ಶಿವಣ್ಣ-ರಚಿತಾ ಹೊಸ ಜೋಡಿ

ಬೆಂಗಳೂರು: ಕನ್ನಡದ ಬಹುತೇಕ ಸ್ಟಾರ್ ನಟರ ಜತೆ ತೆರೆಹಂಚಿಕೊಂಡಿದ್ದು ನಟಿ ರಚಿತಾ ರಾಮ್ ಹೆಚ್ಚುಗಾರಿಕೆ. ಆದರೆ ಶಿವರಾಜ್​ಕುಮಾರ್ ಜತೆ ನಟಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಆ ಕೊರಗನ್ನೂ ನೀಗಿಸಿದ್ದು ‘ರುಸ್ತುಂ’ ಸಿನಿಮಾ. ಸಾಹಸ ನಿರ್ದೇಶಕ ರವಿವರ್ವ ಆಕ್ಷನ್-ಕಟ್ ಹೇಳುತ್ತಿರುವ ಆ ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ಜತೆ ರಚಿತಾ ಕೂಡ ನಾಯಕಿ. ಆದರೆ ಅವರು ಅಲ್ಲಿ ವಿವೇಕ್ ಒಬೆರಾಯ್ಗೆ ಜೋಡಿ ಆಗುತ್ತಿದ್ದಾರೆಯೇ ಹೊರತು ಶಿವಣ್ಣನಿಗೆ ಅಲ್ಲ. ಹಾಗಂತ ಅಭಿಮಾನಿಗಳು ಬೇಸರಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ‘ರುಸ್ತುಂ’ನಲ್ಲಿ ಮಿಸ್ ಆಗಿದ್ದು, ಹೊಸದೊಂದು ಸಿನಿಮಾದಲ್ಲಿ ಸಾಧ್ಯವಾಗುತ್ತಿದೆ. ಖ್ಯಾತ ನಿರ್ದೇಶಕ ಪಿ. ವಾಸು ಬತ್ತಳಿಕೆಯಿಂದ ಬರಲಿರುವ ಹೊಸ ಚಿತ್ರದಲ್ಲಿ ಶಿವರಾಜ್​ಕುಮಾರ್ ಮತ್ತು ರಚಿತಾ ರಾಮ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಶಿವರಾಜ್​ಕುಮಾರ್ ಮತ್ತು ಪಿ. ವಾಸು ಕಾಂಬಿನೇಷನ್​ನಲ್ಲಿ ಮೂಡಿಬಂದಿದ್ದ ‘ಶಿವಲಿಂಗ’ ಚಿತ್ರ ಶತದಿನೋತ್ಸವ ಆಚರಿಸಿಕೊಳ್ಳುವ ಮೂಲಕ ನಿರ್ವಪಕರ ಮೊಗದಲ್ಲಿ ನಗು ಮೂಡಿಸಿತ್ತು. ಇದೀಗ ಎರಡನೇ ಬಾರಿಗೆ ಈ ನಟ-ನಿರ್ದೇಶಕನ ಕಾಂಬಿನೇಷನ್​ನಲ್ಲಿ ಸಿನಿಮಾ ತಯಾರಾಗುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಸೃಷ್ಟಿಯಾಗಿದೆ. ವಿಶೇಷವೆಂದರೆ, ಇನ್ನೂ ಹೆಸರಿಡದ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ದ್ವಾರಕೀಶ್ ಒಡೆತನದ ‘ದ್ವಾರಕೀಶ್ ಚಿತ್ರ’ ಸಂಸ್ಥೆ. ಕಳೆದ 45 ವರ್ಷಗಳಿಂದೀಚೆಗೆ ಈ ಬ್ಯಾನರ್​ನಲ್ಲಿ ರಾಜ್​ಕುಮಾರ್ ಕುಟುಂಬದ ಯಾವುದೇ ನಟರ ಸಿನಿಮಾ ಮೂಡಿಬಂದಿರಲಿಲ್ಲ. ‘ಬಹುವರ್ಷಗಳಿಂದ ದ್ವಾರಕೀಶ್ ಅವರ ಜತೆ ಒಡನಾಟ ಇದ್ದರೂ ಅವರ ನಿರ್ವಣದ ಸಿನಿಮಾದಲ್ಲಿ ನನಗೆ ನಟಿಸಲು ಸಾಧ್ಯವಾಗಿಲ್ಲ ಎಂಬುದೇ ಬೇಸರದ ಸಂಗತಿ. ಶೀಘ್ರದಲ್ಲೇ ಅವರ ಜತೆ ಚಿತ್ರ ಮಾಡುವ ಹಂಬಲ ಇದೆ’ ಎಂದು ಇತ್ತೀಚೆಗೆ ಸ್ವತಃ ಶಿವರಾಜ್​ಕುಮಾರ್ ಹೇಳಿಕೊಂಡಿದ್ದರು. ಪರಿಣಾಮ, ಪಿ. ವಾಸು ನಿರ್ದೇಶನದ ಈ ಚಿತ್ರಕ್ಕೆ ಹಣ ಹೂಡಲು ದ್ವಾರಕೀಶ್ ಪುತ್ರ ಯೋಗಿ ಮುಂದಾದರು. ಪ್ರಸ್ತುತ ಈ ಚಿತ್ರಕ್ಕೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

ನಾಯಕಿಯಾಗಿ ರಚಿತಾ ನಟಿಸಿದರೆ ಒಳಿತು ಎಂಬ ಅಭಿಪ್ರಾಯ ಚಿತ್ರತಂಡದಲ್ಲಿ ಕೇಳಿಬಂದಿದೆಯಂತೆ. ಹಾಗಾಗಿ ರಚಿತಾ ಜತೆ ನಿರ್ವಪಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬುದು ಮೂಲಗಳ ಮಾಹಿತಿ.