ಇಂದಿರಾ ಗಾಂಧಿ ಸ್ಪರ್ಧೆಯಿಂದ ಚಿಕ್ಕಮಗಳೂರಿಗೆ ಪ್ರಯೋಜನವಾಗಿಲ್ಲ

ಚಿಕ್ಕಮಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಾಗ ಕಾಫಿನಾಡು ರಾಜಕೀಯ ಕಾರಣಕ್ಕೆ ಹೆಸರಾಯಿತೇ ಹೊರತು ಅಭಿವೃದ್ಧಿ ದೃಷ್ಟಿಯಿಂದ ಪ್ರಯೋಜನವಾಗಲಿಲ್ಲ ಎಂದು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ನಗರದ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಉಭಯ ನಾಯಕರು, ಇಂದಿರಾ ಗಾಂಧಿ ಇಲ್ಲಿಗೆ ಬಂದಿದ್ದರಿಂದ ಭಾರತದ ಭೂಪಟದಲ್ಲಿ ಚಿಕ್ಕಮಗಳೂರು ಗುರುತಿಸಿಕೊಳ್ಳುವಂತಾಯಿತು. ಆದರೆ ಮೂಲ ಸೌಲಭ್ಯಗಳಲ್ಲಿ ಪ್ರಗತಿಯಾಗಿಲ್ಲ ಶೋಭಾ ಕರಂದ್ಲಾಜೆ ಟೀಕಿಸಿದರು.

ಧಾರ್ವಿುಕ ಪ್ರವಾಸಿ ತಾಣ ಶೃಂಗೇರಿಗೆ ಮಂಗಳೂರು ಮತ್ತು ಶಿವಮೊಗ್ಗದಿಂದ ರೈಲ್ವೆ ಸಂಪರ್ಕಕ್ಕೆ ಸಮೀಕ್ಷೆ ಮಾಡಲು ಕೇಂದ್ರ ಅನುಮೋದನೆ ನೀಡಿದೆ. ಈಗಾಗಲೆ ಚಿಕ್ಕಮಗಳೂರು-ಶೃಂಗೇರಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಫಿಯನ್ನು ವಿಶ್ವದರ್ಜೆ ಉತ್ಪನ್ನವಾಗಿ ಮಾಡಬೇಕೆಂಬ ಬೇಡಿಕೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ದೇಶದಲ್ಲಿಯೇ ಅತಿ ಹೆಚ್ಚು ಸಿಆರ್​ಎಫ್ ಅನುದಾನ ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ 549 ಕೋಟಿ ರೂ. ತಂದಿದ್ದೇನೆ ಎಂದರು.

ಶಾಸಕ ಸಿ.ಟಿ. ರವಿಮಾತನಾಡಿ, ಇಂದಿರಾ ಗಾಂಧಿಗೆ ರಾಜಕೀಯ ಮರುಜನ್ಮ ನೀಡಿದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಲ ಸೌಲಭ್ಯಗಳ ಬೆಳವಣಿಗೆಗೆ ಆದ್ಯತೆ ನೀಡಲಿಲ್ಲ. ರಾಜಕೀಯ ಕಾರಣಕ್ಕೆ ಮಾತ್ರ ಚಿಕ್ಕಮಗಳೂರು ಹೆಸರಾಯಿತು ಎಂದು ದೂರಿದರು.

ರಾಜ್ಯ ಸರ್ಕಾರ ಕೊಟ್ಟಿಲ್ಲ ವರದಿ: ಜಿಲ್ಲೆಯಲ್ಲಿ ಕಾರ್ವಿುಕರಿಗೆ ಅನುಕೂಲ ಮಾಡಬೇಕೆಂಬ ಇಚ್ಛೆ ಇದೆ. ಈ ಸಂಬಂಧ ಕಾಫಿ ಪ್ಲಾಂಟೇಶನ್ ಕೆಲಸಗಾರರನ್ನು ಕಾರ್ವಿುಕರೆಂದು ಪರಿಗಣಿಸಿ ವರದಿ ಕೊಡುವಂತೆ ಮನವಿ ಮಾಡಿದರೂ ರಾಜ್ಯ ಸರ್ಕಾರ ವರದಿಯನ್ನೇ ನೀಡಿಲ್ಲ ಎಂದು ಶೋಭಾ ಕರಂದ್ಲಾಜೆ ದೂರಿದರು. ಉಡುಪಿ- ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೈಗಾರಿಕೆಗಳೇ ಇಲ್ಲ. ಹಾಗಾಗಿ ದೊಡ್ಡ ಪ್ರಮಾಣದಲ್ಲಿರುವ ಪ್ಲಾಂಟೇಶನ್ ಕೆಲಸಗಾರರಿಗೆ ಸೌಲಭ್ಯ ಸಿಗಬೇಕಾದರೆ ಅವರನ್ನು ರಾಜ್ಯ ಸರ್ಕಾರ ಮೊದಲು ಕಾರ್ವಿುಕರೆಂದು ಪರಿಗಣಿಸಿ ವರದಿ ಸಲ್ಲಿಸಬೇಕು ಎಂದರು.</