ಪೊಗರಿನ ಟಗರುಗೆ ಬೆಳ್ಳಿಹಬ್ಬ

ಕಲರ್​ಫುಲ್ ಕಾರ್ಯಕ್ರಮಗಳನ್ನು ಬಿತ್ತರಿಸುವ ಕಿರುತೆರೆ ಒಂದೆಡೆಯಾದರೆ, ಅಂಗೈಯಲ್ಲೇ ದುನಿಯಾ ತೋರಿಸುವ ಆನ್​ಲೈನ್ ಲೋಕ ಮತ್ತೊಂದೆಡೆ. ಇವೆರಡರ ಸೆಳೆತಕ್ಕೆ ಒಳಗಾಗಿರುವ ಪ್ರೇಕ್ಷಕರನ್ನು ಚಿತ್ರಮಂದಿರದವರೆಗೆ ಕರೆದುಕೊಂಡು ಬರುವುದು ಸುಲಭವಲ್ಲ. ಸದ್ಯ ಆ ಕೆಲಸ ಮಾಡುವಲ್ಲಿ ‘ಟಗರು’ ಸಿನಿಮಾ ಯಶಸ್ವಿಯಾಗಿದೆ. ಬರೋಬ್ಬರಿ 25 ವಾರಗಳ ಕಾಲ ಥಿಯೇಟರ್​ನಲ್ಲಿ ಅಧಿಪತ್ಯ ಸ್ಥಾಪಿಸಿದ್ದು ಇದರ ಹೆಚ್ಚುಗಾರಿಕೆ. ಇಂದಿಗೆ (ಆ. 10) ಸರಿಯಾಗಿ 175 ದಿನಗಳ ಪ್ರದರ್ಶನ ಪೂರೈಸುತ್ತಿರುವ ಈ ಚಿತ್ರದ ಬಗ್ಗೆ ‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಆಡಿದ ಮಾತುಗಳಿವು.

| ಮದನ್ ಬೆಂಗಳೂರು

# ಈ ಬೆಳ್ಳಿಹಬ್ಬದ ಸಂದರ್ಭದಲ್ಲಿ ಏನು ಅನಿಸುತ್ತಿದೆ?

ಸಹಜವಾಗಿಯೇ ಖುಷಿಯಾಗುತ್ತಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ನನಗೆ ಬ್ಯಾಕ್ ಟು ಬ್ಯಾಕ್ ಗೆಲುವು ಸಿಕ್ಕಿದೆ. ‘ಮಫ್ತಿ’ ಮತ್ತು ‘ಟಗರು’ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. ಇದರಿಂದ ನಮಗೊಂದು ಹೊಸ ಎನರ್ಜಿ ಸಿಗುತ್ತದೆ. ಮುಂದಿನ ಸಿನಿಮಾಗಳನ್ನು ಇನ್ನಷ್ಟು ಚೆನ್ನಾಗಿ ಮಾಡಬೇಕೆಂಬ ಹುಮ್ಮಸ್ಸು ಬರುತ್ತದೆ.

# ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ 25ನೇ ವಾರ ಪೂರೈಸುತ್ತಿರುವುದರಿಂದ ಆ ಭಾಗದ ಜನರ ಸಿನಿಪ್ರೀತಿ ಬಗ್ಗೆ ನಿಮ್ಮ ಅಭಿಪ್ರಾಯ?

ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುವಂತಹ ವಾತಾವರಣ ಮೈಸೂರಿನಲ್ಲಿದೆ. ಅಲ್ಲಿ ಯಾವ ಕಡೆ ನೋಡಿದರೂ ಅಪ್ಪಟ ಕನ್ನಡ ಮಾತನಾಡುವವರೇ ಕಾಣಸಿಗುತ್ತಾರೆ. ಇನ್ನು, ಮೈಸೂರು ಮಾತ್ರವಲ್ಲದೆ ಇಡೀ ರಾಜ್ಯಾದ್ಯಂತ ‘ಟಗರು’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇಡೀ ತಂಡದ ಶ್ರಮದಿಂದ ಇದೆಲ್ಲ ಸಾಧ್ಯವಾಯಿತು.

# ಗೆಲ್ಲಿಸಿರುವ ಅಭಿಮಾನಿಗಳಿಗೆ ಏನು ಹೇಳ್ತೀರಿ?

‘ಟಗರು’ ಸಿನಿಮಾ ಘೋಷಣೆ ಆದಾಗಿನಿಂದ ಅವರು ಬೆಂಬಲಿಸುತ್ತಲೇ ಬಂದಿದ್ದಾರೆ. ಪಕ್ಕಾ ಅಭಿಮಾನಿಗಳು ಮಾತ್ರವಲ್ಲದೆ ಎಲ್ಲ ವರ್ಗದ ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟಪಟ್ಟರು. ಮಕ್ಕಳ ಸಮೇತವಾಗಿ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬಂದು ನೋಡಿದರು. ಅದು ನನಗೆ ಹೆಚ್ಚು ಖುಷಿ ಕೊಡುವ ವಿಚಾರ.

# ಗೆಲುವಿನ ಹೊಸ್ತಿಲಲ್ಲಿ ಚಿತ್ರದ ತಂತ್ರಜ್ಞರು ಮತ್ತು ಕಲಾವಿದರನ್ನು ಹೇಗೆ ನೆನಪಿಸಿಕೊಳ್ಳುತ್ತೀರಿ?

ಸಂಗೀತ ನಿರ್ದೇಶಕ ಚರಣ್ ರಾಜ್ ಅವರಿಗೆ ಹ್ಯಾಟ್ಸ್​ಆಫ್ ಹೇಳಲೇಬೇಕು. ಚಿತ್ರ ಬಿಡುಗಡೆಗೂ ಮುನ್ನ ಅವರ ಹಾಡುಗಳು ದೊಡ್ಡ ಮಟ್ಟಕ್ಕೆ ಸದ್ದು ಮಾಡಿದವು. ಕಲಾವಿದರ ಪೈಕಿ ಧನಂಜಯ, ಮಾನ್ವಿತಾ ಹರೀಶ್, ವಸಿಷ್ಠ ಸಿಂಹ, ಭಾವನಾ, ದೇವರಾಜ್ ಮುಂತಾದ ಪ್ರತಿಭಾವಂತರು ಸಿಕ್ಕಿದ್ದು ಕೂಡ ‘ಟಗರು’ ಪ್ಲಸ್ ಪಾಯಿಂಟ್. ಸಾಕಷ್ಟು ಹೊಸ ಕಲಾವಿದರು ಕೂಡ ಇದ್ದರು. ಈ ಗೆಲುವಿನಲ್ಲಿ ಅವರೆಲ್ಲರ ಕೊಡುಗೆ ದೊಡ್ಡದು.

# ಇದು ಒಂದು ಡಿಫರೆಂಟ್ ನಿರೂಪಣಾ ಶೈಲಿ ಇರುವ ಸಿನಿಮಾ. ಶೂಟಿಂಗ್ ವೇಳೆ, ರಿಲೀಸ್​ಗೂ ಮುನ್ನ ನಿಮಗೆ ‘ಟಗರು’ ಬಗ್ಗೆ ಯಾವ ರೀತಿ ಅಭಿಪ್ರಾಯವಿತ್ತು?

ನಾವು ಯಾವುದನ್ನೂ ನಿರೀಕ್ಷಿಸೋಕೆ ಸಾಧ್ಯವಿಲ್ಲ. ಎಲ್ಲವನ್ನೂ ಬಂದಂತೆ ಒಪ್ಪಿಕೊಳ್ಳಬೇಕಷ್ಟೇ. ಜನರ ಅಭಿರುಚಿ ಹೇಗಿರುತ್ತದೆ ಎಂಬುದನ್ನು ಮೊದಲೇ ಕಂಡುಹಿಡಿಯೋದು ಕಷ್ಟ. ದುಡ್ಡು ಕೊಟ್ಟು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಮಾತ್ರ ಎಲ್ಲವೂ ತಿಳಿಯುತ್ತದೆ. ಅವರಿಗೆ ಖುಷಿಯಾದರೆ ಸಿನಿಮಾ ಹಿಟ್, ಅವರಿಗೆ ನಿರಾಸೆಯಾದರೆ ಫ್ಲಾಪ್. ನಾವು ಉತ್ತಮ ಸಿನಿಮಾ ಮಾಡೋಕೆ ಪ್ರಯತ್ನಿಸಬಹುದು ಅಷ್ಟೇ. ‘ಟಗರು’ ವಿಚಾರದಲ್ಲಿ ಹಾಗೆಯೇ ಆಗಿದ್ದು.

# ‘ಟಗರು’ ಬಿಡುಗಡೆಗೂ ಮುನ್ನವೇ ‘ಟಗರು 2’ ಘೋಷಣೆ ಆಯ್ತು. ಈಗ ಅದು ಯಾವ ಹಂತದಲ್ಲಿದೆ? ಅದರಲ್ಲಿ ಪುನೀತ್​ರಾಜ್​ಕುಮಾರ್ ಮತ್ತು ನೀವು ಜತೆಯಾಗಿ ನಟಿಸುತ್ತೀರಿ ಎಂಬ ಮಾತಿದೆಯಲ್ಲ?

‘ಟಗರು 2’ ಸಂಬಂಧಿಸಿದಂತೆ ನಾನಿನ್ನೂ ನಿರ್ದೇಶಕ ಸೂರಿ ಅವರನ್ನು ಭೇಟಿ ಮಾಡಿಲ್ಲ. ಕೆಲಸಗಳು ನಡೆಯುತ್ತಿವೆ ಎನಿಸುತ್ತದೆ. ಅವರು ಯಾವ ರೀತಿ ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕು. ಆ ಚಿತ್ರದಲ್ಲಿ ಪುನೀತ್ ಮತ್ತು ನಾನು ಜತೆಯಾಗಿ ನಟಿಸುತ್ತೇವೆ ಎಂದರೆ, ಅದಕ್ಕಿಂತ ಖುಷಿಯ ವಿಚಾರ ಬೇರೊಂದಿಲ್ಲ. ನಾನು ಕೂಡ ಆ ಪ್ರಾಜೆಕ್ಟ್​ಗಾಗಿ ಕಾದಿದ್ದೇನೆ.

Leave a Reply

Your email address will not be published. Required fields are marked *