ಕಿಚ್ಚ ಸುದೀಪ್ ಕಟೌಟ್​ಗೆ ರಕ್ತದ ಅಭಿಷೇಕ !

ಶಿವಮೊಗ್ಗ: ನೆಚ್ಚಿನ ನಟರ ಕಟೌಟ್​ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ, ಹೂವಿನ ಹಾರ ಹಾಕುವುದು ಸಾಮಾನ್ಯ. ಆದರೆ ಶಿವರಾಜ್​ಕುಮಾರ್ ಮತ್ತು ಸುದೀಪ್ ನಟನೆಯ ‘ದಿ ವಿಲನ್’ ಚಿತ್ರ ಶತದಿನ ಪೂರೈಸಲೆಂದು ಅಭಿಮಾನಿಗಳು ಚಿತ್ರಮಂದಿರದ ಎದುರೇ ಕುರಿ ಬಲಿ ಕೊಟ್ಟು ರಕ್ತದ ಅಭಿಷೇಕ ಮಾಡಿ ವಿಕೃತಿ ಮೆರೆದಿದ್ದಾರೆ.

ಪ್ರೇಮ್ ನಿರ್ದೇಶನದ ಶತಕೋಟಿ ವೆಚ್ಚದ ಅದ್ದೂರಿ ‘ದಿ ವಿಲನ್’ ಸಿನಿಮಾ ರಾಜ್ಯಾದ್ಯಂತ ಗುರುವಾರ ತೆರೆ ಕಂಡಿದ್ದು, ಶಿಕಾರಿಪುರದ ಮಾಲತೇಶ್ ಚಿತ್ರಮಂದಿರದಲ್ಲೂ ಭರ್ಜರಿ ರೆಸ್ಪಾಸ್ ಸಿಕ್ಕಿದೆ. ಸಿನಿಮಾ ಪ್ರದರ್ಶನದ ಮೊದಲ ಶೋ ಮುನ್ನ ಶಿವಣ್ಣ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಚಿತ್ರಮಂದಿರದಲ್ಲಿ ನಾಯಕ ನಟರ ಕಟೌಟ್ ಮುಂದೆ ಜೀವಂತ ಕುರಿ ತಲೆ ಕತ್ತರಿಸಿ ರಕ್ತದ ಅಭಿಷೇಕ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಲಿ ನೀಡಿದ ನಂತರ ಕುರಿ ದೇಹದಿಂದ ಚಿಮ್ಮುತ್ತಿದ್ದ ರಕ್ತವನ್ನು ಫ್ಲೆಕ್ಸ್​ನಲ್ಲಿದ್ದ ಕಿಚ್ಚ ಸುದೀಪ್ ಭಾವಚಿತ್ರದ ಮೇಲೆ ಎರಚಿದ್ದಾರೆ. ಈ ಮೂಲಕ ಅಭಿಮಾನಿಗಳು ವಿಚಿತ್ರ ಅಭಿಮಾನ ಮೆರೆದಿದ್ದಾರೆ. ಮಲೆನಾಡಿಗೂ ಇಂತಹ ವಿಚಿತ್ರ ಸಂಭ್ರಮ ಕಾಲಿಟ್ಟಿರುವುದು ವಿಪರ್ಯಾಸವಾಗಿದ್ದು, ಸಾರ್ವಜನಿಕವಾಗಿ ಪ್ರಾಣಿ ಬಲಿ ನಿಷೇಧವಿದ್ದರೂ ಚಿತ್ರಮಂದಿರದ ಎದುರೇ ಕುರಿ ಬಲಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.