ಗಾಂಧಿನಗರದ ಶಿವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವೆಂಕಟರಾವ್ ನಾಡಗೌಡ

ಸಿಂಧನೂರು: ಹೈದರಾಬಾದ್-ಕರ್ನಾಟಕದ ಅಪರೂಪದ ಶಿವಾಲಯ ಎನಿಸಿಕೊಂಡಿರುವ ತಾಲೂಕಿನ ಗಾಂಧಿನಗರದ ಶಿವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು.

ಬೆಳಗ್ಗೆ ಶಿವದೇವಾಲಯದಲ್ಲಿರುವ ಶ್ರೀ ಶಿವನ ಮೂರ್ತಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಂಚಾಮೃತ ಸೇವೆ ಸೇರಿ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶಿವನ ದರ್ಶನ ಪಡೆದರು. ಬೆಳಗ್ಗೆ ಸಚಿವ ವೆಂಕಟರಾವ ನಾಡಗೌಡ ಶಿವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ನಗರದ ಪಿಡಬ್ಲ್ಯುಡಿಕ್ಯಾಂಪ್ ಶ್ರೀ ಚೆನ್ನಬಸವೇಶ್ವರ ದೇವಸ್ಥಾನ ಹಾಗೂ ಹಳೇ ಬಜಾರ್ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕೂಡ ವಿಶೇಷ ಪೂಜೆ ಕೈಗೊಳ್ಳಲಾಯಿತು. ಸಂಜೆ ಭಕ್ತರಿಗೆ ವಿಶೇಷ ದರ್ಶನ, ಹಣ್ಣು-ಸಿಹಿ ವಿತರಿಸಲಾಯಿತು.