ಆರೋಪಿ ಶಿವಾನಂದ ಬಿರಾದಾರ ಬಂಧನ?

ವಿಜಯಪುರ: ಭೀಮಾತೀರದ ಚಡಚಣ ಸಹೋದರರ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಶಿವಾನಂದ ಬಿರಾದಾರ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಚಡಚಣ ಬಳಿಯ ಕೊಂಕಣಗಾಂವದಲ್ಲಿ ಅ.30, 2017ರಂದು ನಡೆದ ಧರ್ಮರಾಜನ ಎನ್​ಕೌಂಟರ್ ಬಳಿಕ ಶಿವಾನಂದ ನಾಪತ್ತೆಯಾಗಿದ್ದ. ಬಳಿಕ ಗಂಗಾಧರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪಟ್ಟಿಯಲ್ಲಿ ಈತನೂ ಇದ್ದ. ಆದರೆ, ಈವರೆಗೂ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ.

ಶುಕ್ರವಾರ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಜತ್ತ ತಾಲೂಕು ಕೇಂದ್ರ ಬಸ್ ನಿಲ್ದಾಣದ ಬಳಿ ತಿರುಗುತ್ತಿದ್ದಾಗ ಸಿಐಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಮಾಹಿತಿ ಲಭ್ಯವಾಗಿದೆ. ಆದರೆ, ಸಿಐಡಿ ಅಧಿಕಾರಿಗಳು ಮಾತ್ರ ಶಿವಾನಂದ ಬಿರಾದಾರ ಬಂಧನದ ಬಗ್ಗೆ ಖಚಿತಪಡಿಸಿಲ್ಲ. ಇನ್ನೂ ಆತನ ಬಂಧನವಾಗಿಲ್ಲವೆಂದು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಶಿವಾನಂದ ಬಿರಾದಾರ ಧರ್ಮರಾಜನ ಬಲಗೈ ಬಂಟನಾಗಿದ್ದು ಎನ್​ಕೌಂಟರ್ ಸಂದರ್ಭ ಈತ ಸ್ಥಳದಲ್ಲೇ ಇದ್ದನೆನ್ನಲಾಗಿದೆ. ಅಲ್ಲದೆ, ಗಂಗಾಧರನ ನಿಗೂಢ ಸಾವಿನ ಪ್ರಕರಣದಲ್ಲಿ ಈತನ ಕೈವಾಡವೂ ಇದೆ ಎನ್ನಲಾಗಿದ್ದು, ಈತನನ್ನು ಬಂಧಿಸಿದ್ದೆ ಆದಲ್ಲಿ ಪ್ರಕರಣದ ಪ್ರಮುಖ ಸಾಕ್ಷ್ಯಳು ಲಭ್ಯವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.