ಅತೃಪ್ತ ಶಾಸಕರಿಗೆ ಕೆಪಿಸಿಸಿಯಿಂದ ಶಾಕ್‌, ಪಕ್ಷದಿಂದ ಉಚ್ಚಾಟಿಸುವ ಸೂಚನೆ ನೀಡಿದ ಅಧ್ಯಕ್ಷ

ಬೆಂಗಳೂರು: ಸಾಕಷ್ಟು ಹಗ್ಗ ಜಗ್ಗಾಟಗಳಿಗೆ ಕಾರಣರಾಗಿ ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿರುವ ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಶಾಕ್‌ ನೀಡಿದ್ದು, ಹೊಸ ಅಸ್ತ್ರ ಪ್ರಯೋಗಿಸುವ ಎಚ್ಚರಿಕೆ ನೀಡಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಪಕ್ಷದಿಂದ ಉಚ್ಚಾಟಿಸುವ ಸೂಚನೆ ನೀಡಿ ಅತೃಪ್ತ ಕಾಂಗ್ರೆಸ್ ಶಾಸಕರ ವಿರುದ್ಧ ಪಕ್ಷದಿಂದಲೂ ಕ್ರಮ ಕೈಗೊಳ್ಳುತ್ತೇವೆ. ಅವರನ್ನು ಪಕ್ಷದಿಂದ ದೂರ ಇಡುವ ಕೆಲಸಕ್ಕೆ ಮುಂದಾಗುತ್ತೇವೆ. ಮತ್ತೊಮ್ಮೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪೀಕರ್ ಕಚೇರಿ ಬಳಿ ತಿಳಿಸಿದ್ದಾರೆ.

ನಾವೇ ಸ್ಪೀಕರ್‌ಗೆ ದೂರು ನೀಡಿದ್ದೇವೆ. 10ನೇ ಶೆಡ್ಯೂಲ್‌ನಲ್ಲಿ ಅವರು ಪಕ್ಷಾಂತರ ಕಾಯ್ದೆ ಉಲ್ಲಂಘಿಸಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು, ಬಾವುಟದಿಂದ ಗೆದ್ದಿದ್ದಾರೆ. ಈಗ ಸರ್ಕಾರವನ್ನು ಉರುಳಿಸುವ ಹಂತಕ್ಕೆ ಹೋಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇಂತಹ ಶಾಸಕರಿಗೆ ಈ ಘಟನೆ ಪಾಠವಾಗಬೇಕು. ಕಾಂಗ್ರೆಸ್ ಪಕ್ಷದಿಂದ 13 ಶಾಸಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಈ ವಿಚಾರದಲ್ಲಿ ಹೈಕಮಾಂಡ್ ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ನಾವು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *