ಆರೋಗ್ಯ ಇಲಾಖೆಗೆ ಕಾಯಕಲ್ಪ

ಬೆಂಗಳೂರು: ಮೂಲಸೌಕರ್ಯ, ಸಿಬ್ಬಂದಿ ಕೊರತೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವ ಆರೋಗ್ಯ ಇಲಾಖೆಯ ಆರೋಗ್ಯ ಸುಧಾರಣೆಗಾಗಿ ಸಚಿವ ಶಿವಾನಂದ ಪಾಟೀಲ್ ಹಲವು ಉಪಾಯ ಯೋಜಿಸಿದ್ದಾರೆ. ಇದರ ಮೊದಲ ಹಂತವಾಗಿ 5 ಸಾವಿರ ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕಕ್ಕೆ ಆರೋಗ್ಯ ಇಲಾಖೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ತಾತ್ವಿಕ ಒಪ್ಪಿಗೆಯೂ ಸಿಕ್ಕಿದೆ. ಮುಂದಿನ ಸಂಪುಟ ಸಭೆಯಲ್ಲೇ ಸರ್ಕಾರ ಇದಕ್ಕೆ ಅನುಮತಿ ಪಡೆದುಕೊಳ್ಳಲಿದೆ.

ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ 247 ಶುಕ್ರವಾರ ಹಮ್ಮಿಕೊಂಡಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಸರ್ಕಾರಿ ವೈದ್ಯರ ಕೊರತೆ ಬಗ್ಗೆ ಸಾರ್ವಜನಿಕರು ಗಮನ ಸೆಳೆದಾಗ ಈ ಮಾಹಿತಿಯನ್ನು ಬಹಿರಂಗಪಡಿಸಿದರು.

ಆರೋಗ್ಯ ಇಲಾಖೆಯಲ್ಲಿ 25 ಸಾವಿರಕ್ಕೂ ಹೆಚ್ಚಿನ ಹುದ್ದೆ ಖಾಲಿ ಇದ್ದು, ಸದ್ಯ 5 ಸಾವಿರ ಹುದ್ದೆಗೆ ನೇಮಕ ಮಾಡಿದರೆ ಇಲಾಖೆಯನ್ನು ಸುಸೂತ್ರವಾಗಿ ನಡೆಸಲು ಸಹಾಯಕವಾಗುತ್ತದೆ. ಉಳಿದ ಹುದ್ದೆಗಳನ್ನು ಹಂತ ಹಂತವಾಗಿ ನೇಮಕ ಮಾಡಬಹುದು ಎಂದು ಸಚಿವರು ವಿವರಿಸಿದರು.

ವೈದ್ಯರ ನೇಮಕದಲ್ಲಿ ಇಲಾಖೆ ಮುಂಚಿನಿಂದಲೂ ಆದ್ಯತೆ ಮೇಲೆ ಕ್ರಮಕೈಗೊಳ್ಳುತ್ತಲೇ ಇದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ವೈದ್ಯರು ಸರ್ಕಾರಿ ಸೇವೆಗೆ ಬರುತ್ತಿಲ್ಲ. ಹೀಗಾಗಿ ಹಿಂದಿನ ಸಾಲಿನಲ್ಲಿ ನೇಮಕದ ಮೆರಿಟ್ ಲಿಸ್ಟ್​ನಲ್ಲಿದ್ದವರನ್ನು ಪರಿಗಣಿಸಿ ಅವರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದರು.

ಕೇಂದ್ರದಿಂದ ಆಸ್ಪತ್ರೆ ಬೋನಸ್

ತಾಯಿ- ಮಗು ಆಸ್ಪತ್ರೆ’ ನೀಡಿಕೆಯಲ್ಲಿ ಕೇಂದ್ರ ಸರ್ಕಾರ ಉದಾರತೆ ತೋರಿದೆ. ಆರಂಭದಲ್ಲಿ 12 ಆಸ್ಪತ್ರೆ ನೀಡಿದ್ದ ಕೇಂದ್ರ ಹೆಚ್ಚುವರಿಯಾಗಿ ಆರು ಆಸ್ಪತ್ರೆ(100 ಹಾಸಿಗೆಗಳ 3, 60 ಹಾಸಿಗೆಗಳ ಮೂರು) ಘೋಷಿಸಿದೆ ಎಂದು ಸಚಿವರು ಕೇಂದ್ರದ ಕ್ರಮವನ್ನು ಶ್ಲಾಘಿಸಿದರು.

80 ಕೋಟಿ ರೂ. ವಾಪಸ್

ಆರೋಗ್ಯ ಕರ್ನಾಟಕ, ಆಯುಷ್ಮಾನ್ ಭಾರತ್ ವಿಲೀನದ ಬಳಿಕ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಪಾಲಿನ 80 ಕೋಟಿ ರೂ. ವಾಪಸ್ ಬಂದಿದೆ. ಈ ಹಣವನ್ನು ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ಸಚಿವರು ತಿಳಿಸಿದರು.

ಸಚಿವರ ಭರವಸೆ

  • ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಶಿಫಾರಸು ಪತ್ರ ಗೊಂದಲ ಶೀಘ್ರ ನಿವಾರಣೆ
  • ಭವಿಷ್ಯದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದಡಿ ಮತ್ತಷ್ಟು ಕಾಯಿಲೆಗಳಿಗೆ ಚಿಕಿತ್ಸೆ
  • ಎರಡನೇ ಹಂತದಲ್ಲಿ 40 ತಾಲೂಕುಗಳಲ್ಲಿ ಇ-ಆಸ್ಪತ್ರೆ ವಿಸ್ತರಣೆಗೆ ಕ್ರಮ

ಮೂರು ವರ್ಷದಲ್ಲಿ ಆರೋಗ್ಯ ಕರ್ನಾಟಕ

ಒಂದೇ ರಾತ್ರಿಯಲ್ಲಿ ಎಲ್ಲ ಅಭಿವೃದ್ಧಿಯಾಗುತ್ತದೆ ಎಂಬ ಭ್ರಮೆ ನಮಗಿಲ್ಲ. ಸಾಕಷ್ಟು ನ್ಯೂನತೆ, ಸಮಸ್ಯೆ ಹಾಗೂ ಸವಾಲುಗಳು ನಮ್ಮ ಮುಂದಿವೆ. ಅವುಗಳನ್ನು ಹಂತ ಹಂತವಾಗಿ ಪರಿಹರಿಸುವ ಮೂಲಕ ಆರೋಗ್ಯವಂತ ಕರ್ನಾಟಕ ನಿರ್ವಿುಸುವ ಕನಸನ್ನು ನನಸು ಮಾಡಲು ಪಣ ತೊಟ್ಟಿದ್ದೇವೆ.

| ಶಿವಾನಂದ ಪಾಟೀಲ್, ಆರೋಗ್ಯ ಇಲಾಖೆ ಸಚಿವ