ಶಿವಣ್ಣನ ಪಾತ್ರ ಗೆಲ್ಲಬೇಕೆಂದು ಆ ದೃಶ್ಯ ಮಾಡಿದ್ದು: ಪ್ರೇಮ್​

ಬೆಂಗಳೂರು: ಶಿವಣ್ಣನ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮಿಸಿ. ದಯವಿಟ್ಟು ಸಿನಿಮಾವನ್ನು ಸಿನಿಮಾ ರೀತಿ ನೋಡಿ ಎಂದು ದಿ ವಿಲನ್​ ಚಿತ್ರ ನಿರ್ದೇಶಕ ಪ್ರೇಮ್​ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಸಿನಿಮಾದಲ್ಲಿ ಶಿವಣ್ಣನಿಗೆ ಸುದೀಪ್ ಹೊಡೆದಿದ್ದಾರೆ. ಮತ್ತೆ ತಿರುಗಿ ಶಿವಣ್ಣ ಹೊಡೆದಿಲ್ಲ ಎಂದು ಕೇಳುತ್ತಿದ್ದೀರಾ? ಶಿವಣ್ಣ ಮತ್ತೆ ಹೊಡೆದಿದ್ರೆ ಪಾತ್ರ ಗೆಲ್ಲುತ್ತಿರಲಿಲ್ಲ. ಶಿವಣ್ಣನ ಪಾತ್ರ ಗೆಲ್ಲಬೇಕೆಂದು ಆ ದೃಶ್ಯ ಮಾಡಿದ್ದು. ಅಭಿಮಾನಿಗಳಿಗೆ ನೋವಾಗಬೇಕು ಅಂತ ಮಾಡಿಲ್ಲ . ನಾನು ಶಿವಣ್ಣನನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ.

ವಿವಾದ ಆಗಿರುವುದು ಸೋಷಿಯಲ್ ಮೀಡಿಯಾಗಳಿಂದ ಎಂದು ಗೊತ್ತಾಯಿತು. ಹಾಗಾಗಿ ನಾನು ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ, ಸಿನಿಮಾ ಹಿಟ್ ಆಗುತ್ತಿದೆ ಎಂದರೆ ಅದು ನಿಮ್ಮಿಂದಲೇ. ಶಿವಣ್ಣನನ್ನು ರಾಕ್ಷಸನ ರೀತಿ ತೋರಿಸಲು ಸಾಧ್ಯವಿಲ್ಲ. ಅವರ ಇಮೇಜ್ ಅನ್ನು ಹಾಳು ಮಾಡಲು ಸಾಧ್ಯವಿಲ್ಲ. ನಿಮಗೆ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)