ಭಕ್ತರ ಹೃದಯದ ಕತ್ತಲೆ ಕಳೆದ ಶ್ರೀ

ವಿಜಯವಾಣಿ ಸುದ್ದಿಜಾಲ ಬೀದರ್
ಚಿದಂಬರಾಶ್ರಮ ಸಿದ್ಧಾರೂಢ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಾಮಾಜಿಕ, ಧಾರ್ಮಿಕ ಕೆಲಸ ಮಾಡುತ್ತ ಜನಮಾನಸದಲ್ಲಿ ಉಳಿದಿದ್ದಾರೆ. ಅಧ್ಯಯನ, ಅಧ್ಯಾಪನದಲ್ಲಿ ತೊಡಗಿ ತಮ್ಮ ಅಮೃತವಾಣಿಗಳ ಮೂಲಕ ಭಕ್ತರ ಹೃದಯದ ಕತ್ತಲೆ ಕಳೆದಿದ್ದಾರೆ ಎಂದು ಹಾರಕೂಡ ಸಂಸ್ಥಾನದ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹೇಳಿದರು.

ಸಿದ್ಧಾರೂಢ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ 75ನೇ ಜನ್ಮ ದಿನದ ಅಮೃತ ಮಹೋತ್ಸವದಲ್ಲಿ ಸೋಮವಾರ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅದ್ವೈತ ಸಾರ್ವಭೌಮ ಚಕ್ರವರ್ತಿ ಶ್ರೀ ಸಿದ್ಧಾರೂಢರ ಜೀವನ ಸಂದೇಶ ನಾಡಿನಾದ್ಯಂತ ಪಸರಿಸಿದ ಕೀರ್ತಿ ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ. ಶ್ರೀಗಳ ಅಧ್ಯಾತ್ಮ ಜ್ಞಾನ ಅಪಾರವಿದೆ. ಪ್ರಖರ ವಾಗ್ಮಿಗಳಾಗಿದ್ದಾರೆ ಎಂದು ಬಣ್ಣಿಸಿದರು.

ಮಹಾಲಿಂಗಪುರದ ಶ್ರೀ ಸಹಜಾನಂದ ಸ್ವಾಮೀಜಿ ಮಾತನಾಡಿ, ಶ್ರೀ ಸಿದ್ಧಾರೂಢರ ಜನ್ಮ ಸ್ಥಳ ಚಳಕಾಪುರವನ್ನು ಸುಕ್ಷೇತ್ರ ಮಾಡಿದ ಕೀರ್ತಿ ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ. ಅಂದಿನ ಗುಂಪಾ ಇಂದು ಅಧ್ಯಾತ್ಮದ ಅರಮನೆಯಾಗಿದೆ ಎಂದರು.

ಕಲಬುರಗಿಯ ಮಾತಾಶ್ರೀ ಲಕ್ಷ್ಮೀದೇವಿ, ಅಕ್ಕಲಕೋಟದ ಶ್ರೀ ಚಿಕ್ಕರೇವಣಸಿದ್ದೇಶ್ವರ ಸ್ವಾಮೀಜಿ,
ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿದರು.‘

ಇಂಚಲನ ಶ್ರೀ ಡಾ.ಶಿವಾನಂದ ಭಾರತಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶ್ರೀ ನಿರುಪಾದೇಶ್ವರ ಸ್ವಾಮೀಜಿ, ಶ್ರೀ ಸ್ವರೂಪಾನಂದ ಸ್ವಾಮೀಜಿ, ಶ್ರೀ ನಿಜಗುಣ ದೇವರು, ಶ್ರೀ ಗಣೇಶಾನಂದ, ಶ್ರೀ ಪರಮಾನಂದ ಸ್ವಾಮೀಜಿ, ಶ್ರೀ ಶ್ರದ್ಧಾನಂದ ಸ್ವಾಮೀಜಿ, ಮಾತೆ ಸಿದ್ದೇಶ್ವರಿ, ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಮಾತಾಶ್ರೀ ಶೋಭಾತಾಯಿ ನಾಗಪುರ, ಶ್ರೀ ಮನಿಷಾತಾಯಿ, ಮಾತಾ ಸಂಗೀತಾ ದೇವಿ, ಶ್ರೀ ಶಂಕರಾನಂದ ಸ್ವಾಮೀಜಿ, ಶ್ರೀ ಲಕ್ಷ್ಮಣಾನಂದ ಸ್ವಾಮೀಜಿ ಯರಗಲ್​ ಇತರರಿದ್ದರು.