ಶಿವಮೊಗ್ಗ:ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು ಸೊರಬದಲ್ಲಿ ತೀವ್ರಗೊಂಡಿದ್ದ ಬಣ ಜಗಳ, ಸೊರಬ ತಾಲೂಕಿನಲ್ಲಿ ಪಕ್ಷದೊಳಗಿನ ಗುಂಪುಗಾರಿಕೆ ಕುರಿತ ವರದಿ ಇದೀಗ ರಾಜ್ಯ ಬಿಜೆಪಿ ಅಂಗಳ ತಲುಪಿದೆ. ಅಲ್ಲಿಂದ ಬರುವ ಸೂಚನೆಯನ್ನು ಆಧರಿಸಿ ಜಿಲ್ಲಾ ಬಿಜೆಪಿಯಿಂದ ಶಿಸ್ತು ಕ್ರಮ ಜರುಗಿಸಲು ತೀರ್ಮಾನಿಸಿದೆ.
ಇದರೊಂದಿಗೆ ಸೊರಬ ತಾಲೂಕಿನ ಬಿಜೆಪಿ ಒಳ ಜಗಳ ಅಂತಿಮ ಹಂತ ತಲುಪಿದೆ. ರಾಜ್ಯ ಮುಖಂಡರು ಯಾರು ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ ನೀಡುತ್ತಾರೆ ಎಂಬ ಕುತೂಹಲವೂ ಸೃಷ್ಠಿಯಾಗಿದೆ. ಎಲ್ಲ ಬೆಳವಣಿಗೆಗಳು ನಮೋ ವೇದಿಕೆ ಹಾಗೂ ಶಾಸಕ ಕುಮಾರ್ ಬೆಂಬಲಿಗರನ್ನು ತುದಿಗಾಲಲ್ಲಿ ನಿಲ್ಲಿಸಿವೆ.
ಸೊರಬದಲ್ಲಿನ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟಿನ ಬಗ್ಗೆ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲ ಮುಖಂಡರು, ಕಾರ್ಯಕರ್ತರಿಗೆ ಅವಕಾಶವಿದೆ. ಆದರೆ ಅದಕ್ಕೊಂದು ಸ್ವರೂಪವಿದೆ. ಪಕ್ಷದ ಚೌಕಟ್ಟಿನಲ್ಲೇ ಸಮಸ್ಯೆ ಪ್ರಸ್ತಾಪಿಸಬೇಕು ಎಂದಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊರಬದಲ್ಲಿ ನಮೋ ವೇದಿಕೆಯಡಿ ನಡೆದ ಕಾರ್ಯಕ್ರಮದ ಬಗ್ಗೆ ಅಲ್ಲಿನ ಮಂಡಲ ಪ್ರಮುಖರಿಂದ ವರದಿ ತರಿಸಿಕೊಂಡು ರಾಜ್ಯ ನಾಯಕರಿಗೆ ತಲುಪಿಸಲಾಗಿದೆ. ಅಲ್ಲಿ ನೀಡುವ ಸೂಚನೆಯನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ಅಂತಿಮಗೊಳಿಸುವ ಬಗ್ಗೆ ಇನ್ನೂ ಯಾವುದೇ ಪ್ರಕ್ರಿಯೆ ಪಕ್ಷದೊಳಗೆ ಆರಂಭವಾಗಿಲ್ಲ. ಸಂಘಟನೆ ಸೂಕ್ತ ಸಮಯದಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ. ಸ್ಪರ್ಧೆಯ ಆಕಾಂಕ್ಷೆ ವ್ಯಕ್ತಪಡಿಸುವ ಅಧಿಕಾರ ಪ್ರತಿ ಕಾರ್ಯಕರ್ತರಿಗೂ ಇದೆ. ಆದರೆ ಅದಕ್ಕೆ ಪಕ್ಷದೊಳಗೇ ವೇದಿಕೆಯಿದೆ ಎಂದು ಪರೋಕ್ಷವಾಗಿ ನಮೋ ವೇದಿಕೆ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡರು.
ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಪ್ರಮುಖರಾದ ಬಿ.ಆರ್.ಮಧುಸೂದನ್, ಶಿವರಾಜ್, ಬಿ.ಕೆ.ಶ್ರೀನಾಥ್, ಹೃಷಿಕೇಶ್ ಪೈ, ಜ್ಞಾನೇಶ್ವರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.