಿಯನ್ನು ಆರಾಧಿಸುವಾಗ ಮನಸ್ಸನ್ನು ಸಹಸ್ರಾರಿನಲ್ಲಿ ನೆಲೆಗೊಳಿಸಿಕೊಳ್ಳುತ್ತಾರೆ.
ಈ ಕೆಳಗಿನ ಶ್ಲೋಕವನ್ನು 54 ಬಾರಿ ಹೇಳಿಕೊಂಡು ದೇವಿಗೆ ನಮಸ್ಕರಿಸಿದರೆ ಮನಸ್ಸಿನ ಕಾಮನೆ ಈಡೇರುವುದು.

ಯಾ ದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ |
ನಮಸ್ತಸ್ತೈ ನಮಸ್ತಸ್ತೈ  ನಮೋ ನಮಃ ||

ವಿಜಯದಶಮಿ ದಿನ ಶಮೀ ವೃಕ್ಷದ ಪೂಜೆಗೆ ವಿಶೇಷ ಮಹತ್ವವುಂಟು

  • ಅರ್ಧ ಅಥವಾ ಒಂದು ಗಂಟೆ ಶಮೀ ವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡುವುದು ಆರೋಗ್ಯ ವರ್ಧನೆಗೆ ಒಳ್ಳೆಯದು. ಹೃದಯ ಸಂಬಂಧಿ ತೊಂದರೆ ಇರುವಂಥವರು ಈ ಮರದ ಕೆಳಗೆ ವಾಯುವಿಹಾರ ಮಾಡಿದರೆ ಉತ್ತಮ.
  • ವಿವಾಹಕ್ಕೆ ತಡೆಯಾಗಿದ್ದರೆ 48 ದಿನ ಈ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಬೇಕು. ಹಾಗೆಯೇ, ಸಂತಾನ ಭಾಗ್ಯವಿಲ್ಲದವರು ಬೆಳಗ್ಗೆ ಸಮಯದಲ್ಲಿ ಶಮೀವೃಕ್ಷಕ್ಕೆ ಪ್ರದಕ್ಷಿಣೆ ಹಾಕಿದರೆ ಸಂತಾನ ಭಾಗ್ಯ ದಕ್ಕುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ, ಯಾರಾದರೂ ಮಾಟ, ಮಂತ್ರ, ಛಿದ್ರ ದೋಷ ಮಾಡಿದ್ದರ ಅದರಿಂದ ಮುಕ್ತರಾಗಲು ಈ ವೃಕ್ಷಕ್ಕೆ 21 ದಿನ ಪೂಜೆ ಮಾಡಬೇಕು ಎಂಬ ಪ್ರತೀತಿಯೂ ಇದೆ.
  • ಶಮೀ ವೃಕ್ಷವಿರುವ ಸ್ಥಳದಲ್ಲಿ ಬಾವಿಯನ್ನು ತೋಡಿಸಿದರೆ ಸಿಹಿ ನೀರು ಸಿಗುತ್ತದೆ. ವಾಸ್ತು ದೋಷ ಇರುವಂತಹ ಮನೆಯ ದೇವರ ಕೋಣೆಯಲ್ಲಿ ಶಮೀ ವೃಕ್ಷದ ಎಲೆಯನ್ನು ಇರಿಸಿದರೆ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

ಮಂಡಗದ್ದೆ ಪ್ರಕಾಶಬಾಬು ಕೆ.ಆರ್. (ಲೇಖಕರು ಧಾರ್ಮಿಕ ಚಿಂತಕರು)

Leave a Reply

Your email address will not be published. Required fields are marked *