ಸಮ್ಮಿಶ್ರ ಸರ್ಕಾರದ ಒಳಬೇಗುದಿ, ಸಿದ್ದರಾಮಯ್ಯ ವಿರುದ್ಧದ ಅಸಮಾಧಾನ ಎಚ್​.ವಿಶ್ವನಾಥ್​ ಹೊರಹಾಕಿದ್ದಾರೆ

ಕಲಬುರಗಿ: ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸುವ ಮೂಲಕ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್​ ಅವರು ಸರ್ಕಾರದ ಒಳಬೇಗುದಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಅಸಮಾಧಾನ ಹೊರಹಾಕಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶೋಭಾ ಕರಂದ್ಲಾಜೆ, ಸಮ್ಮಿಶ್ರ ಸರ್ಕಾರದಲ್ಲಿ ಏನೊಂದು ಸರಿಯಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದರು.

ಸಮ್ಮಿಶ್ರ ಸರ್ಕಾರದ ಒಳಜಗಳಕ್ಕೆ ಜನರು ಬೇಸತ್ತಿದ್ದಾರೆ. ಸರ್ಕಾರ ಸ್ಪರ್ಶಜ್ಞಾನ ಕಳೆದುಕೊಂಡಿದೆ. ಕಣ್ಣು ಕಾಣದಂತಾಗಿದೆ. ಕಿವಿ ಕೇಳದಂತಾಗಿದೆ. ಸರ್ಕಾರ ಗಾಢ ನಿದ್ದೆಗೆ ಜಾರಿದ್ದು, ಸಿಎಂ ಎಚ್​.ಡಿ. ಕುಮಾರಸ್ವಾಮಿ ರೆಸಾರ್ಟ್​ ಸೇರಿದ್ದಾರೆ. ಅಧಿಕಾರಿಗಳಿಗೆ ಸರಿಯಾದ ಸೂಚನೆಗಳನ್ನು ನಿಡುತ್ತಿಲ್ಲ. ಹಾಗಾಗಿ ಅಧಿಕಾರಿಗಳು ಕುಡಿವ ನೀರೊದಗಿಸಲು ಕೂಡ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಟೀಕಿಸಿದರು.

ಡಿ.ಕೆ. ಶಿವಕುಮಾರ್​ ಹಣ ಹಂಚುತ್ತಿದ್ದಾರೆ ಎಂಬ ಆರೋಪ
ಸಚಿವ ಡಿ.ಕೆ. ಶಿವಕುಮಾರ್​ ಕುಂದಗೋಳ ಮತ್ತು ಚಿಂಚೋಳಿಯಲ್ಲಿ ಹಣ ಹಂಚುತ್ತಿದ್ದಾರೆ. ಅವರು ಎಷ್ಟೇ ಹಣ ಹಂಚಿದರೂ ಕುಂದಗೋಳದಲ್ಲಾಗಲಿ ಅಥವಾ ಚಿಂಚೋಳಿಯಲ್ಲಾಗಲಿ ಯಾರನ್ನೂ ಖರೀದಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಶೋಭ ಹೇಳಿದರು.

ಖರ್ಗೆ ವಿರುದ್ಧ ವಾಗ್ದಾಳಿ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ನರೇಂದ್ರ ಮೋದಿ ವಿಜಯ್​ ಚೌಕ್​ನಲ್ಲಿ ನೇಣು ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಸಂಸದ ಮಲ್ಲಿಕಾರ್ಜುನ್​ ಖರ್ಗೆ ಅವರ ಟೀಕೆಗೆ ಶೋಭಾ ತಿರುಗೇಟು ನೀಡಿದರು.

ಕಳೆದ ಬಾರಿ 40 ಸೀಟು ಗೆದ್ದವರು ಈ ಬಾರಿ ರಾಹುಲ್​ ಗಾಂಧಿ ಅವರನ್ನು ಪ್ರಧಾನಿ ಮಾಡುವ ಕನಸು ಕಾಣುತ್ತಿದ್ದಾರೆ. ಈ ಬಾರಿಯೂ ಅವರ ಕನಸು ಕನಸಾಗಿಯೇ ಉಳಿಯಲಿದೆ. ವಿಜಯ್​ ಚೌಕ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಖರ್ಗೆ ಸಾಕ್ಷಿಯಾಗಲಿದ್ದಾರೆ ಎಂದರು.

Leave a Reply

Your email address will not be published. Required fields are marked *