ತಾರಕಾಸುರನಿಗೆ ಶಿವಣ್ಣ ಗಾನ

ಬೆಂಗಳೂರು: ನಟ ಶಿವರಾಜ್​ಕುಮಾರ್ ನಟನೆ ಜತೆಗೆ ಗಾಯನವನ್ನೂ ಮಾಡುತ್ತಿರುತ್ತಾರೆ. ಈ ಹಿಂದೆ ಅವರದೇ ಅನೇಕ ಸಿನಿಮಾಗಳಿಗೆ ಅವರು ಹಾಡಿದ್ದಾರೆ. ಆದರೆ, ಬೇರೆಯವರ ಸಿನಿಮಾಗಳಿಗೆ ಅವರು ಹಾಡಿದ್ದು ಕಡಿಮೆ. ಈ ಬಗ್ಗೆ ಈಗ ಮಾತನಾಡುತ್ತಿರುವುದಕ್ಕೆ ಕಾರಣವಿದೆ. ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ತಾರಕಾಸುರ’ ಚಿತ್ರದ ಹಾಡೊಂದನ್ನು ಶಿವಣ್ಣ ಹಾಡಿದ್ದಾರೆ. ಈ ಮೂಲಕ ಅವರು ಮತ್ತೆ ಮೈಕ್ ಹಿಡಿದಿದ್ದಾರೆ. ಹೊಸ ಪ್ರತಿಭೆ ವೈಭವ್ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಮಾನ್ವಿತಾ ಹರೀಶ್ ನಟಿಸುತ್ತಿದ್ದಾರೆ. ಇದೇ ಚಿತ್ರದ ನಾಯಕನ ಇಂಟ್ರೊಡಕ್ಷನ್ ಗೀತೆಯನ್ನೇ ಶಿವಣ್ಣ ಹಾಡಿರುವುದು. ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಚಂದ್ರಶೇಖರ್, ‘ಇದು ಹೀರೋ ಇಂಟ್ರೊಡಕ್ಷನ್ ಸಾಂಗ್ ಆಗಿದ್ದರೂ, ತುಂಬ ವಿಶೇಷವಾಗಿದೆ. ಮಕ್ಕಳಿಗೆ ತುಂಬ ಇಷ್ಟವಾಗುವಂತಹ ಹಾಡು ಇದಾಗಿದೆ. ಅಲ್ಲದೆ, ಹಾಡಿನ ಮೂಲಕವೇ ಸಂದೇಶವೊಂದನ್ನು ಹೇಳಿದ್ದೇವೆ. ಅದನ್ನು ಹೇಳುವುದಕ್ಕೆ ಒಂದು ಜನಪ್ರಿಯ ಧ್ವನಿಯೇ ಬೇಕಿತ್ತು. ಅದಕ್ಕಾಗಿ ಶಿವರಾಜ್​ಕುಮಾರ್ ಬಳಿ ಕೇಳಿಕೊಂಡೆವು. ಟ್ಯೂನ್ ಕೇಳಿದೊಡನೆ, ಖುಷಿಯಿಂದಲೇ ಅವರು ಹಾಡಲು ಒಪ್ಪಿಕೊಂಡರು’ ಎನ್ನುತ್ತಾರೆ. ಧರ್ಮ ವಿಶ್ ಸಂಗೀತ ನೀಡಿರುವ ಈ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಜುಲೈ 12ರಂದು ಶಿವರಾಜ್​ಕುಮಾರ್ ಬರ್ತ್​ಡೇ. ಆ ದಿನದಂದೇ ಈ ಹಾಡನ್ನು ರಿಲೀಸ್ ಮಾಡಬೇಕೆನ್ನುವ ಉದ್ದೇಶವನ್ನು ಚಿತ್ರತಂಡ ಇಟ್ಟುಕೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿರುವ ‘ತಾರಕಾಸುರ’ ಬಳಗ ಆದಷ್ಟು ಬೇಗ ಚಿತ್ರದ ಆಡಿಯೋ ರಿಲೀಸ್ ಮಾಡುವ ಪ್ಲಾ್ಯನ್ ಹಾಕಿಕೊಂಡಿದೆ. ಎಂ. ನರಸಿಂಹಲು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಮಿಳಿನ ‘ಸಿಂಗಂ 2’ ಚಿತ್ರದಲ್ಲಿ ನಟಿಸಿದ್ದ ಹಾಲಿವುಡ್ ನಟ ಡ್ಯಾನಿ ಸಫಾನಿ ಈ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ.