ಶಿರೂರು ಟೋಲ್ ಶೀಘ್ರ

ಶಿರೂರು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಕೊನೇ ಹಂತಕ್ಕೆ ಬಂದಿದ್ದು, ಬಹುತೇಕ ಕಡೆಗಳಲ್ಲಿ ಕಾಮಗಾರಿಯೂ ಪೂರ್ಣಗೊಂಡಿದೆ. ಕುಂದಾಪುರದಿಂದ-ಗೋವಾ ಚತುಷ್ಪಥ ರಸ್ತೆಯ ಮೊದಲ ಟೋಲ್‌ಗೇಟ್ ಶಿರೂರಿನಲ್ಲಿ ಆರಂಭಿಸಲು ಪ್ರಾಯೋಗಿಕ ಸಿದ್ಧತೆ ಆರಂಭ ವಾಗಿದೆ. ಕೆಲವೇ ದಿನಗಳಲ್ಲಿ ಶಿರೂರು, ಬೈಂದೂರು, ಭಟ್ಕಳ ಭಾಗದ ಜನ ರಸ್ತೆ ಸುಂಕ ಪಾವತಿಸಿ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಪೂರ್ಣಗೊಳ್ಳದ ಕಾಮಗಾರಿ: ಸಾಸ್ತಾನ, ಹೆಜಮಾಡಿ, ಸುರತ್ಕಲ್ ಟೋಲ್‌ಗಳಲ್ಲಿ ಸ್ಥಳೀಯರು ಟೋಲ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದರ ನಡುವೆ ಶಿರೂರಿನಲ್ಲಿ ಆರಂಭವಾಗುವ ಟೋಲ್‌ಗೇಟ್‌ನಿಂದ ಸುತ್ತಮುತ್ತಲಿನ ಹತ್ತಾರು ಕಿ.ಮೀ. ವ್ಯಾಪ್ತಿಗೆ ಜನ ಮನೆಯಿಂದ ತೋಟಕ್ಕೆ ಹೋಗಬೇಕಾದರೂ ಸುಂಕ ಪಾವತಿಸಬೇಕಾಗುತ್ತದೆ. ಕಾರಣವೆಂದರೆ ಸುತ್ತಲಿನ ಹತ್ತು ಕಿ.ಮೀ ವ್ಯಾಪ್ತಿಗೆ ಶಿರೂರು ಪ್ರಮುಖ ವಾಣಿಜ್ಯ ಪ್ರದೇಶ. ಬ್ಯಾಂಕ್, ಶಾಲೆ, ಸಂಘ ಸಂಸ್ಥೆಗೆ ಗೋರ್ಟೆ, ಅಡಿಬೇರು, ಬೆಳಕೆ, ಸರ್ಪನಕಟ್ಟೆಯಿಂದ ಶಿರೂರಿಗೆ ಬರಬೇಕು. ಶಿರೂರಿನಿಂದ ಪ್ರತಿ ಕೆಲಸಕ್ಕೂ ಕೂಡ ಏಳು ಕಿ.ಮೀ ದೂರ ಇರುವ ಭಟ್ಕಳಕ್ಕೆ ತೆರಳಬೇಕಾಗುತ್ತದೆ. ಒಂದೊಮ್ಮೆ ಸ್ಥಳೀಯ 10 ಕಿ.ಮೀ ವ್ಯಾಪ್ತಿಯ ವಾಹನಗಳಿಗೆ ಸುಂಕ ವಿಧಿಸಿದರೆ ಜನರು ಟೋಲ್ ದಾಟಿ ತಿರುಗಾಡಬೇಕಾಗಿದೆ.

ಸರ್ವೀಸ್ ರಸ್ತೆಗಳೂ ಆಗಿಲ್ಲ: ಕೆಲವು ತಿಂಗಳ ಹಿಂದೆ ಟೋಲ್ ಆರಂಭಿಸುವ ಸಿದ್ಧತೆ ನಡೆಸುತ್ತಿರುವ ಮಾಹಿತಿ ಲಭಿಸಿ ಸಂಸದರ ಜನಸಂಪರ್ಕ ಸಭೆಯಲ್ಲಿ ಇಲ್ಲಿನ ಹೆದ್ದಾರಿ ಹೋರಾಟ ಸಮಿತಿ ಈ ವಿಷಯ ಪ್ರಸ್ತಾವಿಸಿತ್ತು. ಸ್ಥಳೀಯ 10 ಕಿ.ಮೀ ವ್ಯಾಪ್ತಿಯ ವಾಹನಗಳಿಗೆ ರಿಯಾಯಿತಿ ನೀಡಬೇಕೆಂದು ಹೆದ್ದಾರಿ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಸ್ಪಂದಿಸಿದ ಸಂಸದರು ಸರ್ವೀಸ್ ರಸ್ತೆ ಪೂರ್ಣಗೊಳಿಸದೆ ಟೋಲ್ ಆರಂಭಿಸಬಾರದು ಎಂದು ಕಂಪನಿ ಹಾಗೂ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿದ್ದರು. ಕಂಪನಿ ಅಧಿಕಾರಿಗಳು ಸರ್ವೀಸ್ ರಸ್ತೆ ವರದಿ ಕಳುಹಿಸಿದ್ದು ಆರ್.ಒ ಕಚೇರಿಯಿಂದ ಮಂಜೂರಾತಿ ದೊರೆಯಬೇಕಿದೆ ಎಂಬ ಸಬೂಬು ಹೇಳುತ್ತಿದ್ದಾರೆ. ಇದರ ನಡುವೆ ಟೋಲ್ ಆರಂಭಕ್ಕೆ ಅಗತ್ಯ ಪ್ರಕ್ರಿಯೆ ನಡೆಯುತ್ತಿದೆ.

ಹೋರಾಟಕ್ಕೆ ಸಿದ್ಧತೆ
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಟೋಲ್ ಪ್ರಾರಂಭಿಸುವ ಮುನ್ನ ಸ್ಥಳೀಯರಿಗೆ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿ ಸದ್ಯದಲ್ಲೇ ಪ್ರತಿಭಟನೆ ನಡೆಸಲಿದೆ. ಒಂದೆಡೆ ಆರ್ಥಿಕ ಹಿನ್ನೆಡೆ ಇನ್ನೊಂದೆಡೆ ಕೃಷಿ ಕಾರ್ಮಿಕರು ಅಧಿಕವಿರುವ ಕಾರಣ ಶಿರೂರು ಸುತ್ತಮುತ್ತ ಸ್ಥಳೀಯರಿಗೆ ಸುಂಕ ಪಾವತಿಸುವ ಕ್ರಮ ಕೈಗೊಂಡರೆ ಹೋರಾಟ ನಡೆಯಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಪೂರ್ಣ ಪ್ರಮಾಣದಲ್ಲಿ ರಸ್ತೆ ನಿರ್ಮಿಸಿ ಸುಂಕ ವಸೂಲಿ ಮಾಡಲಿ ಎಂಬುದು ಜನರ ಆಗ್ರಹ.

ಹೆದ್ದಾರಿ ವಿವರ
ಒಟ್ಟು ಉದ್ದ: 189.6 ಕಿ.ಮೀ.
ವಾಹನ ಸಂಚರಿಸಬಹುದಾದ ಅಂಡರ್‌ಪಾಸ್: 3
ಬಸ್ ದಾರಿಗಳು: 53
ರೈಲ್ವೆ ಓವರ್ ಬ್ರಿಡ್ಜ್: 3
ಸಣ್ಣ ಸೇತುವೆಗಳು: 39
ದೊಡ್ಡ ಸೇತುವೆ: 14,
ಫ್ಲೈಓವರ್: 4
ಟೋಲ್ ಪ್ಲಾಜಾ: 3

ಟೋಲ್ ಆರಂಭಕ್ಕೆ ಪ್ರಕ್ರಿಯೆ ನಡೆಯುತ್ತಿವೆ. ಕಾಮಗಾರಿ ಪೂರ್ಣಗೊಂಡ ಕಾರಣ ಒಂದೆರಡು ತಿಂಗಳಲ್ಲಿ ಸುಂಕ ವಸೂಲಾತಿ ಕಾರ್ಯ ಆರಂಭಿಸುವ ಸಾಧ್ಯತೆಗಳಿವೆ.
ಯೋಗೇಂದ್ರಪ್ಪ, ಪ್ರಾಜೆಕ್ಟ್ ಮ್ಯಾನೇಜರ್

ಟೋಲ್ ಆರಂಭಿಸಲು ಕಂಪನಿ ಅನುಮತಿಗಾಗಿ ಎನ್‌ಎಚ್‌ಎಐಗೆ ಕಳುಹಿಸಿದೆ. ಆದರೆ ಟೋಲ್ ಆರಂಭಿಸಲು ಅದರದ್ದೇ ಆದ ನಿಯಮಗಳಿವೆ. ಇದುವರೆಗೆ ಅನುಮತಿ ನೀಡಿಲ್ಲ. ನಮ್ಮ ನಿಯಮ ಹಾಗೂ ಕಾಮಗಾರಿ ಸ್ಪಷ್ಟತೆ ಬಳಿಕವೆ ಟೋಲ್ ಪ್ರಕ್ರಿಯೆಗೆ ಅನುಮತಿ ದೊರೆಯಬೇಕಿದೆ.
ಚೆನ್ನಯ್ಯ, ಎನ್‌ಎಚ್‌ಎಐ ಕನ್ಸ್‌ಲೆಂಟ್

ಟೋಲ್‌ನಲ್ಲಿ ಸ್ಥಳೀಯ 10 ಕಿ.ಮೀ ವ್ಯಾಪ್ತಿವರೆಗೆ ಕಡ್ಡಾಯವಾಗಿ ರಿಯಾಯಿತಿ ನೀಡಬೇಕು. ಸಂಸದರು ಹಾಗೂ ಶಾಸಕರು ಕೂಡ ಸರ್ವೀಸ್ ರಸ್ತೆ ಪೂರ್ಣಗೊಂಡ ಬಳಿಕವೇ ಟೋಲ್‌ಗೇಟ್ ಆರಂಭಿಸಲು ಹೇಳಿದ್ದಾರೆ. ಒಂದೊಮ್ಮೆ ಕಂಪನಿ ಸ್ಥಳೀಯರ ಬೇಡಿಕೆಗೆ ಸ್ಪಂದಿಸದಿದ್ದರೆ ಆರಂಭದಲ್ಲೆ ಹೋರಾಟ ನಡೆಸಬೇಕಾಗುತ್ತದೆ.
ಸತೀಶ ಕುಮಾರ್ ಶೆಟ್ಟಿ, ಹೆದ್ದಾರಿ ಹೋರಾಟ ಸಮಿತಿ, ಶಿರೂರು

Leave a Reply

Your email address will not be published. Required fields are marked *