ಒಮ್ಮೆ ಕಣ್ಬಿಟ್ಟು ನೋಡಿದ್ದೇ ಕೊನೆಯಾಯಿತು…

ಬೆಂಗಳೂರು: ಇಡೀ ರಾತ್ರಿ ಸರಿಯಾಗಿ ನಿದ್ರೆ ಮಾಡಲಿಲ್ಲ. ಇಷ್ಟಲಿಂಗ ಪೂಜೆ ಮಾಡಬೇಕೆಂದು ತವಕಿಸುತ್ತಿದ್ದರು. ಬೆಳಿಗ್ಗೆ 6 ಗಂಟೆಗೆ ಪೂಜೆ ಮಾಡಿಸಿದೆವು. ಅದೇ ಅವರ ಕೊನೇ ಲಿಂಗಪೂಜೆಯಾಗುತ್ತದೆ ಎಂದು ಯಾರೂ ನಿರೀಕ್ಷಿಸಿ ರಲಿಲ್ಲ ಎಂದು ಕಣ್ತುಂಬಿಕೊಂಡರು ಎಂ.ಮಲ್ಲಾರಾದ್ಯ.

ಮಲ್ಲಾರಾಧ್ಯ ಶಿವಕುಮಾರ ಸ್ವಾಮೀಜಿಯವರ ಅಚ್ಚುಮೆಚ್ಚಿನ ಶಿಷ್ಯ. 1998ರಿಂದಲೂ ಸ್ವಾಮೀಜಿ ಸೇವೆಗೇ ಬದುಕು ಸಮರ್ಪಿಸಿಕೊಂಡವರು. ಶ್ರೀಗಳು ಕೊನೆಯುಸಿರೆಳೆದ ಹಳೇ ಮಠದ ಬಳಿಯೇ ಸಿಕ್ಕ ಅವರು ಮಾತನಾಡುತ್ತಾ ಹೋದರು. ಸೋಮವಾರ ಎಂದಿನಂತೆ ಲಿಂಗಪೂಜೆ ಮುಗಿದ ಬಳಿಕ ಕುಳಿತುಕೊಂಡೇ ದಾಳಿಂಬೆ ರಸ ಮತ್ತು ಸೇಬಿನ ರಸ ಸೇವಿಸಿದರು. ಮುಖದಲ್ಲಿ ಅದೇ ನಗುವಿನ ಕಳೆ ಇತ್ತು. ಆದರೆ ಅದು ಕೊನೆಯ ಮುಗುಳ್ನಗು ಎನ್ನುವುದು ನಮಗೆ ಅರಿವಾಗಲಿಲ್ಲ.

ರಕ್ತದೊತ್ತಡದಲ್ಲಿ ವ್ಯತ್ಯಾಸ ಕಂಡಿತು. ವೈದ್ಯರು ಕೂಡಲೇ ಔಷದೋಪಚಾರದಲ್ಲಿ ತೊಡಗಿದರು. 11.30ರ ಹೊತ್ತಿಗೊಮ್ಮೆ ಕಣ್ತೆರೆದು ಅಲ್ಲಿದ್ದವರನ್ನು ನೋಡಿದವರು ಹಾಗೆ ನೋಡ ನೋಡುತ್ತಲೇ ಕಣ್ಮುಚ್ಚಿ ನಿದ್ರೆಗೆ ಜಾರಿದರು. ಆಗ ಅಲ್ಲಿದ್ದದ್ದು ಸಿದ್ಧಲಿಂಗ ಶ್ರೀಗಳು, ಸುತ್ತೂರು ಶ್ರೀಗಳು, ಕಣ್ಣೂರು ಕಂಬಾಳ ಮಠ ಶ್ರೀ ಮತ್ತು ಡಾ.ಪರಮೇಶ್. ಆ ಕ್ಷಣದಲ್ಲಿ ಬಿಪಿ ಕಡಿಮೆಯಾಗುತ್ತಾ ಹೋಯಿತು. ವೈದ್ಯರು ಹರಸಾಹಸ ಮಾಡಿದರೂ ಏರಲಿಲ್ಲ. 11.44 ಗಂಟೆಗೆ ಹೃದಯ ಸ್ಥಬ್ಧವಾಯಿತು. ಸ್ವಾಮೀಜಿ ನಿಜಕ್ಕೂ ಇಚ್ಛಾ ಮರಣಿ. ಎಲ್ಲವೂ ಅವರು ಅಂದುಕೊಂಡಂತೆಯೇ ಆಯಿತು. ಅವರ ಆಸೆಯಂತೆ ಹಳೇ ಮಠದಲ್ಲಿಯೇ ಕೊನೆಯುಸೆರೆಳೆದಿದ್ದರು.

ಆ ಹಠವೇ ಮುಳುವಾಯಿತು: ಚೆನ್ನೈ ರೇಲಾ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲು ವೈದ್ಯರು ಹೆದರಿದ್ದರು. ಆದರೆ ಸ್ವಾಮೀಜಿ ಲವಲವಿಕೆ ನೋಡಿದ ಬಳಿಕ ಆಪರೇಷನ್ ಮಾಡಿದರು. ವೈದ್ಯರ ನಿರೀಕ್ಷೆ ಮೀರಿ ಚೇತರಿಕೆ ಕಂಡರು. ಆದರೆ ಇನ್ನೂ ಸ್ವಲ್ಪ ದಿನ ಅಲ್ಲಿಯೇ ಇರಬೇಕು ಎಂದು ವೈದ್ಯರ ಸಲಹೆಯನ್ನು ಸ್ವಾಮೀಜಿ ಕೇಳಲಿಲ್ಲ. ಮಠಕ್ಕೆ ಕರೆದುಕೊಂಡು ಹೋಗು ಎಂದು ಹಠಕ್ಕೆ ಬಿದ್ದರು. ಮಠಕ್ಕೆ ಬಂದಮೇಲೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಯಿತು. ಆಪರೇಷನ್ ಮಾಡಿದ್ದು ಇನ್​ಫೆಕ್ಷನ್ ಆಯಿತು. ಇನ್ನೊಂದಿಷ್ಟು ದಿನ ಅಲ್ಲೇ ಇದ್ದು ಬಂದಿದ್ದರೆ ಬಹುಶಃ ಇನ್ಪೆಕ್ಷನ್ ಆಗುತ್ತಿರಲಿಲ್ಲವೇನೋ? ಅನ್ನಿಸುತ್ತಿದೆ.

ಮಗುವಿನಂತೆ ಮಾತು: ಸ್ವಾಮೀಜಿ ಕೊನೇಕೊನೆಗೆ ಮುಗ್ದ ಮಗುವಿನಂತೆ ಆಗಿದ್ದರು. ಎಲ್ಲದಕ್ಕೂ ನನ್ನ ಬಳಿಯೇ ಅಹವಾಲು ಸಲ್ಲಿಸುತ್ತಿದ್ದರು. ಅವರ ಸೇವೆ ಸಲ್ಲಿಸುವುದೊಂದು ಸೌಭಾಗ್ಯ ಎಂದು ಶ್ರದ್ದೆಯಿಂದ ಮಾಡಿದೆ. ಈ ಅವಕಾಶ ಎಷ್ಟು ಜನರಿಗೆ ಸಿಗುತ್ತದೆ ಹೇಳಿ? ಸಿದ್ದಲಿಂಗ ಸ್ವಾಮೀಜಿ ಅವರು ನನ್ನ ಮೇಲೆ ಅಪಾರ ಪ್ರೀತಿ ಇಟ್ಟು ಈ ಜವಾಬ್ದಾರಿ ವಹಿಸಿದ್ದರು. ಅದನ್ನು ಅಚ್ಚುಕಟ್ಟಾಗಿ ಭಕ್ತಿಯಿಂದಲೇ ನಿಭಾಯಿಸಿದೆ. ಆದರೆ ಈಗ ಆ ದೇವರಿಲ್ಲ ಎಂದು ಬೇಸರವಾಗುತ್ತಿದೆ ಎನ್ನುತ್ತಿದ್ದಂತೆ ದುಃಖದಲ್ಲಿ ಮಲ್ಲಾರಾಧ್ಯರ ಹೃದಯ ಭಾರವಾಗತೊಡಗಿತು.

ಸಂಕ್ರಾಂತಿ ದಿನ ಮಾತು ನಿಲ್ಲಿಸಿದರು

ಜ.15ರ ಸಂಕ್ರಾಂತಿ ದಿನವೇ ಸ್ವಾಮೀಜಿ ಮಾತು ನಿಲ್ಲಿಸಿದರು. ಕಫ ಹೆಚ್ಚಾಗಿ ಮಾತನಾಡಲು ಆಗಲೇ ಇಲ್ಲ. ಆ ದಿನವೇ ಮಠಕ್ಕೆ ಹೋಗಬೇಕು ಎಂದು ಚಡಪಡಿಸಿದರು. ಸ್ವಾಮೀಜಿ ಇಚ್ಛೆಯಂತೆ ಮಧ್ಯರಾತ್ರಿಯೇ ಮಠಕ್ಕೆ ಕರೆದುಕೊಂಡು ಬಂದೆವು. ಹಳೇ ಮಠಕ್ಕೆ ಬಂದಮೇಲೆ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ನೋಡಿ ನಮಗೆ ಅಚ್ಚರಿ. ಮಕ್ಕಳ ಪ್ರಾರ್ಥನೆ ಕೇಳುತ್ತಾ ಇನ್ನೂ ಅವರ ಲವಲವಿಕೆ ಹೆಚ್ಚಾಯಿತು. ನಾವ್ಯಾರು ನಿರೀಕ್ಷೆ ಮಾಡದ ರೀತಿ ಮಠದ ವಾತಾವರಣ ಅವರನ್ನು ಬದಲಿಸಿತ್ತು.