ವಾರದಲ್ಲಿ ಒಂದು ದಿನ ಕ್ಷೇತ್ರ ಭೇಟಿ: ಶೋಭಾ ಕರಂದ್ಲಾಜೆ ಭರವಸೆ

ಯಾವ ರೀತಿಯಲ್ಲಿ ಗೆಲುವು ನಿರೀಕ್ಷೆ ಮಾಡಿದ್ದಿರಿ?
ಕೇಂದ್ರ ಸರ್ಕಾರದ ಜನಪರ ಯೋಜನೆ, ಕ್ಷೇತ್ರದ ಜನತೆ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ‌್ಯಗಳು ನನ್ನನ್ನು ಗೆಲ್ಲಿಸಿವೆ. ನಾನು ಅಧಿಕ ಮತಗಳ ಅಂತರದಿಂದ ಗೆಲ್ಲುವೆ ಎಂದು ಮೊದಲೇ ಹೇಳಿದ್ದೆ. ವಿಶ್ವಾಸವಿತ್ತು, ಮತದಾರರ ಆಶೀರ್ವಾದಿಂದ ಗೆಲುವು ನಮ್ಮದಾಗಿದೆ. ಇನ್ನು ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಕೆಲಸ.

ಮಿತ್ರಪಕ್ಷಗಳು ಸಮರ್ಪಕ ಅಭ್ಯರ್ಥಿ ಹಾಕದಿರುವುದು ನೆರವಾಯಿತೇ?
ನಮ್ಮ ವಿರುದ್ಧ ಮಿತ್ರಪಕ್ಷಗಳು ಒಟ್ಟಾಗಿ ಹೋರಾಟ ಮಾಡಿದ್ದಾರೆ. ಅವರ ಹೋರಾಟ ಕಡಿಮೆ ಇರಲಿಲ್ಲ. ನಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಬಿಜೆಪಿ ಕಾರ‌್ಯಕರ್ತರು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ.

ಈ ಅವಧಿಯಲ್ಲಿ ಕ್ಷೇತ್ರಕ್ಕೆ ಯಾವ್ಯಾವ ಕಾರ‌್ಯಕ್ರಮಗಳ ಯೋಜನೆ ರೂಪಿಸಿದ್ದೀರಿ?
ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಕೆಲಸಗಳು, ಸಂಸ್ಥೆಗಳನ್ನು ತಂದಿದ್ದೇನೆ. ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಬೇಕಾದ ಕೆಲಸಗಳು ಆಗಬೇಕಿವೆ. ಎರಡು ಜಿಲ್ಲೆಗಳಲ್ಲಿ ಧಾರ್ಮಿಕ, ಪ್ರವಾಸಿ ಸ್ಥಳ ಸಂಪರ್ಕಿಸುವ, ಹಾದು ಹೋಗುವ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವುದು. ಕೊಂಕಣ ರೈಲ್ವೆ ದ್ವಿಪಥ ಮಾಡಬೇಕು ಎಂಬ ಹಲವು ವರ್ಷಗಳ ಬೇಡಿಕೆ ಇದೆ. ಐದು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗುವುದು. ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ, ಎರಡು ಜಿಲ್ಲೆಗಳಿಗೆ ಅನುಕೂಲವಾಗುವಂತಹ ಕೇಂದ್ರ ಸರ್ಕಾರದ ಪೂರಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು.

ಈ ಬಾರಿ ಪಕ್ಷದ ಕಾರ್ಯಕರ್ತರ ಜತೆ ಸಂವಹನ ಹೆಚ್ಚಿಸಲು ಏನು ಕ್ರಮ ಕೈಗೊಳ್ಳುವಿರಿ?
ವಾರಕ್ಕೆ ಒಂದು ದಿನ ಕಡ್ಡಾಯವಾಗಿ ನನ್ನ ಕ್ಷೇತ್ರ, ಕಚೇರಿಯಲ್ಲಿ ಇರುತ್ತೇನೆ ಅಥವಾ ಹೋಬಳಿ ಕೇಂದ್ರಕ್ಕೆ ಭೇಟಿ ನೀಡುತ್ತೇನೆ. ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆ. ಪಕ್ಷ, ಸರ್ಕಾರದ ಹೆಚ್ಚುವರಿಯಾಗಿ ಜವಾಬ್ದಾರಿ ನೀಡಿದರೂ ಕಾರ್ಯಕರ್ತರ ಸಂಪರ್ಕಕ್ಕೆ ಆದ್ಯತೆ ನೀಡಲಾಗುವುದು.