ಗೃಹಸ್ಥಾಶ್ರಮವನ್ನೇ ಆದರ್ಶ ಬದುಕಾಗಿ ಕಟ್ಟಿಕೊಟ್ಟ ಹೇಮರಡ್ಡಿ ಮಲ್ಲಮ್ಮ ಜೀವನ ಅನುಕರಣಿಯ

ಅಜ್ಜಂಪುರ: ಗೃಹಸ್ಥಾಶ್ರಮವನ್ನೇ ಆದರ್ಶ ಬದುಕಾಗಿ ಕಟ್ಟಿಕೊಟ್ಟ ಹೇಮರಡ್ಡಿ ಮಲ್ಲಮ್ಮ ಅವರ ಜೀವನ ಅನುಕರಣಿಯ ಎಂದು ಆನಂದಪುರ ಮುರುಘರಾಜೇಂದ್ರ ಮಠದ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಗಿರಿಯಾಪುರ ಗ್ರಾಮದಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಹಾಗೂ ಬಡಗನಾಡು ಹೇಮರಡ್ಡಿ ವೀರಶೈವ ಜನಾಂಗ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಬದಲಾಗುತ್ತಿರುವ ಇಂದಿನ ಸಮಾಜದಲ್ಲೂ ನಮ್ಮ ಸಂಸ್ಕೃತಿ, ಸಂಸ್ಕಾರ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇಂತಹ ಕಾರ್ಯಕ್ರಮಗಳೇ ಉತ್ತಮ ನಿದರ್ಶನ. ಶಿವಶರಣರ ಬದುಕು, ಆದರ್ಶ ಗುಣಗಳನ್ನು ನಮ್ಮ ಮಕ್ಕಳಿಗೆ ಬಳುವಳಿಯಾಗಿ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ನೂತನ ಸಭಾಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ, ಮಲ್ಲಮ್ಮನ ಬದುಕು ದೊಡ್ಡ ಸಾಂಸಾರಿಕ ಗ್ರಂಥ. ತಾನು ಮಾಡುವ ಕಾರ್ಯದಲ್ಲಿ ವಿಶ್ವಾಸ, ಶ್ರದ್ಧೆಯಿದ್ದರೆ ಗುರಿ ಮುಟ್ಟಬಹುದು. ಸಮಾಜದಲ್ಲಿ ನಡೆಯುತ್ತಿರುವ ಆಘಾತಕಾರಿ ಘಟನೆಗಳು ಜೀವನದ ಬಗ್ಗೆ ಜಿಗುಪ್ಸೆ ತರುತ್ತಿವೆ ಎಂದು ವಿಷಾದಿಸಿದರು.

ನಮ್ಮ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ ಕೇವಲ ದುಡಿಮೆಗೆ ಮೀಸಲಾಗಿದೆ. ಉತ್ತಮ ಸಮಾಜ ನಿರ್ವಣಕ್ಕೆ ಸಂಸ್ಕಾರಯುತ ಶಿಕ್ಷಣ ಅವಶ್ಯಕ. ನಮ್ಮ ಮುಂದಿನ ಪೀಳಿಗೆಗೆ ಶಿವಶರಣರ ಬದುಕು ಪ್ರೇರಣೆಯಾಗಬೇಕು ಎಂದು ಹೇಳಿದರು.

ಕೋಡಿಮಠ ಮಹಾಸಂಸ್ಥಾನದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಭಾಲ್ಕಿ ಹಿರೇಮಠದ ಶ್ರೀ ಡಾ.ಬಸವಲಿಂಗ ಪಟ್ಟದೇವರು, ಹುಣಸಘಟ್ಟ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬಡಗನಾಡು ಹೇಮರಡ್ಡಿ ಮಲ್ಲಮ್ಮ ಜನಾಂಗ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ, ಹೇಮರಡ್ಡಿ ಮಲ್ಲಮ್ಮ ಸಂಘದ ಉಪಾಧ್ಯಕ್ಷ ಮುರುಗೇಶ್, ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸಂಘಗಳು ದೇಶ ಕಟ್ಟುವ ಕೆಲಸ ಮಾಡಲಿ: ಪ್ರತಿಯೊಂದು ಜನಾಂಗದ ಸಂಘಗಳೂ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಡಾ. ಗೊ.ರು.ಚನ್ನಬಸಪ್ಪ ಹೇಳಿದರು.

ಈ ಭಾಗದ ರೆಡ್ಡಿ ಜನಾಂಗದ ಬಂಧುಗಳ ಕ್ಷೇಮಾಭಿವೃದ್ಧಿಗೆ ಒಗ್ಗೂಡಿಸುವ ದೃಷ್ಟಿಯಿಂದ ಸಂಘವನ್ನು ಸ್ಥಾಪಿಸಲಾಗಿದೆ. ಮೂಲತಃ ಆಂಧ್ರ ಪ್ರದೇಶದವರಾದ ಪೂರ್ವಿಕರು ಈ ಭಾಗಕ್ಕೆ ವಲಸೆ ಬಂದು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಮಲ್ಲಮ್ಮ ಸಾಮಾನ್ಯ ಮಹಿಳೆಯಾಗಿ ಎಲ್ಲ ಕಷ್ಟ ಅನುಭವಿಸಿ ಸಾಧಿ್ವಾಗಿ ರಡ್ಡಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದಳು ಎಂದು ತಿಳಿಸಿದರು.