<ಸಾಮಾಜಿಕ ಜಾಗೃತಿಗಾಗಿ ಶಿವರಾತ್ರಿ ಭಜನೆ * ಕಂಚಿನಡ್ಕ ಪದವಿನಲ್ಲಿ ಕಾರ್ಯಕ್ರಮ>
ಸಂದೀಪ್ ಸಾಲ್ಯಾನ್ ಬಂಟ್ವಾಳ
ಅಹೋರಾತ್ರಿ ಭಜನೆ, ಸಂಕೀರ್ತನೆ… ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ಭಕ್ತರಿಂದ ಶಿವನಾಮ ಸ್ಮರಣೆ… ಬಂದವರಿಗೆ ಅನ್ನದಾನ ಸಂತರ್ಪಣೆ… ಇಷ್ಟೆಲ್ಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಹಾಶಿವರಾತ್ರಿ ಆಚರಣೆ ನಡೆದಿದ್ದು ರುದ್ರಭೂಮಿಯಲ್ಲಿ!
ರುದ್ರಭೂಮಿ ಎಂದಾಕ್ಷಣ ಕೆಲವರಲ್ಲಿ ನಡುಕ ಉಂಟಾಗುವುದುಂಟು. ಅದರಲ್ಲೂ ರಾತ್ರಿ ಸ್ಮಶಾನಕ್ಕೆ ಹೋಗುವುದಂದರೆ ಭಯ. ಆದರೆ ಈ ರುದ್ರಭೀಮಿಯಲ್ಲಿ ಸೋಮವಾರ ಮಧ್ಯರಾತ್ರಿ ತನಕ ನೂರಾರು ಜನ ಶಿವರಾತ್ರಿ ಅಂಗವಾಗಿ ನಿರಂತರ ಆರು ಗಂಟೆ ಕಾಲ ಭಜನೆ ಮಾಡಿ ಶಿವಕೃಪೆಗೆ ಪಾತ್ರರಾದರು.
ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ದೇವಭೂಮಿ ಪರಿಕಲ್ಪನೆಯಡಿ ನಿರ್ಮಾಣಗೊಂಡ ಸಾರ್ವಜನಿಕ ಹಿಂದು ರುದ್ರಭೂಮಿಯಲ್ಲಿ ವಿಶಿಷ್ಟ ರೀತಿ ಶಿವರಾತ್ರಿ ಆಚರಿಸುವ ಮೂಲಕ ಸ್ಮಶಾನ ಅಕ್ಷರಶಃ ರುದ್ರ(ಶಿವ)ಭೂಮಿ, ದೇವಭೂಮಿ ಎನಿಸಿಕೊಂಡಿತು.
ರುದ್ರಭೂಮಿ ಎಂದರೆ ಕೇವಲ ಒಂದು ಸ್ಮಶಾನವೆಂದು ಪರಿಗಣಿಸದೆ ಸಾಕ್ಷಾತ್ ಶಿವನ ತಾಣವಾಗಿ ಇಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಧ್ಯಾನಸ್ಥ ಸ್ಥಿತಿಯಲ್ಲಿರುವ ಶಿವನ ಬೃಹತ್ ಪ್ರತಿಮೆ, ಬಾನೆತ್ತರಕ್ಕೆ ನಿಂತಿರುವ ತ್ರಿಶೂಲ, ಸ್ಮಶಾನ ಕಾಯುವಂತಿರುವ ಸತ್ಯ ಹರಿಶ್ಚಂದ್ರನ ಪ್ರತಿಮೆ. ಇದರ ಜತೆಗೆ ಹಿತವಾಗಿ ಬೀಸುವ ತಂಗಾಳಿ, ಮನಸ್ಸಿಗೆ ಮುದ ನೀಡುವ ಪ್ರಶಾಂತ ವಾತಾವರಣ, ನಾವು ಶಿವನ ಸನ್ನಿಧಿಯಲ್ಲೇ ಇದ್ದೇವೆಯೋ ಏನೋ ಎಂಬ ಭಾವ ಮೂಡಿಸುತ್ತದೆ. ಸ್ಮಶಾನವಾದರೂ ಇನ್ನಷ್ಟು ಹೊತ್ತು ಇಲ್ಲೇ ವಿಹರಿಸುವಂತೆ ಮನಸ್ಸು ಹಾತೊರೆಯುವಂತೆ ಮಾಡುವುದು ಇಲ್ಲಿನ ವಿಶೇಷ.
ಭಜನೆ ಸಂಕೀರ್ತನೆ ಸಂಪನ್ನ: ಸಜೀಪನಡು ಗ್ರಾಮದ ದೇವಭೂಮಿಯಲ್ಲಿ ಹಿಂದು ರುದ್ರಭೂಮಿ ಸಮಿತಿ ಹಾಗೂ ಹಿಂದು ರುದ್ರಭೂಮಿ ಅಭಿವೃದ್ಧಿ ಸಮಿತಿ ವತಿಯಿಂದ ಮಹಾಶಿವರಾತ್ರಿ ವಿಶಿಷ್ಟವಾಗಿ ಆಚರಿಸಲಾಯಿತು. ಸಾಯಂಕಾಲದಿಂದ ಮಧ್ಯರಾತ್ರಿ ತನಕ ಭಜನೆ ನಡೆಯಿತು. ಸ್ಥಳೀಯ 15 ತಂಡಗಳು ಭಜನೆಯಲ್ಲಿ ಪಾಲ್ಗೊಂಡವು. ಊರ ಹಾಗೂ ಪರವೂರ ಭಕ್ತರು ದೇವ ಭೂಮಿಗೆ ಭೇಟಿ ನೀಡಿ ಶಿವ ಸ್ಮರಣೆ ಮಾಡಿದರು.
ದೇವಭೂಮಿ ಕಲ್ಪನೆಯ ಪ್ರಶಾಂತ ಸ್ಥಳ: ದೇವಭೂಮಿ ಎನಿಸಿಕೊಂಡಿರುವ ಕಂಚಿನಡ್ಕ ಪದವಿನಲ್ಲಿರುವ ರುದ್ರಭೂಮಿಯಲ್ಲಿ ಜನ ಅಂಜಿಕೆಯಿಲ್ಲದೆ ಶಿವರಾತ್ರಿ ಆಚರಿಸಿದರು. ಸಜೀಪ ವ್ಯಾಪ್ತಿಯಲ್ಲಿ ಇದು ಅತ್ಯಂತ ಎತ್ತರ ಪ್ರದೇಶವಾಗಿದ್ದು ಇಲ್ಲಿ ನಿಂತಾಗ ಸುತ್ತಮುತ್ತಲಿನ ನಿಸರ್ಗದ ವಿಹಂಗಮ ನೋಟ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಸಾಯಂಕಾಲ ವೇಳೆ ಬೀಸುವ ತಣ್ಣನೆ ಗಾಳಿಯಲ್ಲಿ ವಿಹರಿಸಲು ಸ್ಥಳೀಯರು ಈ ರುದ್ರಭೂಮಿಗೆ ಆಗಮಿಸುತ್ತಾರೆ. ಸ್ಮಶಾನದ ಭಯ ದೂರವಾಗಿ ದೇವಭೂಮಿ ಎಂಬ ಆತ್ಮೀಯತೆ ಮೂಡಿಸುವ ಉದ್ದೇಶವಿಟ್ಟುಕೊಂಡು ರುದ್ರಭೂಮಿಯನ್ನು ಅಭಿವೃದ್ಧಿಪಡಿಲಾಗಿದೆ. ಆ ಉದ್ದೇಶ ಅಕ್ಷರಶಃ ಈಡೇರಿದೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ರುದ್ರಭೂಮಿಯಲ್ಲಿ ಮಹಾಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ದೇವ ಭೂಮಿ ಎಂಬ ಹೆಸರನ್ನು ಸಾಕ್ಷೀಕರಿಸಿತು.
ರುದ್ರಭೂಮಿ ಅಥವಾ ಸ್ಮಶಾನ ಎಂದಾಕ್ಷಣ ಜನರಲ್ಲಿ ಭಯ ಮೂಡುತ್ತದೆ. ಇದನ್ನು ನಿವಾರಿಸಿ ಸ್ಮಶಾನವೂ ಕೂಡ ಮನಸ್ಸಿಗೆ ನೆಮ್ಮದಿ ನೀಡುವ ಪ್ರಶಾಂತ ಸ್ಥಳವಾಗಬೇಕು, ದುಃಖದಲ್ಲಿ ಬರುವ ಜನರಿಗೆ ಇಲ್ಲಿನ ಪರಿಸರವೇ ಸಾಂತ್ವನ ನೀಡಬೇಕು ಎನ್ನುವ ಪರಿಕಲ್ಪನೆಯಡಿ ದೇವ ಭೂಮಿಯಂತೆ ಅಭಿವೃದ್ಧಿಪಡಿಸಲಾಗಿದೆ. ರುದ್ರಭೂಮಿ ಮನುಷ್ಯನ ಮೋಕ್ಷ ಸ್ಥಳ. ಇಂಥ ಪವಿತ್ರ ಸ್ಥಳ ಶಿವನ ಸಾನ್ನಿಧ್ಯವೂ ಹೌದು. ಈ ಬಗ್ಗೆ ಸಾಮಾಜಿಕ ಜಾಗೃತಿಗಾಗಿ ಶಿವರಾತ್ರಿಯಂದು ಭಜನೆಯ ಮೂಲಕ ಶಿವಾರಾಧನೆ ನಡೆಸಲಾಗುತ್ತಿದೆ.
ಯಶವಂತ ದೇರಾಜೆ
ಕಂಚಿನಡ್ಕ ಪದವು ಸಾರ್ವಜನಿಕ ಹಿಂದು ರುದ್ರ ಭೂಮಿ ಸಮಿತಿ ಅಧ್ಯಕ್ಷ