ಗೋಕರ್ಣ: ಶ್ರೀ ಮಹಾಬಲೇಶ್ವರ ಮಂದಿರದ ವತಿಯಿಂದ ಆಶ್ವೀಜ ಕೃಷ್ಣ ಚತುರ್ದಶಿಯಂದು ಗುರುವಾರ ಗೋಧೂಳಿ ಶುಭ ಮುಹೂರ್ತದಲ್ಲಿ ಇಲ್ಲಿನ ಸಮುದ್ರ ತೀರದ ರುದ್ರಪಾದ ಕ್ಷೇತ್ರದಲ್ಲಿರುವ ವೈವಾಹಿಕ ಪರ್ವತ ಬಳಿ ಆಚರಿತವಾಗುವ ಶಿವ-ಗಂಗಾ ವಿವಾಹ ವೈಭವದಿಂದ ನಡೆಯಿತು.
ಸಂಧ್ಯಾ ಸಮಯದ ಗೋಧೂಳಿ ಮುಹೂರ್ತದಲ್ಲಿ ಶ್ರೀಮಂದಿರದಿಂದ ಬಿರುದು-ಬಾವಳಿಯೊಂದಿಗೆ ಮಂಗಳವಾದ್ಯ ಮೆರವಣಿಗೆಯಲ್ಲಿ ಹೊರಟ ಶ್ರೀಮಹಾಬಲೇಶ್ವರ ಉತ್ಸವವು ಸಮುದ್ರ ತೀರದಲ್ಲಿ ಸಾಗಿ ವಿಶೇಷವಾಗಿ ನಿರ್ವಿುಸಲಾದ ವಿವಾಹ ಮಂಟಪಕ್ಕೆ ಆಗಮಿಸಿತು. ಇದಕ್ಕೂ ಮುನ್ನ ವಿವಾಹದಲ್ಲಿ ವಧು ಗಂಗಾಮಾತೆಯನ್ನು ವೈವಾಹಿಕ ಮಂಟಪಕ್ಕೆ ಕರೆತರಲಾಯಿತು. ಶ್ರೀಮಹಾಬಲೇಶ್ವರ ಉತ್ಸವವು ಮಂಟಪಕ್ಕೆ ಆಗಮಿಸಿದ ನಂತರ ಮಂದಿರದ ಪ್ರಧಾನ ಅರ್ಚಕ ವೇ. ಗಣಪತಿ ಗ.ಭಟ್ಟ ಹಿರೇ ಮತ್ತು ಕ್ಷೇತ್ರದ ಮುಖ್ಯ ಉಪಾಧಿವಂತ ವೈದಿಕರ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ವಿಧ್ಯುಕ್ತ ವಿವಾಹ ಸಂಪನ್ನವಾಯಿತು. ವಿವಾಹದ ತರುವಾಯ ಕ್ಷೇತ್ರ ಸಂಪ್ರದಾಯದಂತೆ ಮಂಟಪಕ್ಕೆ ಸಿಂಗರಿಸಲಾದ ಮಾವಿನತಳಿರನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಯಿತು.
ಮಂಟಪಗಳ ಶೃಂಗಾರ:
ಪರಶಿವ ವಿವಾಹದ ಪ್ರಯುಕ್ತ ಉತ್ಸವ ಮೆರವಣಿಗೆ ಸಾಗುವ ಸಮುದ್ರ ತೀರದ ಮಾರ್ಗದ ಉದ್ದಕ್ಕೂ ವೈವಿಧ್ಯಮಯ ಮಾವಿನ ಮಂಟಪಗಳನ್ನು ನಿರ್ವಿುಸಿ ಬಗೆಬಗೆಯ ಹೂವು ಮತ್ತು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವಿವಾಹ ಮುಗಿಸಿ ತಿರುಗಿ ಆಗಮಿಸುವ ವೇಳೆ ಶಿವ-ಗಂಗಾ ದಿಬ್ಬಣವು ಈ ಮಂಟಪಗಳಲ್ಲಿ ನಿಂತು ಸೇವೆ ಸ್ವೀಕರಿಸಿತು. ವಿವಾಹದ ನಿಮಿತ್ತ ಮಂಟಪಗಳ ಬಳಿ ಹಾಲಕ್ಕಿ ಒಕ್ಕಲಿಗ ಜಾನಪದ ಕಲಾವಿದರಿಂದ ಗುಮಟೆ ಪಾಂಗ ಕಾರ್ಯಕ್ರಮ ಸಂಘಟಿಸಲಾಗಿತ್ತು. ಇವೆಲ್ಲ ಸಮಾರಂಭಗಳನ್ನು ಮತ್ತು ಸಮುದ್ರ ತೀರದ ವಿಶೇಷ ಶೃಂಗಾರವನ್ನು ವೀಕ್ಷಿಸಿ ಸಂಭ್ರಮಿಸಲು ಸಮುದ್ರ ಕಿನಾರೆಯ ಎಲ್ಲೆಡೆಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ತುಂಬಿ ತುಳುಕಿದ್ದರು.
ನವ ಜೋಡಿಗೆ ಮುತ್ತಿನಾರತಿ:
ಮೆರವಣಿಗೆಯಲ್ಲಿ ಆಗಮಿಸಿದ ಶಿವ-ಗಂಗಾ ನವ ವಿವಾಹಿತ ಜೋಡಿಗೆ ಮೊದಲು ಸಮುದ್ರ ತೀರದಲ್ಲಿರುವ ಮಹರ್ಷಿ ದೈವರಾತ ಆಶ್ರಮದಲ್ಲಿ ಮುತ್ತಿನಾರತಿ ಎತ್ತಿ ಸ್ವಾಗತಿಸಲಾಯಿತು. ಪರಂಪರಾಗತ ಪದ್ಧತಿಯಂತೆ ಆಶ್ರಮದಲ್ಲಿ ಅಷ್ಟಾವಧಾನ ಸೇವೆ ಮತ್ತು ಮಹಾಮಂಗಳಾರತಿಗಳನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲಿಂದ ಹೊರಟು ಶ್ರೀಮಂದಿರದ ಅಮೃತಾನ್ನ ಭೋಜನಾಲಯಕ್ಕೆ ಭೇಟಿಯಿತ್ತ ಶಿವ-ಗಂಗಾ ನವಜೋಡಿಗೆ ಆಗಮೋಕ್ತವಾದ ಸೇವೆಗಳನ್ನು ನೆರವೇರಿಸಲಾಯಿತು. ಈ ಎಲ್ಲ ವೈವಾಹಿಕ ಕಾರ್ಯಗಳ ತರುವಾಯ ಮಂದಿರಕ್ಕೆ ಬಂದ ನವಜೋಡಿಯನ್ನು ಆರತಿ ಬೆಳಗಿ ಒಳಗೆ ಸ್ವಾಗತಿಸುವುದರೊಂದಿಗೆ ದೀಪಾವಳಿಯ ಪ್ರಧಾನ ಧಾರ್ವಿುಕ ಆಕರ್ಷಣೆಯಾದ ದೇವರ ಮದುವೆ ಎಂದು ಕರೆಯಲಾಗುವ ಶಿವ-ಗಂಗಾ ಲಗ್ನ ಸಂಪನ್ನವಾಯಿತು. ಮಂದಿರ ಸಮಿತಿ ಸದಸ್ಯ ವೇ.ಸುಬ್ರಹ್ಮಣ್ಯ ಅಡಿ, ಇತರರಿದ್ದರು.