ಮತ್ತೆ ಅಖಾಡಕ್ಕಿಳಿದ ಶಿವರಾಜ್​ಕುಮಾರ್

ಬೆಂಗಳೂರು: ಸದಾ ಒಂದಿಲ್ಲೊಂದು ಸಿನಿಮಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವವರು ನಟ ಶಿವರಾಜ್​ಕುಮಾರ್. ವರ್ಷಕ್ಕೆ ಏನಿಲ್ಲವೆಂದರೂ ಮೂರು ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸುತ್ತಾರೆ. ಆದರೆ ಇತ್ತೀಚೆಗೆ ಭುಜದ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಪಡೆಯಲು ಲಂಡನ್​ಗೆ ತೆರಳಿದ್ದರು. ಜುಲೈ 10ರಂದು ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ನಂತರ ಎರಡು ತಿಂಗಳು ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರಿಂದ ಯಾವುದೇ ಸಿನಿಮಾ ಶೂಟಿಂಗ್​ನಲ್ಲೂ ಶಿವಣ್ಣ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಭಾಗಶಃ ಚೇತರಿಸಿಕೊಂಡಿರುವ ‘ಹ್ಯಾಟ್ರಿಕ್ ಹೀರೋ’ ಮತ್ತೆ ಕ್ಯಾಮರಾ ಎದುರಿಸಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಒಂದು ಜಾಹೀರಾತಿನ ಚಿತ್ರೀಕರಣದಲ್ಲಿ ಅವರು ಭಾಗವಹಿಸಿದ್ದರು. ಎ. ಹರ್ಷ ನಿರ್ದೇಶಿಸುತ್ತಿರುವ ‘ಭಜರಂಗಿ 2’ ಚಿತ್ರದ ಶೂಟಿಂಗ್​ಗೂ ಬುಧವಾರದಿಂದ (ಸೆ.11) ಶಿವಣ್ಣ ಹಾಜರಿರಲಿದ್ದಾರೆ.

ಭುಜದ ನೋವಿನ ಸಮಸ್ಯೆ ಶೇ.70 ಭಾಗ ನಿವಾರಣೆ ಆಗಿದೆಯಂತೆ. ಹಾಗಾಗಿ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಹಾಗಂತ ಈಗಲೇ ಫೈಟಿಂಗ್​ನಂಥ ದೃಶ್ಯಗಳಲ್ಲಿ ಶಿವರಾಜ್​ಕುಮಾರ್ ನಟಿಸುವುದಿಲ್ಲ. ಸದ್ಯಕ್ಕೆ ಕೆಲವು ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಳ್ಳಲಿದ್ದಾರೆ. ನವೆಂಬರ್​ನಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳ ಶೂಟಿಂಗ್ ಆರಂಭವಾಗಲಿದ್ದು, ಅದಕ್ಕಾಗಿ ಮುಂದಿನ ದಿನಗಳಲ್ಲಿ ತಯಾರಿ ಮಾಡಿಕೊಳ್ಳಲಿದ್ದಾರೆ. ಈ ಬಾರಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ‘ಭಜರಂಗಿ 2’ ಸಿದ್ಧವಾಗುತ್ತಿರುವುದು ವಿಶೇಷ. ಜಯಣ್ಣ ಕಂಬೈನ್ಸ್ ಬ್ಯಾನರ್​ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ‘ಭಜರಂಗಿ 2’ ಮಾತ್ರವಲ್ಲದೆ ಶಿವಣ್ಣ ಅವರ ಕೈಯಲ್ಲೀಗ ಹಲವು ಚಿತ್ರಗಳಿವೆ. ಪ್ರಮೋದ್ ಚಕ್ರವರ್ತಿ ನಿರ್ದೇಶಿಸಿರುವ ‘ದ್ರೋಣ’ ಕೂಡ ಬಿಡುಗಡೆಗೆ ಹತ್ತಿರವಾಗುತ್ತಿದೆ. ಅದರಲ್ಲಿ ಶಿವರಾಜ್​ಕುಮಾರ್​ಗೆ ವಿಶೇಷ ಪಾತ್ರವಿದೆ. ಯೋಗೀಶ್ ದ್ವಾರಕೀಶ್ ನಿರ್ಮಾಣ ಮಾಡುತ್ತಿರುವ ‘ಆಯುಷ್ಮಾನ್​ಭವ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

Leave a Reply

Your email address will not be published. Required fields are marked *