ಶಿವಸೇನೆ -ಬಿಜೆಪಿ ನಡುವಿನ ಮೈತ್ರಿ ಪಕ್ಕ: ಶೀಘ್ರದಲ್ಲೇ ಘೋಷಣೆಯಾಗಲಿದೆ ಸೀಟು ಹಂಚಿಕೆ ವಿವರ

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಹುಕಾಲದಿಂದಲೂ ಮಿತ್ರಪಕ್ಷವಾಗಿದ್ದ ಶಿವಸೇನೆ ಇತ್ತೀಚೆಗೆ ಮುನಿಸಿಕೊಂಡು ಮೈತ್ರಿ ಮುರಿದುಕೊಳ್ಳುವ ಹಂತಕ್ಕೆ ತಲುಪಿತ್ತಾದರೂ, ಸದ್ಯ ಕೋಪ ಶಮನ ಮಾಡಿಕೊಂಡು ಚುನಾವಣೆಗೆ ಒಟ್ಟಾಗಿ ಹೋಗುವ ನಿರ್ಧಾರ ಮಾಡಿದೆ.

ಕಳೆದ ಮೂರು ವರ್ಷಗಳಿಂದಲೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಿವಸೇನೆಯ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು. ರಾಮ ಮಂದಿರ ನಿರ್ಮಾಣದ ವಿಚಾರದಲ್ಲಂತಲೂ ಸುಗ್ರೀವಾಜ್ಞೆ ಜಾರಿಗೆ ಆಗ್ರಹಿಸಿ ಮಿತ್ರ ಪಕ್ಷ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಸದ್ಯ ಎರಡೂ ಪಕ್ಷದ ನಾಯಕರು ತಮ್ಮ ನಡುವಿನ ವ್ಯತ್ಯಾಸವನ್ನೆಲ್ಲ ಮರೆತು ಸೀಟು ಹಂಚಿಕೆಗಾಗಿ ಒಟ್ಟಾಗಿ ಕುಳಿತು ಚರ್ಚೆ ನಡೆಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಮತ್ತು ಶಿವಸೇನೆಯ ಮುಖ್ಯಸ್ಥ ಉದ್ಧವ್​ ಠಾಕ್ರೆ ಅವರ ನಡುವೆ ನಡೆದ ಚರ್ಚೆಯಲ್ಲಿ ಸೀಟು ಹಂಚಿಕೆ ಮಾತುಕತೆ ಈಗಾಗಲೇ ಪೂರ್ಣಗೊಂಡಿದೆ ಎನ್ನಲಾಗಿದೆ. ಸದ್ಯದಲ್ಲೇ ಇಬ್ಬರೂ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಸೀಟು ಹಂಚಿಕೆಯ ವಿವರ ಪ್ರಕಟಿಸಲಿದ್ದಾರೆ.

ಬಲ್ಲಮೂಲಗಳ ಮಾಹಿತಿ ಪ್ರಕಾರ, ವಿಧಾನಸಭೆ ಚುನಾವಣೆಯಲ್ಲಿ 50:50 ಮತ್ತು ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 48 ಸೀಟುಗಳ ಪೈಕಿ 25 ಬಿಜೆಪಿಗೆ ಮತ್ತು 23 ಸೀಟುಗಳು ಶಿವಸೇನಾಗೆ ನೀಡುವ ಬಗ್ಗೆ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯು ಲೋಕಸಭೆ ಚುನಾವಣೆ ಬೆನ್ನಿಗೇ ನಡೆಯಲಿದೆ.

ಸದ್ಯ ಮಹಾರಾಷ್ಟ್ರ ದೇಶದಲ್ಲಿಯೇ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ. 80 ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.