ಹಾಲಿ ಸಂಸದೆ ಶೋಭಾ ಕರಂದ್ಲಾಜೆಯಿಂದ ನಾಮಪತ್ರ ಸಲ್ಲಿಕೆ: ಶೋಭಾ ಬಳಿ ಇರುವ ಆಸ್ತಿ ವಿವರ ಹೀಗಿದೆ…

ಉಡುಪಿ: ಸಾಕಷ್ಟು ವಿರೋಧದ ನಡುವೆಯೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಅವರ ಹೆಸರು ಘೋಷಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಜ್ಯೋತಿಷಿಗಳ ಸಲಹೆ ಪಡೆದ ಹಾಲಿ ಸಂಸದೆ, ಶೋಭಾ ಕರಂದ್ಲಾಜೆ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಉಡುಪಿ- ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷರ ಜತೆ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಶುಕ್ರವಾರ ಮಹಾಕಾಳಿ ದುರ್ಗೆಯ ದಿನ, ದೇವಿಯ ಪವಿತ್ರ ದಿನ ಹೀಗಾಗಿ ಶುಭ ಶುಕ್ರವಾರ ಎಂದು ಇಂದು ನಾಮಪತ್ರ ಸಲ್ಲಿಸಿದ್ದೇನೆ, ಸಾರ್ವಜನಿಕವಾಗಿ 26ಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದರು.

26ರಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉಡುಪಿಗೆ ಆಗಮಿಸುತ್ತಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಕೃಷ್ಣಮಠಕ್ಕೆ ಭೇಟಿ ನೀಡಿ ಪರ್ಯಾಯ ಶ್ರೀಗಳ ಜೊತೆ ಮಾತುಕತೆ ಮಾಡುತ್ತಾರೆ. ಆ ಬಳಿಕ ಉಡುಪಿಯಲ್ಲಿ ಸಮಾವೇಶ ಮಾಡಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 12 ಗಂಟೆಗೆ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಆಸ್ತಿ ವಿವರ
ನಾಮಪತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಆಸ್ತಿ ವಿವರ ನೀಡಿದ್ದು, ಒಟ್ಟು ಆಸ್ತಿಯ ಮೌಲ್ಯ 10.48 ಕೋಟಿ ರೂ. ಇದೆ. ಚರಾಸ್ತಿ 7.38 ಕೋಟಿ ರೂ. ಹಾಗೂ ಸ್ಥಿರಾಸ್ತಿ 3.10 ಕೋಟಿ ರೂ.ಗಳಾಗಿದೆ. 4.99 ಕೋಟಿ ರೂ. ಸಾಲವಿದೆ. 2014ರಲ್ಲಿ 7.20 ಕೋಟಿ ರೂ. ಆಸ್ತಿ ಇತ್ತು. 5 ವರ್ಷದಲ್ಲಿ 3.27 ಕೋಟಿ ರೂ.ಗೆ ಏರಿಕೆಯಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *