VIDEO| ಸ್ಫೋಟಕ ಆಟವಾಡುತ್ತಿದ್ದಾಗ ಬ್ಯಾಟ್​ನಿಂದ ವಿಕೆಟ್​ಗೆ ಹೊಡೆದು ನಗೆಪಾಟಿಲಿಗೀಡಾದ ಶೋಯೆಬ್​ ಮಲ್ಲಿಕ್​

ನವದೆಹಲಿ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಎರಡು ಬಾರಿ ಹಿಟ್​ ವಿಕೆಟ್​ಗೆ ಗುರಿಯಾದ ಬ್ಯಾಟ್ಸ್​ಮನ್​ಗಳಲ್ಲಿ ಪಾಕಿಸ್ತಾನದ ಹಿರಿಯ ಆಟಗಾರ ಶೋಯೆಬ್​ ಮಲ್ಲಿಕ್​ 8ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಮಲ್ಲಿಕ್​ 2003ರಲ್ಲಿ ಮೊದಲ ಬಾರಿಗೆ ಹಿಟ್​ ವಿಕೆಟ್​ಗೆ ಗುರಿಯಾಗಿದ್ದರು. ಇದೀಗ ಶುಕ್ರವಾರ ಟ್ರೆಂಟ್​ ಬ್ರಿಡ್ಜ್​ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಮತ್ತೆ ಹಿಟ್​ ವಿಕೆಟ್​ಗೆ ಬಲಿಯಾದರು.

ಕ್ರಿಕೆಟ್​ ಕೌಶಲ್ಯಗಳಲ್ಲಿ ಒಂದಾದ ಲೇಟ್​ ಕಟ್​​ ಶಾಟ್​ ಅನ್ನು ಪ್ರಯೋಗಿಸಲು ಹೋಗಿ ಹಿಂಬದಿಯ ವಿಕೆಟ್​ಗೆ ತಾವೇ ಬ್ಯಾಟ್​ನಿಂದ ಹೊಡೆದು ಎದುರಾಳಿ ತಂಡಕ್ಕೆ ಸುಲಭವಾಗಿ ವಿಕೆಟ್​ ಒಪ್ಪಿಸಿದ್ದಾರೆ. ಇಂಗ್ಲೆಂಡ್​ ವೇಗಿ ಮಾರ್ಕ್​ ವುಡ್​ ಬೌಲಿಂಗ್​ನಲ್ಲಿ ಈ ಸನ್ನಿವೇಶ ಜರುಗಿದೆ. ಕೇವಲ 26 ಎಸೆತಗಳಲ್ಲಿ 41 ರನ್​ ಗಳಿಸಿ ಸ್ಫೋಟಕ ಆಟವಾಡುತ್ತಿದ್ದ ಮಲ್ಲಿಕ್​ ತಾವೇ ವಿಕೆಟ್​ ಒಪ್ಪಿಸಿದ್ದು ದುರಾದೃಷ್ಟಕರವಾಗಿತ್ತು.

ಮಲ್ಲಿಕ್​ ಅವರ ಹಿಟ್​ ವಿಕೆಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಲ್ಲಿಕ್​ ಹಾಗೂ ಪಾಕ್​ ತಂಡವನ್ನು ನೆಟ್ಟಿಗರು ತಮ್ಮ ವಿಭಿನ್ನ ಅಭಿಪ್ರಾಯಗಳ ಮೂಲಕ ಕಾಲೆಳೆಯುತ್ತಿದ್ದಾರೆ.​

ನಿನ್ನೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 340 ರನ್​ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಆಂಗ್ಲ ಪಡೆ 49.3 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 341 ರನ್​ ಗಳಿಸುವ ಮೂಲಕ ಐದು ಏಕದಿನ ಪಂದ್ಯದ ಸರಣಿಯಲ್ಲಿ 3-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು. (ಏಜೆನ್ಸೀಸ್​)