ಸಿದ್ಧಗಂಗಾ ಶ್ರೀ ನೀಡಿದ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಕೆ; ಸತತ ಮೂರನೇ ಬಾರಿ ಶಾಸಕ!

ವಿಜಯಪುರ: 111 ವರ್ಷಗಳನ್ನು ಪೂರೈಸಿದ್ದ ಶತಾಯುಷಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ತಮ್ಮ ಶಿಷ್ಯನಿಗೆ ನಾಮಪತ್ರ ಸಲ್ಲಿಸಲು ತಮ್ಮ ಕಾರನ್ನೇ ನೀಡಿದ್ದರಂತೆ. ಸ್ವಾಮೀಜಿ ನೀಡಿದ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದ ಶಿಷ್ಯ ಶಾಸಕನಾಗಿ ಆಯ್ಕೆಯಾಗಿದ್ದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಅವರಿಗೆ ಶ್ರೀಗಳು ನಾಮಪತ್ರ ಸಲ್ಲಿಸಲು ಕಾರನ್ನು ನೀಡಿದ್ದರು. ಬಳಿಕ 2008ರಲ್ಲಿ ದೇವರಹಿಪ್ಪರಗಿ ಕ್ಷೇತ್ರದಿಂದ ಸ್ಪರ್ಧಿಸಿ ನಡಹಳ್ಳಿ ಶಾಸಕರಾಗಿ ಆಯ್ಕೆಯಾಗಿದ್ದರು. ಇದೀಗ ಸತತ 3 ನೇ ಬಾರಿ ಶಾಸಕರಾಗಿದ್ದಾರೆ.

ಸ್ವಾಮೀಜಿ ಉಪಯೋಗಿಸುತ್ತಿದ್ದ ಮರ್ಸಿಡೀಸ್ ಬೆಂಜ್ ಕಾರನ್ನು ನೀಡಿದ್ದ ಸ್ವಾಮೀಜಿಗಳು ಮೊದಲ ಬಾರಿಗೆ ನಾಮಪತ್ರ ಸಲ್ಲಿಕೆಗೆ ಈ ಕಾರಿನಲ್ಲಿ ಹೋಗು ಎಂದು ಶಿಷ್ಯನಿಗೆ ತಿಳಿಸಿದ್ದರು. ಅಂದು ಸ್ವಾಮೀಜಿ ನೀಡಿದ್ದ ಕಾರು ಈಗಲೂ ನಡಹಳ್ಳಿ ಅವರ ಬೆಂಗಳೂರು ನಿವಾಸದಲ್ಲಿದೆ.

ದಿಗ್ವಿಜಯ ನ್ಯೂಸ್‌ನೊಂದಿಗೆ ಮಾತನಾಡಿರುವ ಶಾಸಕ ಎ ಎಸ್‌ ನಡಹಳ್ಳಿ, ಮಠದಲ್ಲಿ ಬಸವಣ್ಣನ ತತ್ತ್ವಗಳು ಪ್ರಯೋಗವಾಗುತ್ತಿದ್ದವು. ಒಂದು ದಿನವೂ ಮಕ್ಕಳಿಗೆ ಹೆದರಿಸದ ಶ್ರೀಗಳು ತಾಯಿ ಹೃದಯ ಹೊಂದಿದ್ದರು. ನಿಮಗೆ ಶ್ರೀಮಂತಿಕೆ ಬಂದರೆ ದಾಸೋಹ ಮಾಡಿ ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)