ಶೀತಲೀಕರಣ ಘಟಕಕ್ಕೆ ಬೀಗ ಜಡಿದ ಪೊಲೀಸರು

ಅಂಕೋಲಾ: ತಾಲೂಕಿನ ಕಾರೇಬೈಲ್​ನಲ್ಲಿ ನಡೆಯುತ್ತಿರುವ ಪೌರಸ್ ಫುಡ್ ಕಂಪನಿಯ ಶೀತಲೀಕರಣ ಘಟಕಕ್ಕೆ ನ್ಯಾಯಾಲಯದ ಆದೇಶದಂತೆ ಪೊಲೀಸರು ಬೀಗ ಹಾಕಿದ ಘಟನೆ ಶುಕ್ರವಾರ ನಡೆದಿದೆ.

ಪೌರಸ್ ಫುಡ್ ಕಂಪನಿಯ ಮಾಲೀಕರು 7 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದಾರೆ ಎಂದು ಆಂಧ್ರ ಪ್ರದೇಶದ ಕೆಬಿಆರ್ ಮರೈನ್ ಕಂಪನಿಯವರು ಕಳೆದ ಏಪ್ರಿಲ್ 9ರಂದು ಹೈದರಾಬಾದ್ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ತನಿಖೆ ನಡೆಸಿ ಕಾನೂನಾತ್ಮಕ ಕ್ರಮ ಕೈಗೊಂಡು ವರದಿ ನೀಡುವಂತೆ ಮೇ 29ರಂದು ಆದೇಶ ನೀಡಿತ್ತು.

ಈ ಹಿನ್ನಲೆಯಲ್ಲಿ ಗುರುವಾರ ಸಿಪಿಐ ಪ್ರಮೋದಕುಮಾರ ನೇತೃತ್ವದ ತಂಡವು ಪೌರಸ್ ಫುಡ್ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶುಕ್ರವಾರ ಪುನಃ ತೆರಳಿ ಶೀತಲೀಕರಣ ಘಟಕಕ್ಕೆ ಬೀಗ ಹಾಕಲಾಗಿದೆ. ಈ ಶೀತಲೀಕರಣ ಘಟಕದಲ್ಲಿ ಕೋಟ್ಯಂತರ ರೂ. ಮೌಲ್ಯದ ಮೀನು ಹಾಗೂ ಇನ್ನಿತರ ಸಮುದ್ರ ಉತ್ಪನ್ನಗಳನ್ನು ದಾಸ್ತಾನಿರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಪೌರಸ್ ಫುಡ್ ಕಂಪನಿಯ ಮಾಲೀಕ ಭಾಸ್ಕರ ಶೆಟ್ಟಿ ಮಾತನಾಡಿ, ‘ನಾವು ಕೆಬಿಆರ್ ಮರೈನ್ ಕಂಪನಿಗೆ 2 ಕೋಟಿ 35 ಲಕ್ಷ ರೂ. ಕೊಡುವುದು ಬಾಕಿ ಇದೆ. ಅವರು ನಮಗೆ ಸಂಸ್ಕೃರಣಾ ಸೇವೆಗಾಗಿ 1 ಕೋಟಿ 56 ಲಕ್ಷ ರೂ. ಕೊಡುವುದು ಬಾಕಿ ಇದೆ. ನೀವು ಏಕಾಏಕಿ ದೂರುದಾರರ ಪರವಾಗಿ ನಿಂತು ಕಾರ್ವಿುಕರನ್ನು ಬೀದಿಗೆ ತರಲು ಸಂಚು ರೂಪಿಸಿರುವುದು ಸಮಂಜಸವಲ್ಲ. ಸದ್ಯ ಬೀಗಮುದ್ರ ಹಾಕಿರುವ ಶೀತಲೀಕರಣ ಘಟಕದಲ್ಲಿ 35 ಕೋಟಿ ರೂ. ಬೆಲೆ ಬಾಳುವ ಒಂದು ಸಾವಿರ ಟನ್ ಮತ್ಸ್ಯ ಉತ್ಪನ್ನ ಇದ್ದು, ಇದು ಹಾಳಾದರೆ ದೂರುದಾರರೇ ಹೊಣೆಯಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣದ ತನಿಖಾಧಿಕಾರಿ ಸಿಪಿಐ ಪ್ರಮೋದಕುಮಾರ ಬಿ. ಮಾತನಾಡಿ, ನಿಮ್ಮ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿವಾದಿತ ಸ್ವತ್ತನ್ನು ಜಪ್ತಿ ಪಡಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ವಿನಾಕಾರಣ ನಮ್ಮ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದರು.

ನಾವು ಕಾರ್ಯನಿರ್ವಹಿಸುತ್ತಿರುವ ಕಂಪನಿಯ ಶೀತಲೀಕರಣ ಸಂಗ್ರಹಣಾ ಘಟಕಕ್ಕೆ ಏಕಾಏಕಿ ಬೀಗ ಹಾಕಿರುವುದು ನಮಗೆ ತೀವ್ರ ಆಘಾತ ತಂದಿದೆ. ನಾವು ಈ ಕಂಪನಿಯನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ನಮ್ಮ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಕೆ.ಬಿ.ಆರ್. ಮರೈನ್ ಕಂಪನಿ ಮಾಡಿದೆ. 

—— ಗೋವಿಂದ್ರಾಯ ನಾಯಕ, ಪೌರಸ್ ಫುಡ್ ಕಂಪನಿಯ ಕಾರ್ವಿುಕ