ಶಿರೂರು ಶ್ರೀ ವೃಂದಾವನ ನಿರ್ಮಾಣಕ್ಕೆ ಸಿದ್ಧತೆ

ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನರಾಗಿ ಜುಲೈ 19ಕ್ಕೆ ಒಂದು ವರ್ಷವಾಗುತ್ತಿದ್ದು, ಕಾರ್ಕಳದಲ್ಲಿ ಶಿಲಾ ವೃಂದಾವನ ಕೆತ್ತನೆ ಕಾರ್ಯ ನಡೆಯುತ್ತಿದೆ. ಆಗಸ್ಟ್ 7ರಂದು ನಡೆಯುವ ಪ್ರಥಮ ಆರಾಧನೆ ದಿನದಂದು ಶಿರೂರು ಮೂಲ ಮಠದಲ್ಲಿರುವ ಸಮಾಧಿ ಸ್ಥಳದಲ್ಲಿ ಸಂಪ್ರದಾಯಬದ್ಧವಾಗಿ ವೃಂದಾವನ ಪ್ರತಿಷ್ಠಾಪಿಸಲಾಗುತ್ತದೆ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ವಿಜಯವಾಣಿಗೆ ತಿಳಿಸಿದ್ದಾರೆ.

ಶ್ರೀಗಳ ನಿಧನದ ಬಳಿಕ ಮಠದ ಆಡಳಿತ ದ್ವಂದ್ವ ಮಠವಾದ ಸೋದೆ ಮಠದ ವಶಕ್ಕೆ ಬಂದಿದ್ದು, 25 ಲಕ್ಷ ರೂ. ವೆಚ್ಚದಲ್ಲಿ ಶಿರೂರು ಮೂಲ ಮಠವನ್ನು ನವೀಕರಿಸಲಾಗಿದೆ. ಮುಂದಿನ ಹಂತದಲ್ಲಿ ಸಾಂತ್ಯಾರು ಗೋಪಾಲಕೃಷ್ಣ ಮಠ ಜೀರ್ಣೋದ್ಧಾರಕ್ಕೆ ಸಮಿತಿ ರಚಿಸಲಾಗಿದೆ. 2021ಕ್ಕೆ ಬ್ರಹ್ಮಕಲಶ ನೆರವೇರಿಸಲು ನಿರ್ಧರಿಸಲಾಗಿದೆ. ಪಾಪುಜೆ ಮಠವನ್ನು ಶಿರೂರು ಮಠದಿಂದಲೇ ಜೀರ್ಣೋದ್ಧಾರಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಶ್ರೀಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಮಠದ ಪರ ತೀರ್ಫು ವಿಶ್ವಾಸ: ಆದಾಯ ತೆರಿಗೆ ಇಲಾಖೆ ಕಳೆದ ಶಿರೂರು ಪರ್ಯಾಯ ಸಮಯದಲ್ಲಿ ನಡೆದ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿ 18 ಕೋಟಿ ರೂ. ತೆರಿಗೆ ಪಾವತಿಸುವಂತೆ ಸೋದೆ ಮಠಕ್ಕೆ ನೋಟಿಸ್ ನೀಡಿದೆ. ಹಂತ ಹಂತವಾಗಿ ವಿಚಾರಣೆ ನಡೆಯುತ್ತಿದ್ದು, ಇಲಾಖೆಗೆ ದಾಖಲೆಗಳನ್ನು ಪ್ರಸ್ತುತಪಡಿಸಲಾಗಿದೆ. ಮಠದ ಪರ ತೀರ್ಪು ಬರುವ ವಿಶ್ವಾಸವಿದ್ದು, ವಶಕ್ಕೆ ಪಡೆದಿದ್ದ ಶಿರೂರು ಮಠದ ಒಂದು ಬ್ಯಾಂಕ್ ಖಾತೆಯನ್ನು ಇಲಾಖೆ ತೆರವುಗೊಳಿಸಿದೆ ಎಂದು ಸೋದೆ ಶ್ರೀಗಳು ತಿಳಿಸಿದರು.

ವಿವಾದ ಇತ್ಯರ್ಥ ಬಳಿಕ ಶಿಷ್ಯ ಸ್ವೀಕಾರ: ಅನೇಕ ವರ್ಷ ಒಬ್ಬರೇ ಯತಿ ಎರಡು ಮಠಕ್ಕೆ ಪೀಠಾಧಿಪತಿಯಾಗಿದ್ದ ಉದಾಹರಣೆ ಅಷ್ಟಮಠದ ಪರಂಪರೆಯಲ್ಲಿದೆ. ಮಠಕ್ಕೆ ಸಂಬಂಧಿಸಿದ ಕನಕ ಮಾಲ್ ಸಹಿತ 2 ಭೂ ವ್ಯಾಜ್ಯ ಇತ್ಯರ್ಥ ಬಳಿಕ ಶಿಷ್ಯ ಸ್ವೀಕಾರ ಮಾಡಲಾಗುವುದು. ಉತ್ತಮ ವ್ಯಕ್ತಿಯನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಬೇಕು ಎಂಬುದು ಭಕ್ತರ ಆಗ್ರಹ. ಹೀಗಾಗಿ ವಟುವನ್ನು ಗುರುತಿಸಿ ಸೋಂದಾ ಕ್ಷೇತ್ರದ ಗುರುಕುಲದಲ್ಲಿ ಧಾರ್ಮಿಕ ಶಿಕ್ಷಣ ನೀಡುತ್ತಿದ್ದೇವೆ. ಪ್ರಾಪ್ತ ವಯಸ್ಕರಾದ ಬಳಿಕ ಸಂನ್ಯಾಸ ದೀಕ್ಷೆ ನೀಡಿ ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಿಸಲಾಗುವುದು ಎಂದು ಸೋದೆ ಶ್ರೀಗಳು ತಿಳಿಸಿದರು.

Leave a Reply

Your email address will not be published. Required fields are marked *