ಸ್ವಾಭಾವಿಕ ಉಸಿರಾಟಕ್ಕೆ ತೊಂದರೆ

ತುಮಕೂರು: ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ಶಿವಕುಮಾರ ಸ್ವಾಮೀಜಿ ದೇಹದಲ್ಲಿ ಪ್ರೋಟೀನ್ ಅಂಶ ಮತ್ತೆ ಕಡಿಮೆಯಾಗಿದ್ದು, ಶ್ವಾಸಕೋಶದ ಎರಡೂ ಭಾಗದಲ್ಲಿ ನೀರು ತುಂಬಿಕೊಳ್ಳುತ್ತಿರುವುದು ಚೇತರಿಕೆಗೆ ಅಡ್ಡಿಯಾಗಿದೆ. ಶ್ರೀಗಳ ಆರೋಗ್ಯ ಮಾಹಿತಿ ನೀಡಿದ ಡಾ.ಪರಮೇಶ್, ಶ್ವಾಸಕೋಶದಲ್ಲಿ ನೀರು ಶೇಖರಣೆ ಆಗುತ್ತಿದ್ದು ಸ್ವಾಭಾವಿಕ ಉಸಿರಾಟ ಸಾಧ್ಯವಾಗುತ್ತಿಲ್ಲ. ಸನ್ನೆ ಮೂಲಕ ಮಾತನಾಡಲು ಪ್ರಯತ್ನಿಸುತ್ತಾರೆ. ಎಚ್ಚರವಾಗಿದ್ದಾಗ ಸಹಜ ಉಸಿರಾಟಕ್ಕೆ ಅವಕಾಶ ನೀಡಲಾಗುತ್ತಿದೆ. ವಯಸ್ಸಿನ ಕಾರಣದಿಂದ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆಯಾಗುತ್ತಿಲ್ಲ ಎಂದರು. ಶ್ರೀಗಳ ದೇಹದಲ್ಲಿ ಶನಿವಾರ 3.1ರಷ್ಟಿದ್ದ ಪ್ರೋಟೀನ್ ಭಾನುವಾರ 2.6ಕ್ಕೆ ಇಳಿದಿದೆ. ದೇಹದಲ್ಲಿ ಪೋಷಕಾಂಶಗಳು ಹೆಚ್ಚಾದರಷ್ಟೇ ಚೇತರಿಕೆ ಸಾಧ್ಯವಿದ್ದು, ಸ್ವಾಮೀಜಿ ದ್ರವ ಆಹಾರ ಸೇವಿಸುತ್ತಿದ್ದಾರೆ ಎಂದರು.

ಆರೋಗ್ಯ ವಿಚಾರಿಸಿದ ಖರ್ಗೆ

ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಸಂಜೆ ಸ್ವಾಮೀಜಿ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದರು.

ಡಾ.ಶಿವಕುಮಾರ ಸ್ವಾಮೀಜಿ ದೇಶದ ಹೆಮ್ಮೆಯಾಗಿದ್ದು, ಅವರಿಗೆ ಭಾರತ ರತ್ನ ನೀಡಬೇಕು. ಪಕ್ಷಾತೀತವಾಗಿ ಇದಕ್ಕೆ ಒತ್ತಾಯಿಸುತ್ತೇವೆ, ವಿಪಕ್ಷ ನಾಯಕನಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ.

| ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ವಿಪಕ್ಷ ನಾಯಕ