ಶೋಭಾ ಆಧ್ಯಾತ್ಮಿಕ ಸೆಳೆತ ಹೆಚ್ಚಳ

ಬೆಂಗಳೂರು: ಧಾರ್ವಿುಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳ ಭೇಟಿ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಸಂಸದೆ ಹಾಗೂ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರಿಗೆ ಆಧ್ಯಾತ್ಮಿಕತೆಯತ್ತ ಸೆಳೆತ ಹೆಚ್ಚಾಗಿದೆ.

ಸಾಮಾನ್ಯವಾಗಿ ಮಾನಸ ಸರೋವರ, ವೈಷ್ಣೋದೇವಿ, ಕೇದಾರನಾಥ ಕ್ಷೇತ್ರಗಳಿಗೆ ಏಕಾಂಗಿಯಾಗಿ ಭೇಟಿ ನೀಡುವ ಶೋಭಾ, ಇತ್ತೀಚೆಗೆ ಪೆರು ಸೇರಿ ವಿವಿಧ ದೇಶಗಳ ಆಧ್ಯಾತ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಿ ಮರಳಿದ್ದಾರೆ.

ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದರು. ಆಧ್ಯಾತ್ಮಿಕ ಸೆಳೆತ ಈಚೆಗೆ ತುಸು ಹೆಚ್ಚಾಗಿದೆ. ಆದರೆ ಕೇಂದ್ರ ಸಚಿವೆ ಉಮಾಭಾರತಿ ಅವರ ರೀತಿ ಸನ್ಯಾಸತ್ವ ಸ್ವೀಕರಿಸುವ ಇರಾದೆ ಸದ್ಯಕ್ಕಿಲ್ಲ ಎಂದು ಹೇಳಿದರು. ವಿದೇಶದಲ್ಲೂ ಶಕ್ತಿಪೀಠಗಳಿದ್ದು, ಅಲ್ಲಿನ ದರ್ಶನ ಪಡೆದು ಬಂದಿದ್ದೇನೆ. ಆಧ್ಯಾತ್ಮಿಕತೆಯಿಂದ ಸೇವಾ ಮನೋಭಾವ ಹೆಚ್ಚಾಗುತ್ತದೆ ಹಾಗೂ ರಾಜಕೀಯದಲ್ಲಿ ಅಧಿಕಾರದಾಹ ಕಡಿಮೆಯಾಗುತ್ತದೆ. ಬಿಜೆಪಿಯನ್ನು ಕಟ್ಟಿ ಬೆಳೆಸುವ ಹುಮ್ಮಸ್ಸು ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಜತೆ ಅರ್ಜೆಂಟೀನಾಕ್ಕೆ ನಿಯೋಗದಲ್ಲಿ ತೆರಳಿದ್ದ ಶೋಭಾ ಕರಂದ್ಲಾಜೆ, ಅಲ್ಲಿನ ಕಾರ್ಯಕ್ರಮ ಮುಕ್ತಾಯದ ನಂತರ ತಂಡದಿಂದ ಪ್ರತ್ಯೇಕವಾಗಿ ಏಕಾಂಗಿಯಾಗಿ ವಿವಿಧ ಧಾರ್ವಿುಕ ಸ್ಥಳಗಳಿಗೆ ಭೇಟಿ ನೀಡಿದ್ದರು.