ಬೆಳಗಾವಿಯಲ್ಲಿ ಶಿವಕುಮಾರ ಶ್ರಿಗಳ ಹೆಜ್ಜೆ ಗುರುತು….

ಬೆಳಗಾವಿ: ಎರಡು ದಶಕಗಳ ಹಿಂದೆ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ಸಮಾವೇಶದಲ್ಲಿ ಭಾವಹಿಸಿದ್ದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಅಂದಿನ ರುದ್ರಾಕ್ಷಿಮಠದ ಡಾ.ಶಿವಬಸವ ಸ್ವಾಮೀಜಿ ಅವರೇ ಇಡೀ ಅಖಿಲ ಭಾರತ ವೀರಶೈವ ಮಹಾಸಭೆ ಸಮಾವೇಶದ ನೇತೃತ್ವವನ್ನು ವಹಿಸಿ ಯಶಸ್ವಿ ಗೊಳಿಸಿದ್ದರು.

ಅಂದು ಇಂದಿನ ಹಾಗೇ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ವೀರಶೈವ ಲಿಂಗಾಯತ ಎಂಬ ತಾರತಮ್ಯ, ಭೇದ ಭಾವಗಳು ಇರಲಿಲ್ಲ. ಬೆಳಗಾವಿ ರುದ್ರಾಕ್ಷಿಮಠದ ಡಾ. ಶಿವಬಸವ ಸ್ವಾಮೀಜಿ ಅವರು ಅಂದಿನ ಕಾಲದಲ್ಲಿ ಬೆಳಗಾವಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿ ವ್ಯವಸ್ಥೆ ನೀಡುತ್ತಿದ್ದರು. ಹೀಗಾಗಿ ಇಬ್ಬರು ಶ್ರೀಗಳಲ್ಲಿ ಸಾಮ್ಯತೆ ಇತ್ತು. ಆಗ ಶ್ರೀಗಳು ಸುಮಾರು ಒಂದು ಗಂಟೆಯವರೆಗೆ ನಿರರ್ಗಳವಾಗಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಮೂರು ದಿನಗಳ ಬೆಳಗಾವಿಯ ರುದ್ರಾಕ್ಷಿಮಠದಲ್ಲಿಯೇ ತುಮಕೂರಿನ ಸಿದ್ಧಗಂಗಾ ಮಠದ ಸ್ವಾಮೀಜಿ ಅವರು ತಂಗಿದ್ದರು. ಈ ನಡೆದಾಡುವ ದೇವರು ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆಯ ಸಪ್ತ ಋಷಿಗಳು ಶ್ರೀಗಳನ್ನು ಆಹ್ವಾನ ನೀಡಿದಾಗ ಕೆಎಲ್‌ಇ ಸಂಸ್ಥೆಗೂ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದ್ದರು. ಇದಕ್ಕೂ ಮುಂಚೆ 1967ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ವೀರಶೈವ ಶಿವಾನುಭವ ಸಮಾವೇಶದಲ್ಲಿ ಮೂರು ದಿನಗಳ ಕಾಲ ಭಾಗವಹಿಸಿದ್ದರು. ಬಳಿಕ ನಾಗನೂರು ರುದ್ರಾಕ್ಷಿಮಠದೊಂದಿಗೆ ನಿರಂತರ ಒಡನಾಟವನ್ನು ಹೊಂದಿದ್ದರು.