ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕಿದು 2ನೇ ಉಪಚುನಾವಣೆ

| ಅರವಿಂದ ಅಕ್ಲಾಪುರ ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇದು ಎರಡನೇ ಉಪಚುನಾವಣೆ. ಬಿಜೆಪಿಯಿಂದ ಆಯ್ಕೆಯಾಗಿದ್ದ ಎಸ್. ಬಂಗಾರಪ್ಪ 2005 ರಾಜೀನಾಮೆ ನೀಡಿದಾಗ ಮೊದಲ ಉಪಚುನಾವಣೆ ನಡೆದಿತ್ತು.

ಮೊದಲ ಉಪಚುನಾವಣೆಗೂ ಈಗಿನ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಅಂದು ಇದ್ದ ಜಿದ್ದಾಜಿದ್ದಿನ ಕಣ ಈಗಿಲ್ಲ. ಹಾಗೆಂದು ರಾಜಕೀಯ ಪಕ್ಷಗಳಲ್ಲಿನ ಪ್ರತಿಷ್ಠೆಯೇನೂ ಕಡಿಮೆಯಾಗಿಲ್ಲ.

20 ವರ್ಷಗಳ ಬಳಿಕ ಮತ್ತೆ ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷದ ಧ್ವಜ ಹಾರಿಸಬೇಕು ಎಂಬ ತವಕ ಕಾಂಗ್ರೆಸ್ ಮುಖಂಡರಲ್ಲಿದೆ. ಈ ಚುನಾವಣೆಯಲ್ಲೂ ಕಮಲ ಅರಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಬೇಕೆಂಬ ಬಯಕೆ ಬಿಜೆಪಿ ನಾಯಕರದ್ದು.

ಸೈಕಲ್ ಏರಿದ ಬಂಗಾರಪ್ಪ: ಜಿಲ್ಲೆಯ ರಾಜಕಾರಣದ ಅವಲೋಕನ ಮಾಡುವ ವೇಳೆ ಎಸ್. ಬಂಗಾರಪ್ಪ ಅವರನ್ನು ಹೊರಕ್ಕಿಡುವುದು ಆಗದ ಮಾತು. ಅವರು ಯಾವಾಗ ಏನು ತೀರ್ಮಾನ ಮಾಡುತ್ತಿದ್ದರೆಂಬುದು ಅವರ ಕಟ್ಟಾ ಬೆಂಬಲಿಗರಿಗೇ ತಿಳಿಯುತ್ತಿರಲಿಲ್ಲ. ಅಚಾನಕ್ ಆಗಿ ಬಿಜೆಪಿ ಸೇರ್ಪಡೆಯಾದ ಬಂಗಾರಪ್ಪ 2004ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದು ಗೆದ್ದೇಬಿಟ್ಟರು. ಆದರೆ ಒಂದೇ ವರ್ಷದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಮಾಜವಾದಿ ಪಾರ್ಟಿಯ ಸೈಕಲ್ ಏರಿದರು. ಪದೇಪದೆ ಪಕ್ಷಾಂತರ ಮಾಡುತ್ತಿದ್ದ ಬಂಗಾರಪ್ಪ ವರ್ಚಸ್ಸು ಕ್ರಮೇಣ ಕಡಿಮೆಯಾಗುತ್ತ ಬಂತು. ಮೊದಲೆಲ್ಲ ದೊಡ್ಡ ಅಂತರದ ಗೆಲುವು ಕಾಣುತ್ತಿದ್ದ ಬಂಗಾರಪ್ಪರ ಮತ ಗಳಿಕೆ ಗ್ರಾಫ್ ಕುಸಿದಿತ್ತು.

ಭಾನುಪ್ರಕಾಶ್ ಸ್ಪರ್ಧೆ ವಿಶೇಷತೆ

2005ರ ಉಪಚುನಾವಣೆಯಲ್ಲಿ ಬಿಜೆಪಿ ಎಂ.ಬಿ.ಭಾನು ಪ್ರಕಾಶ್​ರನ್ನು ಕಣಕ್ಕಿಳಿಸಿತು. 2004ರ ಲೋಕಸಭೆ ಚುನಾವಣೆಯಲ್ಲಿ ಬಂಗಾರಪ್ಪ ಗೆಲುವಿಗಾಗಿ ಭಾನುಪ್ರಕಾಶ್ ಕೆಲಸ ಮಾಡಿದ್ದು, ಅದಕ್ಕೂ ಮುನ್ನ 1999ರ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಪರ ಓಡಾಡಿದ್ದರು. ಆದರೆ 2005ರ ಉಪಚುನಾವಣೆಯಲ್ಲಿ ಅವರಿಬ್ಬರ ವಿರುದ್ಧ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಿತ್ತು.

ಎಲ್.ಟಿ.ಹೆಗಡೆ ಕೊನೇ ಚುನಾವಣೆ

ಸಾಗರ ವಿಧಾನಸಭಾ ಕ್ಷೇತ್ರದಿಂದ ಸತತ 2 ಬಾರಿ ವಿಧಾನಸಭೆ ಪ್ರವೇಶಿಸಿದ್ದ ಎಲ್.ಟಿ.ಹೆಗಡೆ, 2005ರ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, 54 ಸಾವಿರಕ್ಕೂ ಅಧಿಕ ಮತ ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೇ ಇವರಿಗೆ ಕೊನೇ ಚುನಾವಣೆಯಾಗಿತ್ತು.

ಈಡೇರದ ಬಂಗಾರಪ್ಪ ಆಸೆ

2005ರಲ್ಲಿ ಲೋಕಸಭೆಗೆ ಉಪಚುನಾವಣೆ ನಡೆದಿದ್ದೇಕೆ? ಬಂಗಾರಪ್ಪ ಬಿಜೆಪಿಗೆ ಗುಡ್​ಬೈ ಹೇಳಿದ್ದೇಕೆ? ಎಂಬುದೂ ಸ್ವಾರಸ್ಯಕರ. ವಾಜಪೇಯಿ ನೇತೃತ್ವದಲ್ಲಿ ಅವಧಿ ಪೂರೈಸಿದ ಎನ್​ಡಿಎ ಸರ್ಕಾರ 2004ರ ಚುನಾವಣೆಗೆ ಸಜ್ಜಾಗಿತ್ತು. ಮತ್ತೊಂದು ಬಾರಿ ಎನ್​ಡಿಎ ಅಧಿಕಾರಕ್ಕೆ ಬರಲಿದೆ ಎಂಬ ವಾತಾವರಣ ನಿರ್ವಣವಾಗಿತ್ತು. ಕೇಂದ್ರದಲ್ಲಿ ಸಚಿವರಾಗಬೇಕೆಂಬ ಆಸೆ ಹೊಂದಿದ್ದ ಬಂಗಾರಪ್ಪ. ಬಿಜೆಪಿ ಸೇರಿದರು. ಚುನಾವಣೆಯಲ್ಲಿ ಗೆದ್ದೂ ಬಿಟ್ಟರು. ಎನ್​ಡಿಎ ಮಾತ್ರ ಅಧಿಕಾರಕ್ಕೆ ಬರಲಿಲ್ಲ. ಕೆಲ ಅವಧಿಯಲ್ಲೇ ಬಿಜೆಪಿಯಿಂದ ಹೊರಬಂದ ಬಂಗಾರಪ್ಪ ಸಮಾಜವಾದಿ ಪಾರ್ಟಿ ಸೇರಿ ಗೆದ್ದರು. ಆದರೂ ಕೇಂದ್ರ ಮಂತ್ರಿ ಕನಸು ನನಸಾಗಲಿಲ್ಲ. ಇದು ಅವರ ರಾಜಕೀಯ ಬದುಕಿನ ಕೊನೇ ಗೆಲುವಾಗಿ ದಾಖಲಾಯಿತು.