ಶಿರ್ವಕ್ಕೆ ಬೇಕಿದೆ ಅಗ್ನಿಶಾಮಕ ಕೇಂದ್ರ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ
ಉಡುಪಿ ಜಿಲ್ಲೆಯಲ್ಲಿ ಸುಮಾರು 14 ಸಾವಿರ ಜನಸಂಖ್ಯೆ ಹೊಂದಿರುವ ಅತೀ ದೊಡ್ಡ ಗ್ರಾಪಂ ಶಿರ್ವಕ್ಕೆ ಅಗ್ನಿಶಾಮಕ ಕೇಂದ್ರ ಅಗತ್ಯವಾಗಿ ಸ್ಥಾಪನೆಯಾಗಬೇಕಿದೆ. ಇದರಿಂದ ಸುತ್ತಮುತ್ತಲಿನ ಕುತ್ಯಾರು, ಕಳತ್ತೂರು, ಪಿಲಾರು, ಸಾಂತೂರು, ಬೆಳ್ಳೆ, ಕಟ್ಟಿಂಗೇರಿ, ಪಾದೂರು, ಕುರ್ಕಾಲು ಗ್ರಾಮಗಳಿಗೆ ಆನುಕೂಲವಾಗಲಿದೆ.
ಈ ಪ್ರದೇಶಗಳಲ್ಲಿ ಈ ಹಿಂದೆ ಹಲವಾರು ಅಗ್ನಿ ಅವಘಡಗಳು ಸಂಭವಿಸಿವೆ. ಜತೆಗೆ ಉಡುಪಿಯಿಂದ ಇಲ್ಲಿಗೆ (ಸುಮಾರು 18 ಕಿ.ಮೀ.) ಅಗ್ನಿಶಾಮಕ ವಾಹನ ಬರಲು ಸಮಯ ತಗುಲುತ್ತದೆ. ವಿಳಂಬದಿಂದಾಗಿ ಅನಾಹುತದ ಪ್ರಮಾಣ ಹೆಚ್ಚಾಗುತ್ತದೆ. ಈ ವ್ಯಾಪ್ತಿಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು, ಬ್ಯಾಂಕ್‌ಗಳು, ಅರಣ್ಯ ಪ್ರದೇಶ, ಮೇವಿನ ಪ್ರದೇಶಗಳಿವೆ. ಅಗ್ನಿ ಅನಾಹುತವಾದಲ್ಲಿ ಅಗ್ನಿಶಾಮಕ ವಾಹನಗಳು ಉಡುಪಿಯಿಂದ ಬರಬೇಕಿರುವುದರಿಂದ ಅಗ್ನಿಜ್ವಾಲೆ ವ್ಯಾಪಿಸುವ ಪ್ರಮಾಣ ಹೆಚ್ಚಾಗಿ ಅಪಾರ ನಷ್ಟವಾಗುತ್ತಿದೆ.

ಡಿಸಿಗೆ ಮನವಿ: ಶಿರ್ವದಲ್ಲಿ ಅಗ್ನಿಶಾಮಕ ಕೇಂದ್ರ ಸ್ಥಾಪಿಸುವ ಬಗ್ಗೆ ಶಿರ್ವ ಲಯನ್ಸ್ ಕ್ಲಬ್ ಹಾಗೂ ಸಾರ್ವಜನಿಕರು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಮನವಿ ನೀಡಿದ್ದಾರೆ. ಮನವಿಗೆ ಜಿಲ್ಲಾಧಿಕಾರಿ ಪೂರಕವಾಗಿ ಸ್ಪಂದಿಸಿದ್ದಾರೆ. ಗೃಹ ಸಚಿವ ಎಂ.ಬಿ.ಪಾಟೀಲ್, ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಗೂ ಮನವಿ ನೀಡಲು ನಿರ್ಧರಿಸಲಾಗಿದೆ.

ಸೂಕ್ತ ಪ್ರದೇಶ: ಶಿರ್ವಕ್ಕೆ ಅಗ್ನಿಶಾಮಕ ಕೇಂದ್ರಗಳಿರುವ ಕಾರ್ಕಳ ಹಾಗೂ ಉಡುಪಿಯಿಂದ ಸರಿಸುಮಾರು 18-20 ಕಿ.ಮೀ. ಅಂತರವಿದೆ. ಶಿರ್ವ ನಡು ಭಾಗದಲ್ಲಿದ್ದು ಗುಡ್ಡಗಾಡು, ಮುಳಿ ಹುಲ್ಲಿನ ಪ್ರದೇಶಗಳನ್ನು ಹೊಂದಿದೆ. ಇಲ್ಲಿ ಅಗ್ನಿಶಾಮಕ ಕೇಂದ್ರವಾದಲ್ಲಿ ಶಿರ್ವ ಸುತ್ತಮುತ್ತಲಿನ 5-6 ಗ್ರಾಮಗಳಿಗೆ ಮತ್ತು ಸೂಡ, ಬೆಳ್ಮಣ್ ಪ್ರದೇಶಕ್ಕೂ ಅನುಕೂಲವಾಗಲಿದೆ.

ಪ್ರಸ್ತುತ ದೂರದ ಉಡುಪಿ ಹಾಗೂ ಕಾರ್ಕಳದ ಅಗ್ನಿಶಾಮಕ ಕೇಂದ್ರಕ್ಕೆ ಅವಲಂಬಿತರಾಗಿದ್ದು, ಕಾಪು ತಾಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಕೇಂದ್ರ ಸ್ಥಾಪನೆಯಾಗುವ ಪ್ರಸ್ತಾಪ ಇದೆ. ಕಾಪುವಿಗೆ ಹೆದ್ದಾರಿ ನೇರ ಸಂಪರ್ಕ ಇರುವುದರಿಂದ ಅಗ್ನಿಶಾಮಕ ಕೇಂದ್ರ ಗ್ರಾಮೀಣ ಪ್ರದೇಶ ಶಿರ್ವದಲ್ಲಿ ಆರಂಭಿಸಿದರೆ ಹೆಚ್ಚು ಅನುಕೂಲ. ಅಗ್ನಿ ಅನಾಹುತ ಸಹಿತ ಇನ್ನಿತರ ಆಕಸ್ಮಿಕಗಳಿಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗಲಿದೆ. ಶಿರ್ವದಲ್ಲಿ ಅಗ್ನಿಶಾಮಕ ಕೇಂದ್ರ ಸ್ಥಾಪನೆಗೆ ಸೂಕ್ತ ಸ್ಥಳಾವಕಾಶವೂ ಇದೆ.
ವಿಲ್ಸನ್ ರಾಡ್ರಿಗಸ್, ಜಿಪಂ ಸದಸ್ಯ

ಶಿರ್ವದಲ್ಲಿ ಅಗ್ನಿಶಾಮಕ ಕೇಂದ್ರ ಸ್ಥಾಪನೆಯಾದಲ್ಲಿ ಪಡುಬೆಳ್ಳೆ, ಮೂಡುಬೆಳ್ಳೆ, ಕಟ್ಟಿಂಗೇರಿ ಪ್ರದೇಶಕ್ಕೆ ತ್ವರಿತ ಸೇವೆ ದೊರಕಲಿದೆ. ಜತೆಗೆ ಸಮೀಪದ ಮರ್ಣೆ, ಪೆರ್ಣಂಕಿಲ, ಪಡುಬೆಟ್ಟು, ವರ್ವಾಡಿ, ಚಿತ್ರಬೈಲು ಪ್ರದೇಶಗಳಿಗೂ ಅನುಕೂಲಕರ.
ಹರೀಶ್ ಶೆಟ್ಟಿ ಕಕ್ರಮನೆ, ಬೆಳ್ಳೆ ಗ್ರಾಪಂ ಉಪಾಧ್ಯಕ್ಷ

Leave a Reply

Your email address will not be published. Required fields are marked *