ಮತ್ತೆ ಹುಟ್ಟಿ ಬರಲಿ ಶತಮಾನದ ಸಂತ

ವಿಜಯವಾಣಿ ಸುದ್ದಿಜಾಲ ಬೀದರ್
ತುಮಕೂರು ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಶಿವೈಕ್ಯ ಹಿನ್ನೆಲೆಯಲ್ಲಿ ಮಂಗಳವಾರ ದಿನವಿಡಿ ಜಿಲ್ಲಾದ್ಯಂತ ಶ್ರದ್ಧಾಂಜಲಿ ಸಭೆ, ನುಡಿನಮನ ನಡೆದವು. ಜಾತಿ, ಮತ, ಪಂಥದ ಭೇದ ಎನ್ನದೆ ಎಲ್ಲ ಸಮುದಾಯದವರು ಶತಮಾನದ ಸಂತನಿಗೆ ಗೌರವ ನಮನ ಸಲ್ಲಿಸಿದರು. ಮತ್ತೆ ಹುಟ್ಟಿ ಬರಲಿ ದೇವರು ಎಂದು ಪ್ರಾರ್ಥಿಸಿದರು.
ನಗರ ಸೇರಿ ಜಿಲ್ಲೆಯ ನಾನಾ ಕಡೆ ಶ್ರದ್ಧಾಂಜಲಿ ಸಭೆಗಳಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನುಡಿನಮನ ಸಲ್ಲಿಸಿ, ಜಗ ಬೆಳಗಿದ ಮಹಾ ಸಂತನ ತ್ರಿವಿಧ ದಾಸೋಹ ಸೇವೆಯನ್ನು ಸ್ಮರಿಸಿದರು. ಈ ವೇಳೆ ಮಾತನಾಡಿದ ಅನೇಕರು, ಶ್ರೀಗಳಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಿ ಎಂದು ಆಗ್ರಹಿಸಿದರು.
ಸಿದ್ಧಗಂಗಾ ಸಂಸ್ಥೆಯಲ್ಲಿ ಓದಿರುವ ಸಾಕಷ್ಟು ವಿದ್ಯಾರ್ಥಿಗಳು ಜಿಲ್ಲೆಯಲ್ಲಿದ್ದಾರೆ. ಅವರ ಅಂತಿಮ ದರ್ಶನಕ್ಕಾಗಿ ಅನೇಕರು ತುಮಕೂರಿಗೆ ತೆರಳಿ ಅಗಲಿದ ಚೇತನಕ್ಕೆ ಅಂತಿಮ ವಿದಾಯ ಹೇಳಿದರು. ಮಹಾ ಸಂತನ ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ಭಕ್ತಿಭಾವದಿಂದ ಕಣ್ತುಂಬಿಕೊಂಡರು.
ಶ್ರೀರಾಮ ಸೇನೆ: ಕೆಇಬಿ ಹತ್ತಿರದ ಶ್ರೀರಾಮ ಸೇನೆ ಜಿಲ್ಲಾ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾಯಕಯೋಗಿಗೆ ಕೇಂದ್ರ ಸಕರ್ಾರ ಭಾರತರತ್ನ ಪ್ರಶಸ್ತಿ ನೀಡಿ, ಈ ಪ್ರಶಸ್ತಿಯ ಘನತೆ ಹೆಚ್ಚಿಸಬೇಕು ಎಂದರು. ಪ್ರಮುಖರಾದ ಕಾಶೀನಾಥ ಬೆಲ್ದಾಳೆ, ಮಾಣಿಕ ಹೋಟೆಲ್, ರಮೇಶ ಮನ್ನಾಳೆ, ಸೈಫ್ ಇತರರಿದ್ದರು.