ಬೆಂಗಳೂರು: ಮುಂದಿನ ಮೂರು ವರ್ಷಗಳಲ್ಲಿ ಆರೋಗ್ಯ ಕರ್ನಾಟಕ ನಿರ್ಮಾಣ ನಮ್ಮ ಸಂಕಲ್ಪ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ, ಆರೋಗ್ಯ ಇಲಾಖೆ ಸುಧಾರಣೆಯಲ್ಲಿ ತಾವು ಇಟ್ಟಿರುವ ಹೆಜ್ಜೆಗಳನ್ನು ಬಿಚ್ಚಿಟ್ಟರು.
ಒಂದೇ ರಾತ್ರಿಯಲ್ಲಿ ಎಲ್ಲ ಅಭಿವೃದ್ಧಿಯಾಗುತ್ತದೆ ಎಂಬ ಭ್ರಮೆ ನಮಗಿಲ್ಲ. ಸಾಕಷ್ಟು ನ್ಯೂನತೆ, ಸಮಸ್ಯೆ, ಸವಾಲುಗಳು ನಮ್ಮ ಮುಂದಿವೆ. ಅವುಗಳನ್ನು ಹಂತ ಹಂತವಾಗಿ ಪರಿಹರಿಸುವ ಮೂಲಕ ಆರೋಗ್ಯ ಕರ್ನಾಟಕ ನಿರ್ವಿುಸಲು ಪಣ ತೊಟ್ಟಿರುವುದಾಗಿ ತಿಳಿಸಿದರು. ತಜ್ಞ ವೈದ್ಯರ ಕೊರತೆ, ಮೂಲಸೌಕರ್ಯಗಳ ಸಮಸ್ಯೆಗಳು ಗಮನದಲ್ಲಿವೆ. ಇವೆಲ್ಲವನ್ನೂ ಪರಿಹರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಸರ್ಕಾರಿ ಕೋಟಾ ಸೀಟು ಪಡೆದು ವೈದ್ಯ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಸರ್ಕಾರಿ ಸೇವೆಗೆ ಬರುತ್ತಿಲ್ಲ. ವೈದ್ಯರ ಮನೋಭಾವ ಬದಲಾಗದ ಹೊರತು ಸುಧಾರಣೆ ಸುಲಭವಲ್ಲ ಎಂದ ಅವರು, ಕೆಪಿಎಂಸಿ ಕಾಯ್ದೆ ಜಾರಿಯಿಂದ ಖಾಸಗಿ ವಲಯದಲ್ಲೂ ಸಾಕಷ್ಟು ಬದಲಾವಣೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 1.2 ಕೋಟಿ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸುವ ದೇಶಕ್ಕೇ ಮಾದರಿಯಾದ ಆರೋಗ್ಯ ಕರ್ನಾಟಕ ಯೋಜನೆಯನ್ನು ಕರ್ನಾಟಕ ರೂಪಿಸಿದೆ. ಕೇಂದ್ರದ ಆಯುಷ್ಮಾನ್ ಸೌಲಭ್ಯವೂ ರಾಜ್ಯದ ಜನರಿಗೆ ದೊರೆಯಬೇಕು ಎಂಬ ಉದ್ದೇಶದಿಂದ ಎರಡೂ ಯೋಜನೆ ವಿಲೀನಗೊಳಿಸಿ ಕೇಂದ್ರದ ಜತೆ ಒಡಂಬಡಿಕೆ ಮಾಡಿಕೊಂಡು ಆಯುಷ್ಮಾನ್-ಆರೋಗ್ಯ ಕರ್ನಾಟಕ ಎಂದು ಜಾರಿಗೊಳಿಸಲಾಗಿದೆ. ಈಗಾಗಲೇ ಈ ಯೋಜನೆಯಲ್ಲಿ 400 ಕೋಟಿ ರೂ. ವೆಚ್ಚ ಮಾಡಿ ಆರೋಗ್ಯ ಸೇವೆ ಒದಗಿಸಲಾಗಿದೆ ಎಂದು ಹೇಳಿದರು. ಆಯುಷ್ಮಾನ್- ಆರೋಗ್ಯ ಕರ್ನಾಟಕ ಜಾರಿಯಿಂದ ಸರ್ಕಾರಿ ಆಸ್ಪತ್ರೆಗಳಿಗೂ ಸಾಕಷ್ಟು ಆದಾಯ ದೊರೆಯಲಿದೆ. ಅದನ್ನು ಬಳಸಿಕೊಂಡು ಆಸ್ಪತ್ರೆಗಳಿಗೆ ಮೂಲಸೌಕರ್ಯ ಕಲ್ಪಿಸುವ ಹಾಗೂ ಆಸ್ಪತ್ರೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ತಜ್ಞ ವೈದ್ಯರ ಕೊರತೆ ನೀಗಿಸುವ ಸಂಬಂಧ ಡಿಎನ್ಬಿ ಕೋರ್ಸ್ ಆರಂಭಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ವೈದ್ಯರ ಕೊರತೆ ನೀಗಲಿದೆ ಎಂದರು. ಆಸ್ಪತ್ರೆಗಳನ್ನು ಡಿಜಿಟಲೈಸೇಷನ್ ಮಾಡುವ ಉದ್ದೇಶದಿಂದ ಇ-ಹಾಸ್ಪಿಟಲ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 47 ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ಉಳಿದ ಆಸ್ಪತ್ರೆಗಳನ್ನೂ ಇ-ಹಾಸ್ಪಿಟಲ್ ವ್ಯಾಪ್ತಿಗೆ ತಂದು ಆರೋಗ್ಯ ಸೇವೆಯಲ್ಲಿ ಸುಧಾರಣೆ ತರಲಾಗುವುದು ಎಂದು ತಿಳಿಸಿದರು.
ಭರಪೂರ ಕರೆ ಅರ್ಧಗಂಟೆ ವಿಸ್ತರಣೆ
ವಿಜಯವಾಣಿ-ದಿಗ್ವಿಜಯ ಫೋನ್-ಇನ್ ಮೂಲಕ ಆರೋಗ್ಯ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ರಾಜ್ಯಾದ್ಯಂತ ಸಾವಿರಾರು ಮಂದಿ ಧಾವಂತ ತೋರಿದರು. ಬೆಳಗ್ಗೆ 11ರಿಂದ 12 ಗಂಟೆ ಅವಧಿಯಲ್ಲಿ ದಿಗ್ವಿಜಯ ವಾಹಿನಿಯಲ್ಲಿ ಲೈವ್ ಕಾರ್ಯಕ್ರಮ ನಿಗದಿಯಾಗಿದ್ದರೂ, ದೂರವಾಣಿ ಕರೆ ನಿಲ್ಲದ ಕಾರಣ 12.30ರವರೆಗೂ ವಿಸ್ತರಿಸಲಾಗಿತ್ತು. ಇಲಾಖೆಯ ಕೆಲವು ಸಿಬ್ಬಂದಿ ಸಹ ಸಮಸ್ಯೆಯನ್ನು ಈ ವೇದಿಕೆಯಲ್ಲಿ ಹಂಚಿಕೊಂಡಿದ್ದು ವಿಶೇಷ.
ಶಿವಮೊಗ್ಗದಲ್ಲೇ ಇನ್ಮುಂದೆ ಮಂಗನಕಾಯಿಲೆ ಪರೀಕ್ಷೆ
ಶಿವಮೊಗ್ಗ ಜಿಲ್ಲೆಯಲ್ಲಿ ಹಲವೆಡೆ ಮಂಗನ ಕಾಯಿಲೆ ಹರಡುತ್ತಿದೆ. ಸತ್ತವರ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ರೋಗ ನಿಯಂತ್ರಣ ಮಾಡಬೇಕು ಎಂದು ಶಿವರಾಜ್ ಎಂಬುವರು ಫೋನ್-ಇನ್ನಲ್ಲಿ ಸಚಿವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಶಿವಾನಂದ ಪಾಟೀಲ, ಜಿಲ್ಲೆಯ ನಾಗರಿಕರು ಹಲವು ವರ್ಷಗಳಿಂದ ಮಂಗನ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಬಾರಿಯೂ ಕೆಲವರು ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆ ಹಾಗೂ ಇತರ ಸರ್ಕಾರಿ ಆಸ್ಪತ್ರೆಗಳಿಗೆ ಮಂಗನ ಕಾಯಿಲೆ ಪರೀಕ್ಷೆ ಉಪಕರಣಗಳನ್ನು ವಿತರಿಸಿ ಅಳವಡಿಸುವಂತೆ ಸೂಚನೆ ನೀಡಿದೆ. ಇನ್ನು ಮುಂದೆ ಮಂಗನ ಕಾಯಿಲೆ ಪರೀಕ್ಷೆಗೆ ದೂರದ ಪುಣೆಗೆ ತೆರಳಬೇಕಿಲ್ಲ. ಶಿವಮೊಗ್ಗದಲ್ಲೇ ಈ ಕಾಯಿಲೆ ಪರೀಕ್ಷೆ ನಡೆಸಬಹುದು ಎಂದು ಹೇಳಿದರು.
6 ಮಂದಿಗೆ 1 ಲಕ್ಷ ಪರಿಹಾರ
ಮಂಗನ ಕಾಯಿಲೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮೃತಪಟ್ಟ ಆರು ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ 1 ಲಕ್ಷ ರೂ. ಪರಿಹಾರ ನೀಡಲು ಆರೋಗ್ಯ ಸಚಿವರು ನಿರ್ಧರಿಸಿದ್ದಾರೆ. ಈ ಸಂಗತಿಯನ್ನು ಅವರು ಫೋನ್ ಇನ್ ವೇಳೆ ಬಹಿರಂಗಪಡಿಸಿದರು. ಇದು ಪ್ರಚಾರ ಮಾಡಿಕೊಳ್ಳುವ ಸಂಗತಿಯಲ್ಲ ಎಂದ ಅವರು, ನೆರವು ನೀಡುವ ಭರವಸೆ ನೀಡಿದ್ದೆ. ನಡೆದುಕೊಳ್ಳುತ್ತಿದ್ದೇನೆ ಎಂದರು. ಸರ್ಕಾರದಿಂದ ಪರಿಹಾರ ನೀಡುವುದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಅವರಿಗೆ ವಿಷಯ ಗಮನಕ್ಕೆ ತಂದಿರುವುದಾಗಿ ಹೇಳಿದರಲ್ಲದೆ, ಐದು ಆಂಬ್ಯುಲೆನ್ಸ್ ಗಳನ್ನು ಸಾಗರಕ್ಕೆ ಕಳಿಸಲಾಗಿದೆ ಎಂದು ತಿಳಿಸಿದರು.
ತರೀಕೆರೆಯಲ್ಲಿನ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ 120-150 ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದು ಚಿಕ್ಕದಾಗಿದ್ದು, ಮೇಲ್ದರ್ಜೆಗೇರಿಸಿದರೆ ರೋಗಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ, ಇಲ್ಲಿ ಅತಿ ಹೆಚ್ಚು ಹೆರಿಗೆ ಆಗುತ್ತಿದೆ.
| ವಿಕಾಸ್ ಚಿಕ್ಕಮಗಳೂರು
ಆರೋಗ್ಯ ಕೇಂದ್ರದ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ಅದನ್ನಾಧರಿಸಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು.
ಇ- ಆಸ್ಪತ್ರೆಗೆ ಹೊಸ ಸಾಫ್ಟ್ವೇರ್
ಇಂಟರ್ನೆಟ್ ಆಧಾರಿತ ವೈದ್ಯಕೀಯ ಸೇವೆ ನೀಡುವ ಇ-ಆಸ್ಪತ್ರೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಆರೋಗ್ಯ ಇಲಾಖೆ ಎನ್ಐಸಿ ಸಹಯೋಗದಲ್ಲಿ ಹೊಸ ಸಾಫ್ಟ್ ವೇರ್ ರಚನೆಗೆ ಮುಂದಾಗಿದೆ. ಜತೆಗೆ ಎರಡನೇ ಹಂತದಲ್ಲಿ 40 ತಾಲೂಕು ಆಸ್ಪತ್ರ್ರೆಗಳಿಗೆ ಇ-ಆಸ್ಪತ್ರೆ ವ್ಯವಸ್ಥೆ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ಕುಮಾರ್ ಪಾಂಡೆ ತಿಳಿಸಿದರು. ಈಗಾಗಲೇ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಆಯ್ದ ತಾಲೂಕು ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಇದ್ದು, 10 ಮಾಡ್ಯೂಲ್ ಪೈಕಿ ಕೆಲವು ಕಡೆ ಐದು ಮಾಡ್ಯೂಲ್ ಮಾತ್ರ ಕಾರ್ಯನಿರ್ವಹಣೆಯಾಗುತ್ತಿದೆ ಎಂದರು.
ಮಾತಷ್ಟೇ ಅಲ್ಲ, ಪರಿಹಾರವೂ ಉಂಟು
ವಿಜಯವಾಣಿ-ದಿಗ್ವಿಜಯ ನಡೆಸಿದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಆರೋಗ್ಯ ಸಚಿವರು ಮತ್ತು ಇಲಾಖೆ, ಈ ವೇದಿಕೆಯಲ್ಲಿ ಕೊಟ್ಟ ಭರವಸೆ ಮತ್ತು ಅನುಷ್ಠಾನದ ಬಗ್ಗೆ ವರದಿಯನ್ನು ಜನರ ಮುಂದಿಡಲಿದೆ. ಫೋನ್-ಇನ್ ವೇಳೆ ಜನ ಸಾಮಾನ್ಯರು ಆಸ್ಪತ್ರೆ ಮತ್ತು ಸರ್ಕಾರಿ ಸೇವೆಗಳ ಬಗೆಗಿನ ಸಮಸ್ಯೆ ಹೇಳಿಕೊಂಡಿದ್ದರು. ಕರೆ ಮಾಡಿದವರ ಸಂಖ್ಯೆ ಸಂಗ್ರಹಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಪತ್ತೆ ಹಚ್ಚಿ ಪರಿಹಾರ ನೀಡುವರು. ಬಳಿಕ ವರದಿ ಕೂಡ ಸಿದ್ಧಪಡಿಸಲಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ, ರೋಗಿಗಳ ಹೆಚ್ಚಳದಿಂದ ಅವ್ಯವಸ್ಥೆ ಹೆಚ್ಚಾಗಿದ್ದು ಎಲ್ಲದಕ್ಕೂ ಸಾಲು ನಿಲ್ಲಬೇಕಾಗಿದೆ. ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ.
| ದೇವರೆಡ್ಡಿ ಹುಬ್ಬಳ್ಳಿ
ಅಲ್ಲಿನ ಅವ್ಯವಸ್ಥೆ ನನ್ನ ಗಮನಕ್ಕೂ ಬಂದಿದೆ. ಆದರೆ, ಆ ಆಸ್ಪತ್ರೆ ನಮ್ಮ ಇಲಾಖೆ ವ್ಯಾಪ್ತಿಗೆ ಒಳಪಡುವುದಿಲ್ಲ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದೆ. ಅಲ್ಲಿನ ಸಮಸ್ಯೆ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು.
ಹೆಚ್ಚಿನ ಅನುದಾನಕ್ಕೆ ಮನವಿ
ಮುಂದಿನ ತಿಂಗಳು ಮಂಡನೆಯಾಗಲಿರುವ ಆಯವ್ಯಯದಲ್ಲಿ ಇಲಾಖೆಗೆ ಹೆಚ್ಚಿನ ಅನುದಾನಕ್ಕೆ ಸಿಎಂಗೆ ಮನವಿ ಮಾಡಲಾಗುತ್ತದೆ. ಅನುದಾನ ಸಿಕ್ಕಲ್ಲಿ ಸುಧಾರಣೆ ಮಾಡಬಹುದಾಗಿದೆ. ಅರ್ಧದಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳನ್ನು ತುರ್ತು ದುರಸ್ತಿ ಮಾಡಬೇಕಾಗಿದೆ ಎಂದು ಶಿವಾನಂದ ಪಾಟೀಲ ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಮರ್ಪಕವಾಗಿ ವೇತನವಾಗಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ.
| ರವಿ ಮೈಸೂರು
ವೇತನವಾಗದಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಲ್ಲಿ ದೂರು ನೀಡಿ. ಅವರಿಗೆ ವೇತನ ಪಾವತಿಸುವಂತೆ ಸೂಚಿಸುತ್ತೇನೆ.
ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೇರಿ ಇನ್ನಿತರ ಸೌಲಭ್ಯಗಳ ಕೊರತೆಯಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ.
| ಪ್ರಸನ್ನ ಬೆಂಗಳೂರು
ಜನರಿಗೆ ಅನುಕೂಲವಾಗುವ ಸಲುವಾಗಿ ರಾಜ್ಯದ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗುತ್ತಿದೆ. ಜತೆಗೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಅಳವಡಿಕೆಗೆ ಕ್ರಮಕೈಗೊಳ್ಳಲಾಗುತ್ತಿದೆ.
ತುಮಕೂರು ಆಸ್ಪತ್ರೆಯ ಕಾರಿಡಾರ್ನಲ್ಲಿ ಮಲಗಿದ್ದ ಮಹಿಳೆ ಮತ್ತು ಮಗುವಿನ ಸಮಸ್ಯೆ ವಿಚಾರಿಸದೆ ಮುಂದೆ ಹೋದಿರಿ. ಅದರ ಬಗ್ಗೆ ಸಾಕಷ್ಟು ಟೀಕೆಗಳು ಎದುರಾದ ಬಗ್ಗೆ ಏನು ಹೇಳುತ್ತೀರಿ?
| ಪುಟ್ಟಸ್ವಾಮಿ ಬೆಂಗಳೂರು
ಕಾರಿಡಾರ್ನಲ್ಲಿ ಮಲಗಿದ್ದ ಮಹಿಳೆ ಯಾವುದೇ ಚಿಕಿತ್ಸೆ ಪಡೆಯಲು ಬಂದಿರಲಿಲ್ಲ. ಬದಲಿಗೆ ಆಕೆಯ ಸೊಸೆಗೆ ಮಗುವಾಗಿದ್ದು, ಆಕೆಯನ್ನು ವಾರ್ಡ್ನಲ್ಲಿರಿಸಲಾಗಿತ್ತು. ಹೀಗಾಗಿ ಮಹಿಳೆಯನ್ನು ವಾರ್ಡ್ ಒಳಗೆ ಬಿಡಲು ಸಾಧ್ಯವಾಗಿರಲಿಲ್ಲ. ಆದರೂ, ಆಸ್ಪತ್ರೆ ಸಿಬ್ಬಂದಿಗಳಲ್ಲಿ ಕಾರಿಡಾರ್ನಲ್ಲಿ ಮಲಗಿರುವ ಬಗ್ಗೆ ಪ್ರಶ್ನಿಸಿದ್ದೇನೆ. ಮಾಧ್ಯಮಗಳು ತಪ್ಪಾಗಿ ಬಿಂಬಿಸಿ ನನ್ನ ಮೇಲೆ ಅನುಮಾನ ಹುಟ್ಟು ಹಾಕುವಂತೆ ಮಾಡಿದವು.
ಆರೋಗ್ಯ ಕರ್ನಾಟಕ ಯೋಜನೆ ಬಹುತೇಕ ಆಸ್ಪತ್ರೆಗಳಿಗೆ ಅನ್ವಯವಾಗುತ್ತಿಲ್ಲ. ಹೀಗಾಗಿ ಸಮರ್ಪಕ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರ ಒದಗಿಸಿ.
| ಕುಮಾರಸ್ವಾಮಿ ಹೆಬ್ಬಾಳ
ಆರೋಗ್ಯ ಕರ್ನಾಟಕ ಯೋಜನೆ ಸಂಬಂಧ ರಾಜ್ಯ ಸರ್ಕಾರ ಯಾವ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆಯೋ ಅಲ್ಲಿ ಮಾತ್ರ ಚಿಕಿತ್ಸೆ ಕೊಡಲಾಗುತ್ತದೆ. ಒಟ್ಟು 1,600 ಕಾಯಿಲೆಗೆ ಚಿಕಿತ್ಸೆ ಪಡೆಯಬಹುದಾಗಿದೆ. ಇನ್ನು ಹೆಚ್ಚಿನ ಆಸ್ಪತ್ರೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ರ್ಚಚಿಸಲಾಗುತ್ತಿದೆ.
ದಾವಣಗೆರೆಯಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ.
| ಅನೀರ್ ಪಾಷ ದಾವಣಗೆರೆ
ಕೇಂದ್ರ ಸರ್ಕಾರ 6 ತಾಯಿ-ಮಗು ಆಸ್ಪತ್ರೆಗಳನ್ನು ರಾಜ್ಯಕ್ಕೆ ಮಂಜೂರು ಮಾಡಿದೆ. ಅದರಲ್ಲಿ ದಾವಣಗೆರೆಗೂ ಒಂದು ನೀಡಲಾಗುತ್ತಿದೆ. ಅದರ ಮೂಲಕ ದಾವಣಗೆರೆಯಲ್ಲಿನ ಹೆರಿಗೆ ಆಸ್ಪತ್ರೆ ಸಮಸ್ಯೆ ನಿವಾರಿಸಲಾಗುವುದು.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಚೆನ್ನಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಮರ್ಪಕವಾದ ವ್ಯವಸ್ಥೆ ಇಲ್ಲದಂತಾಗಿದೆ.
| ಆನಂದಕುಮಾರ್ ಬೆಂಗಳೂರು
ಕಿದ್ವಾಯಿ ಆಸ್ಪತ್ರೆ ಬಗ್ಗೆ ಎಲ್ಲೆಡೆ ಒಳ್ಳೆಯ ಅಭಿಪ್ರಾಯವಿದೆ. ಅಲ್ಲಿನ ಅನನುಕೂಲದ ಬಗ್ಗೆ ಪರಿಶೀಲನೆ ನಡೆಸಿ ಪರಿಹರಿಸಲಾಗುತ್ತದೆ.
ಪ್ರಶ್ನೆಗಳಿಗೆ ಆರೋಗ್ಯ ಸಚಿವರ ಉತ್ತರ
426 ಆಂಬುಲೆನ್ಸ್ ವಿತರಣೆ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆಂಬುಲೆನ್ಸ್ ಕೊರತೆ ಇದೆ. ಇದರಿಂದ ಬಡ ರೋಗಿಗಳಿಗೆ ತೊಂದರೆಯಾಗುತ್ತಿದೆ. ಇತ್ತೀಚೆಗೆ ಸರ್ಕಾರ 426 ಆಂಬುಲೆನ್ಸ್ಗಳನ್ನು ಖರೀದಿಸಿ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಿಗೂ ವಿತರಣೆ ಮಾಡಿದೆ. ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ವಿಷಮಿಶ್ರಿತ ಪ್ರಸಾದ ದುರಂತ ಸಂದರ್ಭ ಬೇರೆ ಕಡೆಯಿಂದಲೂ ಆಂಬುಲೆನ್ಸ್ ಪಡೆಯಲಾಗಿತ್ತು. ಆಗ ಸಮಸ್ಯೆ ಉಂಟಾಗಿರಬಹುದು, ಈಗ ಸಮಸ್ಯೆ ಇಲ್ಲ ಎಂದು ಶಿವಾನಂದ ಪಾಟೀಲ ಹೇಳಿದರು.
ನರ್ಸಿಂಗ್ನಲ್ಲಿ ಡಿಪ್ಲೊಮಾ ಮಾಡಿರುವ ಹಲವರು ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿದ್ದಾರೆ. ಸರ್ಕಾರ ಕೂಡಲೇ ಅವರನ್ನು ಕಾಯಂಗೊಳಿಸಬೇಕು.
| ಪರಶುರಾಮ್ ಯಾದಗಿರಿ
ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ನರ್ಸ್ಗಳನ್ನು ಕಾಯಂ ಮಾಡಲು ಸರ್ಕಾರ ಮುಂದಾಗಿತ್ತು. ಆಗ ಕೆಲವರು ಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಎಲ್ಲರೂ ಸೇರಿ ತಡೆಯಾಜ್ಞೆ ತೆರವುಗೊಳಿಸಿ ನನ್ನನ್ನು ಭೇಟಿಯಾಗಿ, 24 ತಾಸಿನಲ್ಲಿ ಕೆಲಸ ಕಾಯಂಗೊಳಿಸುತ್ತೇನೆ.
ರಾಜ್ಯದಲ್ಲಿ ಪ್ರತಿ ವರ್ಷ 400ರಿಂದ 500 ಮಂದಿ ಹೆಲ್ತ್ ಇನ್ಸ್ಪೆಕ್ಟರ್ ಕೋರ್ಸ್ ಮುಗಿಸುತ್ತಿದ್ದು, ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರ ಅವರಿಗೆ ಉದ್ಯೋಗ ಕಲ್ಪಿಸಬೇಕು.
| ಶರತ್ ಮಂಡ್ಯ
ಸಚಿವನಾದ ಮೇಲೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಿದ್ದೇನೆ. ಹೆಲ್ತ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯನ್ನೂ ಆರಂಭಿಸಲಾಗುವುದು.
ನಾನು ಬಿಎಎಂಸ್ ಕೋರ್ಸ್ ಓದಿದ್ದು, ಕಳೆದ ಜುಲೈನಲ್ಲಿ ವೈದ್ಯರ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಅರ್ಜಿಯನ್ನು ಪರಿಗಣಿಸಿಲ್ಲ, ಕಾರಣ ಕೂಡ ತಿಳಿದು ಬಂದಿಲ್ಲ.
| ಶೋಭಾ ಇಂಡಿ
ವೈದ್ಯರ ನೇಮಕಾತಿ ವೇಳೆ ಔಷಧ ವಿಜ್ಞಾನದಲ್ಲಿ ಪದವಿ ಹೊಂದಿರುವವರಿಗೆ ಆದ್ಯತೆ ನೀಡಬೇಕು ಎಂಬ ನಿಯಮ ಇದೆ. ಎಂಬಿಬಿಎಸ್ ಪಡೆದವರು ಅರ್ಜಿ ಸಲ್ಲಿಸದ ವೇಳೆ ಬಿಎಎಂಎಸ್ ಪಡೆದವರನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ನಿಮ್ಮನ್ನು 2ನೇ ಹಂತದಲ್ಲಿ ಪರಿಗಣಿಸಬಹುದು.
ಹೂವಿನ ಹಡಗಲಿ ತಾಲೂಕು ಉತ್ತಂಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಇತ್ತೀಚೆಗೆ ಆರಂಭವಾಗಿದೆ. ಇಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದುರಾಗಿದೆ.
| ಹನುಮಂತ ಕಲಬುರಗಿ
ವೈದ್ಯರ ನೇಮಕ ಮಾಡಿಕೊಂಡಿದ್ದು, ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿ ವೈದ್ಯರನ್ನು ನೇಮಿಸುವಂತೆ ಸೂಚಿಸುತ್ತೇನೆ. ನೀವು ಅವರನ್ನು ಭೇಟಿ ಮಾಡಿ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ ಮಾಡಿಸಿಕೊಳ್ಳಿ.
ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ವೈದ್ಯರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡುತ್ತಿಲ್ಲ. ತಾವು ರಹಸ್ಯ ಭೇಟಿ ನೀಡಿ ಸಮಸ್ಯೆ ನಿವಾರಿಸಬೇಕು.
| ಸ್ವಾಮಿ ಚಾಮರಾಜನಗರ
ಈ ಆಸ್ಪತ್ರೆ ವೈದ್ಯಕೀಯ ಶಿಕ್ಷಣ ಇಲಾಖೆ ನಿಯಂತ್ರಣದಲ್ಲಿದೆ. ಆ ಸಚಿವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು.
ನಿಮ್ಮ ಹಳೇ ಕ್ಷೇತ್ರ ತಿಕೋಟದಲ್ಲಿ ಸುಸಜ್ಜಿತ ಆಸ್ಪತ್ರೆ ಸ್ಥಾಪಿಸಬೇಕು. ಇದರಿಂದ ಈ ಭಾಗದ ಬಡ ರೋಗಿಗಳಿಗೆ ಸಹಾಯವಾಗುತ್ತದೆ.
| ಶಿವಾನಂದ, ಬಾಬು ವಿಜಯಪುರ
ಇದು ನನ್ನ ಗಮನದಲ್ಲಿದೆ, ತಿಕೋಟ ಹಾಗೂ ಬಬಲೇಶ್ವರದಲ್ಲಿ ಸರ್ಕಾರಿ ಆಸ್ಪತ್ರೆ ಸ್ಥಾಪಿಸಲಾಗುವುದು. ವಿಜಯಪುರಕ್ಕೆ ಬಂದಾಗ ಭೇಟಿ ಮಾಡಿ, ಈ ಬಗ್ಗೆ ರ್ಚಚಿಸೋಣ.
ದಾವಣಗೆರೆಯ ಕಾರ್ವಿುಕ ವಿಮಾ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಅಲ್ಲದೆ ಪ್ರಯೋಗಾಲಯಗಳಲ್ಲಿ ಉಪಕರಣ ಇಲ್ಲ ಎಂದು ಸಿಬ್ಬಂದಿ ಪರೀಕ್ಷೆಗೆ ಹೊರಗಡೆ ಕಳುಹಿಸುತ್ತಿದ್ದಾರೆ.
| ಗಂಗಾಧರ ದಾವಣಗೆರೆ
ಈ ಆಸ್ಪತ್ರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಕಾರ್ವಿುಕ ಇಲಾಖೆ ಅಲ್ಪ-ಸ್ವಲ್ಪ ನಿಯಂತ್ರಣ ಮಾಡುವ ಅಧಿಕಾರ ಇದೆ. ಕಾರ್ವಿುಕ ಸಚಿವರಿಗೆ ಮಾಹಿತಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು.
ಬೆಳಗಾವಿ ಜಿಲ್ಲೆ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳು ದುಸ್ಥಿತಿ ತಲುಪಿವೆ. ಇವುಗಳನ್ನು ಸರಿಪಡಿಸಿ.
| ಶ್ರೀಶೈಲ ಬೆಳಗಾವಿ
ಸರ್ಕಾರ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಹಿತಿ ಸಂಗ್ರಹಿಸಿದೆ. ಮುಂದಿನ ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಿ ಕೂಡಲೇ ಕಟ್ಟಡಗಳನ್ನು ಸರಿಪಡಿಸಲಾಗುವುದು.
ಬೆಂಗಳೂರಿನ ಮಾಕಳಿ ಆಸ್ಪತ್ರೆಯಲ್ಲಿನ ವೈದ್ಯೆ ರತ್ನಪ್ರಭಾ ಕೆಳಗಿನ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತಾರೆ.
| ಜಗತಾಸಿಂಗ್ ಚಿಕ್ಕಬಾಣಾವರ
ಜಾತಿ ಹೆಸರಲ್ಲಿ ಸಹೋದ್ಯೋಗಿಗಳ ಮೇಲೆ ದೌರ್ಜನ್ಯ ಎಸಗುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ಪರಿಶೀಲನೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ.
ಕೂಡಲಸಂಗಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಆದರೆ ಇನ್ನೂ ಆರಂಭವಾಗಿಲ್ಲ.
| ಶಂಕರ್ ಬಾಗಲಕೋಟೆ
ಬಾಗಲಕೋಟೆಗೆ ಬಂದಾಗ ನನ್ನನ್ನು ನೀವು ಭೇಟಿ ಮಾಡಿದರೆ ಪರಿಶೀಲನೆ ನಡೆಸಿ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
ಆಂಬುಲೆನ್ಸ್ ಗುತ್ತಿಗೆದಾರರಿಗೆ ಆರು ತಿಂಗಳ ಗಡುವು
ಇಡೀ ರಾಷ್ಟ್ರದಲ್ಲಿ ಆಂಬುಲೆನ್ಸ್ ನಿರ್ವಹಣೆ ಮಾಡುವ ಗುತ್ತಿಗೆ ಕಂಪನಿಗಳು ಇರುವುದು ಮೂರು ಮಾತ್ರ. ಅವರು ಎಲ್ಲ ರಾಜ್ಯಗಳಲ್ಲಿದ್ದರೂ ಇಲ್ಲಿ ಆಂಬುಲೆನ್ಸ್ಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ. ಅವರನ್ನು ಬದಲಾಯಿಸಲು ಸರ್ಕಾರ ನಿರ್ಧರಿಸಿದೆ. ಏಕಾಏಕಿ ಬದಲಾಯಿಸಿದರೆ ಸಮಸ್ಯೆ ತಲೆದೋರಬಹುದಾದ್ದರಿಂದ ಗುತ್ತಿಗೆದಾರರಿಗೆ 6 ತಿಂಗಳ ಗಡುವು ನೀಡಲಾಗಿದೆ. ಅಷ್ಟರಲ್ಲಿ ವ್ಯವಸ್ಥೆ ಸರಿ ಪಡಿಸಿಕೊಳ್ಳದಿದ್ದರೆ ಬೇರೊಬ್ಬರಿಗೆ ಗುತ್ತಿಗೆ ನೀಡಲಾಗುವುದು. ಆಂಬುಲೆನ್ಸ್ ಸಿಬ್ಬಂದಿಯಲ್ಲಿ ಶೇ.90 ಒಳ್ಳೆಯವರು ಇದ್ದಾರೆ. ಕೇವಲ 10 ಮಂದಿ ರೋಗಿಗಳ ಶೋಷಣೆ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸಲಾಗುವುದು. ಆಂಬುಲೆನ್ಸ್ಗಳ ನಿರ್ವಹಣೆ ಮೇಲೆ ಕಣ್ಣಿಡುವ ಅಧಿಕಾರವನ್ನು ಸರ್ಕಾರ ಜಿಲ್ಲಾಧಿಕಾರಿ, ಡಿಎಚ್ಒ-ಟಿಎಚ್ಒಗೆ ನೀಡಿದೆ. ಇವರು ಆಂಬುಲೆನ್ಸ್ಗಳನ್ನು ಪರಿಶೀಲಿಸಿ ಸಮಸ್ಯೆ ಇದ್ದರೆ ಸರಿಪಡಿಸಲಿದ್ದಾರೆ ಎಂದು ಸಚಿವರು ಹೇಳಿದರು.
ಗಂಗಾವತಿ ಡಾ.ಸವಡಿ ರಾಜ್ಯಕ್ಕೇ ಬೆಸ್ಟ್
ಗಂಗಾವತಿ ಸರ್ಕಾರಿ ಆಸ್ಪತ್ರೆ ವೈದ್ಯ ಈಶ್ವರ ಸವಡಿ ನಮ್ಮ ಇಲಾಖೆಯಲ್ಲಿ ಮಾದರಿ ವೈದ್ಯ ಎನಿಸಿದ್ದಾರೆ. ಅವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಸಂದಿವೆ. ಆಸ್ಪತ್ರೆ ಹೇಗಿರಬೇಕೆಂದು ಅವರು ತೋರಿಸಿಕೊಟ್ಟಿದ್ದಾರೆ. ಇದೀಗ ರಾಜ್ಯದ ಇತರ ತಾಯಿ-ಮಗು ಆಸ್ಪತ್ರೆಗಳನ್ನು ಇವರ ಉಸ್ತುವಾರಿಯಲ್ಲಿ ಗಮನಿಸುವ ಉದ್ದೇಶವಿದೆ ಎಂದು ಸಚಿವರು ತಿಳಿಸಿದರು. ಜತೆಗೆ ತುಮಕೂರು ಮತ್ತು ಧಾರವಾಡ ಸರ್ಕಾರಿ ಆಸ್ಪತ್ರೆ ಬಗ್ಗೆ ಮೆಚ್ಚುಗೆ ಮಾತನಾಡಿದರು.
ರಾಜ್ಯದ 108 ಆಂಬುಲೆನ್ಸ್ ಸಿಬ್ಬಂದಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸಚಿವರು ಅವುಗಳನ್ನು ಬಗೆಹರಿಸಬೇಕು.
| ಕುಬೇರ ಚಿತ್ರದುರ್ಗ
108 ಆಂಬುಲೆನ್ಸ್ ಗುತ್ತಿಗೆದಾರರನ್ನು ಬದಲಿಸುವ ನಿರ್ಧಾರ ಮಾಡಲಾಗಿದೆ. ಗುತ್ತಿಗೆದಾರರಿಂದ ಸಮಸ್ಯೆ ಎದುರಾಗಿದ್ದು, ಅವರನ್ನು ಬದಲಿಸಿದ ನಂತರ ಸಮಸ್ಯೆ ನಿವಾರಣೆ ಆಗಲಿದೆ.
ಫೋನ್-ಇನ್ನಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ಕುಮಾರ್ ಪಾಂಡೆ, ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕಿ ಎನ್.ಟಿ. ಆಬ್ರು, ಆರೋಗ್ಯ ಇಲಾಖೆ ನಿರ್ದೇಶಕ ಡಾ. ಪ್ರಭಾಕರ್, ಹೆಚ್ಚುವರಿ ಔಷಧ ನಿಯಂತ್ರಕ ಅಮರೇಶ್ ತಂಬಗಿ, ಜಂಟಿ ನಿರ್ದೇಶಕ ಸುರೇಶ್ ಶಾಸ್ತ್ರಿ, ಸಹಾಯಕ ನಿರ್ದೇಶಕ ಡಾ. ಅರುಣ್ ಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ವೀರೇಶ್, ವಿಶೇಷ ಕರ್ತವ್ಯಾಧಿಕಾರಿ ರವಿಪ್ರಕಾಶ್, ಸಚಿವರ ವಿಶೇಷ ಅಧಿಕಾರಿ ಎಸ್. ರಾಜಶೇಖರ್.
ಕೆಪಿಎಸ್ಸಿ ಮೂಲಕ ಆಯ್ಕೆಯಾದ ವೈದ್ಯರ ಪೈಕಿ ಅನೇಕರು ಕರ್ತವ್ಯಕ್ಕೆ ಹಾಜರಾಗಿಲ್ಲ. ಹೀಗಾಗಿ ಮೆರಿಟ್ ಲಿಸ್ಟ್ ಆಧಾರವಾಗಿಟ್ಟುಕೊಂಡು ಉಳಿದವರಿಗೆ ಆಹ್ವಾನ ನೀಡಿ ನೇಮಕ ಮಾಡಿಕೊಳ್ಳಲು
ಉದ್ದೇಶಿಸಲಾಗಿದೆ. ಇದೊಂದು ಚಾರಿತ್ರಿಕ ನಿರ್ಧಾರವಾಗಲಿದೆ. ಇಲಾಖೆಯಲ್ಲಿನ ಕುಂದುಕೊರತೆಗಳನ್ನು ಏಳು ತಿಂಗಳಿಂದ ಗಮನಿಸಿದ್ದು, ಅವುಗಳನ್ನು ನೀಗಿಸಲು ಇಡೀ ಇಲಾಖೆ ಒಂದು ತಂಡವಾಗಿ ಸಂಕಲ್ಪ ಮಾಡಿ ಕಾರ್ಯಪ್ರವೃತ್ತವಾಗಿದೆ.
| ಶಿವಾನಂದ ಪಾಟೀಲ
ಶಿಫಾರಸು ಪತ್ರ ವಿತರಣೆ ಗೊಂದಲ ಶೀಘ್ರ ನಿವಾರಣೆ
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ತೃತೀಯ ಹಂತದ ಸೇವೆ ಪಡೆಯಲು ಅವಶ್ಯವಿರುವ ಶಿಫಾರಸು ಪತ್ರ ವಿತರಿಸುವಲ್ಲಿನ ಗೊಂದಲಗಳನ್ನು ಶೀಘ್ರವೇ ಪರಿಹರಿಸುವುದಾಗಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದರು. ತಾಂತ್ರಿಕ ಕಾರಣಗಳಿಂದ ವೈದ್ಯರು ಶಿಫಾರಸು ಪತ್ರ ನೀಡಲು ಹಿಂದೇಟು ಹಾಕುತ್ತಿರುವುದು ತಿಳಿದಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಹೇಳಿದರು. ಏಕಾಏಕಿ ಕೆಪಿಎಂಇ ಕಾಯ್ದೆ ಜಾರಿಗೊಳಿಸಿದರೆ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ. ಖಾಸಗಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎರಡು ವರ್ಷದಲ್ಲಿ ಕಾಯ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು. ಸರ್ಕಾರಿ ವೈದ್ಯರು ಖಾಸಗಿ ಸೇವೆ ಸಲ್ಲಿಸಲು ಈಗಿರುವ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ಕೊರತೆ ಇರುವಾಗ ಸರ್ಕಾರಿ ವೈದ್ಯರು ಖಾಸಗಿ ಪ್ರಾಕ್ಟೀಸ್ ಬೇಡ ಎಂದರೆ ಸರ್ಕಾರಿ ವಲಯದಲ್ಲಿ ತಜ್ಞ ವೈದ್ಯರ ಸಮಸ್ಯೆ ಎದುರಾಗುತ್ತದೆ. ನಮ್ಮಲ್ಲಿ ಪೂರ್ಣ ಪ್ರಮಾಣದಲ್ಲಿ ವೈದ್ಯರು ನೇಮಕವಾದ ನಂತರ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ, ಖಾಸಗಿ ಪ್ರಾಕ್ಟೀಸ್ ಮಾಡಿದರೆ ತಪ್ಪಲ್ಲ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆಗೆ ಬರುವಂತೆ ಹೇಳಿದರೆ ಅದು ವೃತ್ತಿ ಧರ್ಮವಲ್ಲ ಎಂದು ಹೇಳಿದರು.
ಡಯಾಲಿಸಿಸ್, ಐಸಿಯು ಘಟಕ: ಡಯಾಲಿಸಿಸ್ ವಿಚಾರದಲ್ಲಿ ಸರ್ಕಾರದಿಂದ ಅನೇಕ ಕಡೆ ಉಪಕರಣ ಅಳವಡಿಸಲಾಗಿದೆ. ಗುತ್ತಿಗೆದಾರರು ಸರ್ಕಾರದ ಮಷಿನ್ ಪಕ್ಕಕ್ಕಿಟ್ಟು ತಮ್ಮದನ್ನು ಬಳಸುತ್ತಿರುವುದು ಗಮನದಲ್ಲಿದೆ. ಇವೆಲ್ಲವನ್ನೂ ಹಂತ ಹಂತವಾಗಿ ಪರಿಹರಿಸುವುದಾಗಿ ಸಚಿವರು ತಿಳಿಸಿದರು. ಆಹಾರ ಸುರಕ್ಷತಾ ಕಾಯ್ದೆ ಜಾರಿ ವಿಚಾರದಲ್ಲಿ ನನಗೂ ಬೇಸರವಿದೆ. ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಆಹಾರ ಸುರಕ್ಷತಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಆಡಳಿತದಲ್ಲಿ ಸುಧಾರಣೆ ತರುವ ಹಿನ್ನೆಲೆಯಲ್ಲಿ ಜಂಟಿ ನಿರ್ದೇಶಕರ ಹುದ್ದೆಯನ್ನು ಮತ್ತೆ ಸೃಷ್ಟಿಸಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಹೊಸ ಕಾಯಿಲೆಗಳೂ ಸೇರ್ಪಡೆ
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದಲ್ಲಿ 1600 ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುತ್ತಿದೆ. ಅಲ್ಜಮೀರ್, ಡೆಮನ್ಶಿಯಾ, ಕಾಕ್ಲೀಯರ್ ಇಂಪ್ಲಾಂಟ್ನಂತಹ ಕಾಯಿಲೆಗಳನ್ನೂ ಮುಂದಿನ ದಿನಗಳಲ್ಲಿ ಈ ಪಟ್ಟಿಗೆ ಸೇರ್ಪಡೆ ಮಾಡುತ್ತೇವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
2 ಹಂತದಲ್ಲಿ ಗುಣಮಟ್ಟ ಪರೀಕ್ಷೆ
ಕಳಪೆ ಔಷಧ ಪೂರೈಕೆಯಾಗದಂತೆ ಎಚ್ಚರ ವಹಿಸಲಾಗಿದೆ. ಅದಕ್ಕಾಗಿಯೇ ಗುಜರಾತ್, ತಮಿಳುನಾಡು, ರಾಜಸ್ಥಾನಗಳಲ್ಲಿ ಅಧಿಕಾರಿಗಳ ತಂಡ ಅಧ್ಯಯನ ಮಾಡಿದೆ. ತಮಿಳುನಾಡಿನ ವ್ಯವಸ್ಥೆ ತುಂಬಾ ಚೆನ್ನಾಗಿದ್ದು, ಅದನ್ನು ಅಳವಡಿಸಲು ಚಿಂತನೆ ನಡೆದಿದೆ. ಔಷಧ ಖರೀದಿಗೆ ಸಮಿತಿಯೊಂದನ್ನು ರಚಿಸಿದ್ದು, ಅದರಲ್ಲಿ ಅಧಿಕಾರಿಗಳನ್ನು ಹೊರತುಪಡಿಸಿ ಹೊರಗಿನವರೂ ಇದ್ದಾರೆ. ಎನ್ಎಬಿಎಚ್ ಪ್ರಯೋಗಾಲಯದಲ್ಲಿ 2 ಹಂತದಲ್ಲಿ ಔಷಧ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತದೆ. ಅದಕ್ಕಾಗಿಯೇ ಸಾಫ್ಟ್ವೇರ್ವೊಂದನ್ನು ಅಭಿವೃದ್ಧಿಪಡಿಸಿ ಅಳವಡಿಸಿಕೊಳ್ಳಲಾಗುತ್ತಿದೆ. ಆದಾಗ್ಯೂ ಕಳಪೆ ಔಷಧ ಪೂರೈಕೆಯಾದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ಕುಮಾರ್ ಪಾಂಡೆ ತಿಳಿಸಿದರು.
60 ಲಕ್ಷ ರೂ. ದಂಡ ಕಟ್ಟಿದರೂ ಸರಿ
ಸರ್ಕಾರಿ ಕೆಲಸ ಬೇಡ ಎನ್ನುವ ವೈದ್ಯರು ಸರ್ಕಾರಿ ಎಂಬಿಬಿಎಸ್ ಸೀಟು ಪಡೆದು ಶಿಕ್ಷಣ ಪೂರೈಸಿದವರೊಬ್ಬರು ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆ ಮಾಡುವುದರಿಂದ ವಿನಾಯಿತಿ ಪಡೆಯಲು 60 ಲಕ್ಷ ರೂ. ದಂಡ ಕಟ್ಟಿದ ಪ್ರಸಂಗವೊಂದು ನಡೆದಿದೆ. ಅಷ್ಟು ದೊಡ್ಡ ಮೊತ್ತ ಕಟ್ಟಿದರೂ ತೊಂದರೆ ಇಲ್ಲ, ಸರ್ಕಾರಿ ಸೇವೆ ಮಾಡುವುದಿಲ್ಲ ಎಂಬುವವರೂ ಇರುತ್ತಾರೆ ಎಂದು ಸಚಿವರೇ ಹೇಳಿದರು. ಸರ್ಕಾರಿ ಸೀಟು ಪಡೆದವರು ಮಾನವೀಯತೆ ದೃಷ್ಟಿಯಿಂದಲಾದರೂ ಗ್ರಾಮೀಣ ಸೇವೆ ಮಾಡಬೇಕು, ಇಂಥವರಿಗೆ ದೇವರೇ ಬುದ್ಧಿಕೊಡಬೇಕು ಎಂದರು.