ಕಾಯಕಲ್ಪಕ್ಕೆ ಕಾದಿದೆ ಶಿರ್ವ-ಪದವು ಕಾಲೇಜು ರಸ್ತೆ

| ಅಶ್ವಿನ್ ಮೂಡುಬೆಳ್ಳೆ, ಶಿರ್ವ
ಶಿರ್ವ, ಬೆಳ್ಮಣ್ ಹೆದ್ದಾರಿಯಿಂದ ಪದವು ಹಿಂದು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಮೂಲ್ಕಿ ಸುಂದರರಾಮ ಕಾಲೇಜು, ವಿದ್ಯಾವರ್ಧಕ ಕೇಂದ್ರೀಯ ವಿದ್ಯಾಲಯಕ್ಕೆ ಹೋಗುವ ರಸ್ತೆ ತೀರ ಹದಗೆಟ್ಟಿದ್ದು, ಕಾಯಕಲ್ಪಕ್ಕೆ ಕಾಯುತ್ತಿದೆ.

ಕಾಲೇಜು ಹಿಂಭಾಗದಿಂದ ಶಿರ್ವ ಮಾರಿಗುಡಿ, ಮೂಡು ಮಟ್ಟಾರು, ಮುದ್ರೊಟ್ಟು, ಅಡಪಾಡಿ, ನಿಂಜೂರು ಜೋಡಿಸುವ ರಸ್ತೆ ದುರಸ್ತಿಯಾಗಿದೆ. ಆದರೆ ಮುಖ್ಯರಸ್ತೆಯಿಂದ ಶಿಕ್ಷಣ ಸಂಸ್ಥೆ ಎದುರು ಭಾಗದಿಂದ ಪದವು, ಶ್ರೀ ವಿಷ್ಣುಕಲಾ ವೃಂದ, ಗಾಂಧಿನಗರ, ಜಾರಂದಾಯ ದೈವಸ್ಥಾನ ಕ್ರಾಸ್ ರಸ್ತೆಯಾಗಿ ಶ್ರೀ ವಿಷ್ಣುಮೂರ್ತಿ ದೇವಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಮಾರು ಒಂದೂವರೆ ಕಿ.ಮೀ. ಭಾಗದಲ್ಲಿ ಹೊಂಡಗಳಿದ್ದು, ಡಾಂಬರು ಕಿತ್ತು ಹೋಗಿದೆ. ಮಳೆಗಾಲ ಸಮೀಪಿಸುತ್ತಿದ್ದು, ರಸ್ತೆಗೆ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲ. ಜೋರಾಗಿ ಮಳೆ ಬಂದರೆ ರಸ್ತೆಯೇ ಚರಂಡಿಯಾಗುತ್ತದೆ. ಪ್ರತಿದಿನ ನೂರಾರು ವಾಹನಗಳು ಈ ರಸ್ತೆ ಮೂಲಕ ಓಡಾಡುತ್ತಿರುತ್ತವೆ. ಕಾಲ್ನಡಿಗೆಯಲ್ಲಿ ಬರುವ ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕ.

ಪ್ರತಿದಿನ ಮೂರು ಸಾವಿರ ವಿದ್ಯಾರ್ಥಿಗಳು ಮಾತ್ರವಲ್ಲದೆ ಪದವು ಸಮೀಪದ ಹಳ್ಳಿಯಿಂದ ಪೇಟೆಗೆ ಬರುವ ಗ್ರಾಮಸ್ಥರಿಗೂ ಇದೇ ಪ್ರಮುಖ ರಸ್ತೆಯಾಗಿದೆ. ಮಳೆಗಾಲ ಪ್ರಾರಂಭವಾಗುವ ಮೊದಲು ರಸ್ತೆಗೆ ಕಾಯಕಲ್ಪ ನೀಡಬೇಕಾಗಿದೆ. ಸ್ಥಳೀಯ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.

ಈ ಬಗ್ಗೆ ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳಿಗೆ, ಕ್ಷೇತ್ರದ ಶಾಸಕ ಲಾಲಾಜಿ ಆರ್.ಮೆಂಡನ್ ಅವರ ಗಮನ ಸೆಳೆಯಲಾಗಿದೆ. ಅವರು ದುರಸ್ತಿ ಭರವಸೆ ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆಯೂ ತೊಡಕಾಗಿರಬಹುದು.
|ಪ್ರೊ.ವೈ.ಭಾಸ್ಕರ ಶೆಟ್ಟಿ ಆಡಳಿತಾಧಿಕಾರಿ, ವಿದ್ಯಾವರ್ಧಕ ಸಂಘ ಶಿರ್ವ

ಗ್ರಾಮ ಪಂಚಾಯಿತಿ ಅನುದಾನದಲ್ಲಿ ಈ ರಸ್ತೆಯ ದುರಸ್ತಿ ಕಷ್ಟ. ಅನುದಾನವನ್ನು ಪ್ರತಿಯೊಬ್ಬ ವಾರ್ಡ್ ಸದಸ್ಯರಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದೆ. ರಸ್ತೆ ದುರಸ್ತಿಗೆ ಅನುದಾನ ಸಾಕಾಗುವುದಿಲ್ಲ. ಮುಖ್ಯ ರಸ್ತೆಯಿಂದ ಕಾಲೇಜುವರೆಗೂ ರಸ್ತೆ ಅಗಲ ಕಿರಿದಾಗಿದ್ದು, ರಸ್ತೆಗೆ ತಾಗಿಕೊಂಡು ಖಾಸಗಿ ಜಾಗ ಇರುವುದರಿಂದ ರಸ್ತೆ ವಿಸ್ತರಣೆ ಹಾಗೂ ಚರಂಡಿ ವ್ಯವಸ್ಥೆಗೆ ಅವಕಾಶವಿಲ್ಲ. ಖಾಸಗಿಯವರು ಸ್ವಲ್ಪ ಸ್ಥಳವನ್ನು ರಸ್ತೆಗಾಗಿ ಬಿಟ್ಟುಕೊಟ್ಟಲ್ಲಿ ಶಾಸಕರು, ಸಂಸದರ ಅನುದಾನ ಬಳಸಿ ಚರಂಡಿ ಸಹಿತ ರಸ್ತೆಯ ದುರಸ್ತಿ ಮಾಡಬಹುದು.
|ವಾರಿಜಾ ಪೂಜಾರ್ತಿ ಗ್ರಾಪಂ ಅಧ್ಯಕ್ಷೆ ಶಿರ್ವ

ಶಿರ್ವ-ಪದವು ಕಾಲೇಜು ರಸ್ತೆ ಸಮಸ್ಯೆ ಬಗ್ಗೆ ಗಮನ ಹರಿಸಿದ್ದೇನೆ. ಹೊಸ ಅನುದಾನದಲ್ಲಿ ರಸ್ತೆ ದುರಸ್ತಿ ಬಗ್ಗೆ ಆದ್ಯತೆ ನೀಡಲಾಗುವುದು.
|ವಿಲ್ಸನ್ ರೊಡ್ರಿಗಸ್ ಜಿಪಂ ಸದಸ್ಯ ಶಿರ್ವ

Leave a Reply

Your email address will not be published. Required fields are marked *