ಮತಯಾಚನೆಗಾಗಿ ಸೈನಿಕರ ಚಿತ್ರ ಬಳಕೆ: ಬಿಜೆಪಿ ವಿರುದ್ಧ ಶಿವಸೇನೆ ಕಿಡಿ

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಮತಯಾಚನೆಗಾಗಿ ಸೇನೆಯ ಸಮವಸ್ತ್ರ ಮತ್ತು ಸೈನಿಕರ ಚಿತ್ರಗಳನ್ನು ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳ ವಿರುದ್ಧ ಶಿವಸೇನೆ ಕಿಡಿ ಕಾರಿದೆ.

ಶಿವಸೇನೆಯ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಕಟಿಸಿರುವ ಸಂಪಾದಕೀಯದಲ್ಲಿ ‘ಮತಯಾಚನೆಗಾಗಿ ಸೈನಿಕರ ಸಮವಸ್ತ್ರ ಮತ್ತು ಸೈನಿಕರ ಚಿತ್ರಗಳನ್ನು ಬಳಸಿಕೊಳ್ಳುವುದು ಮತ್ತು ಸೇನೆಯ ಕಾರ್ಯಾಚರಣೆಗಳ ಕುರಿತು ಸಾಕ್ಷ್ಯವನ್ನು ಕೇಳುವುದು ಸಮಾನ ಅಪರಾಧ ಎಂದು ತಿಳಿಸಿದೆ.

ಬಿಜೆಪಿ ನಾಯಕ ಮನೋಜ್​ ತಿವಾರಿ ಅವರು ಸೇನೆಯ ಸಮವಸ್ತ್ರದಲ್ಲಿ ಫೋಟೋ ತೆಗೆಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಅವರು ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸುತ್ತಿದ್ದಾರೆ. ಇವರ ಈ ನಡೆ ಬಾಲಾಕೋಟ್​ ವಾಯು ದಾಳಿ ರಾಜಕೀಯ ಉದ್ದೇಶಕ್ಕಾಗಿ ನಡೆಸಲಾಗಿತ್ತು ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡುತ್ತದೆ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.

ಕೆಲವು ಪಕ್ಷಗಳು ಪಾಕಿಸ್ತಾನದ ವಿರುದ್ಧ ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದೇವೆ ಎಂದು ತಮ್ಮ ಪೋಸ್ಟರ್​ಗಳಲ್ಲಿ ಮುದ್ರಿಸಿವೆ. ಜತೆಗೆ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ಪಾಕಿಸ್ತಾನದ ಎಫ್​-16 ವಿಮಾನವನ್ನು ಹೊಡೆದುರುಳಿಸುವುದಕ್ಕೆ ಬಿಜೆಪಿ ಅಧಿಕಾರದಲ್ಲಿರುವುದೇ ಕಾರಣ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಹಲವು ಪಕ್ಷಗಳು ಪ್ರಚಾರಕ್ಕಾಗಿ ಅಭಿನಂದನ್​ ಅವರ ಚಿತ್ರವನ್ನು ಬಳಸಿಕೊಂಡಿದ್ದಾರೆ. ವಿರೋಧ ಪಕ್ಷಗಳು ವಾಯು ದಾಳಿ ಕುರಿತು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ ನಂತರ ಸಾಕ್ಷ್ಯ ಕೇಳುವುದು ದೇಶ ದ್ರೋಹ ಎಂದು ಬಿಜೆಪಿ ಕರೆದಿತ್ತು ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.

ಬಿಜೆಪಿ ಮತ್ತು ಶಿವಸೇನೆ ಈ ಲೋಕಸಭೆ ಚುನಾವಣೆ ಮತ್ತು ಮುಂದಿನ ವಿಧಾನಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿರುವುದಾಗಿ ಕಳೆದ ತಿಂಗಳು ಘೋಷಿಸಿದ್ದವು. ಉಭಯ ಪಕ್ಷಗಳು ತಮ್ಮ ನಿರ್ಧಾರವನ್ನು ಪ್ರಕಟಿಸಿ ಒಂದು ತಿಂಗಳು ಕಳೆಯುವುದರೊಳಗೆ ಶಿವಸೇನೆ ತನ್ನ ಮೈತ್ರಿ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. (ಏಜೆನ್ಸೀಸ್​)