ಹಣ ವಾಪಸ್ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ
ಕೋಲಾರ:- ಹೊಸದಾಗಿ ಖರೀದಿಸಿದ್ದ ಟಿವಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಸರಿಪಡಿಸದ ಎಲೆಕ್ಟ್ರಾನಿಕ್ಸ್ ಮಳಿಗೆ ಮತ್ತು ಟಿವಿ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಟಿವಿ ಖರೀದಿಸಲು ವಿನಿಯೋಗಿಸಿದ್ದ ಹಣವನ್ನು ಶೇ.10 ಬಡ್ಡಿ ಸಮೇತ ಹಿಂತಿರುಗಿಸುವಂತೆ ಆ.28ರಂದು ಆದೇಶಿಸಿದೆ.
ನಗರದ ಎಸ್.ಸುರೇಶ್ ಎಂಬುವವರು ಎಲೆಕ್ಟ್ರಾನಿಕ್ಸ್ ಮಳಿಗೆಯಿಂದ ಟಿವಿಯನ್ನು 67,500 ರೂ. ಕೊಟ್ಟು ಖರೀದಿಸಿದ್ದರು. ಟಿವಿ 15 ದಿನಗಳಲ್ಲಿಯೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೆ, ಮನೆಯಲ್ಲಿನ ವಿದ್ಯುತ್ ಸರಬರಾಜಿನ ವ್ಯತ್ಯಯದಿಂದ ಈ ರೀತಿಯಾಗಿದೆಯೆಂದು ನೆಪವೊಡ್ಡಿ ಕಂಪನಿ ದುರಸ್ತಿ ಮಾಡಿಸುವುದನ್ನು ರ್ನಿಲಕ್ಷಿಸಿತ್ತು. ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ವಕೀಲ ಕೆಂಬೋಡಿ ಕೆ.ಎನ್.ನಾರಾಯಣಸ್ವಾಮಿ ಮೂಲಕ ನೋಟಿಸ್ ನೀಡಿದರೂ ಕ್ರಮ ಕೈಗೊಂಡಿರಲಿಲ್ಲ.
ಬಳಿಕ ವಕೀಲರ ಮೂಲಕವೇ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ನೀಡಿದ್ದರು.
ದೂರಿನ ಸಂಬಂಧ ಎರಡೂ ಕಡೆಯಿಂದ ವಾದ ಆಲಿಸಿದ ಆಯೋಗವು ಗ್ರಾಹಕ ಸಂರಕ್ಷಣಾ ಕಾಯ್ದೆ ಪ್ರಕಾರ ಟಿವಿ ಖರೀದಿಸಲು ನೀಡಿದ್ದ 67,500 ರೂ. ವಾಪಸ್ ಮಾಡುವ ದಿನಾಂಕದವರೆಗೂ ಶೇ.10 ಬಡ್ಡಿ ಸೇರಿಸಿ ಹಾಗೂ ಸೇವಾ ನ್ಯೂನತೆಗೆ ಪರಿಹಾರವಾಗಿ 8 ಸಾವಿರ ರೂ.ಗಳನ್ನು ಪ್ರಕರಣದ ಖರ್ಚಿನ ಬಾಬತ್ತಾಗಿ ಗ್ರಾಹಕ ಎಸ್.ಸುರೇಶ್ರಿಗೆ 45 ದಿನಗಳೊಳಗಾಗಿ ನೀಡಬೇಕೆಂದು ಆದೇಶಿಸಿದೆ. ಹಾಗೆಯೇ, ಆದೇಶ ಪಾಲನೆ ಮಾಡಿ ಆಯೋಗಕ್ಕೆ ಅನುಸರಣಾ ವರದಿ ಸಲ್ಲಿಸಲು ಆಯೋಗದ ಅಧ್ಯಕ್ಷ ವೈ.ಎಸ್.ತಮ್ಮಣ್ಣ ಮತ್ತು ಸದಸ್ಯ ಕೆ.ಎಸ್.ರಾಜು ಸೂಚಿಸಿದ್ದಾರೆ.