More

    1,700 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ: ಸಚಿವ ಈಶ್ವರಪ್ಪ

    ಶಿವಮೊಗ್ಗ: ಜೋಗ ಜಲಪಾತ ಪ್ರದೇಶದಲ್ಲಿ ಅಗತ್ಯ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಸೇರಿ ಶಿವಮೊಗ್ಗ, ಶಿಕಾರಿಪುರ, ಸೊರಬ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ 1,700 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಜು.24ರಂದು ಬೆಳಗ್ಗೆ 11ಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ವರ್ಚುವಲ್ ಮೂಲಕ ಚಾಲನೆ ನೀಡುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
    ಆಯಾ ತಾಲೂಕುಗಳಲ್ಲಿ ಏಕಕಾಲದಲ್ಲಿ ವರ್ಚುವಲ್ ಮೂಲಕ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನಿಂದಲೇ ಸಿಎಂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ನಗರದ ಕುವೆಂಪು ರಂಗಮಂದಿರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಗಣ್ಯರು ಮತ್ತು ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕರೊನಾ ಆತಂಕದ ನಡುವೆಯೂ ಹಲವು ಕಾಮಗಾರಿಗಳಿಗೆ ವೇಗ ಸಿಕ್ಕಿದೆ. ವಿಮಾನ ನಿಲ್ದಾಣ ಸೇರಿ ಇನ್ನಿತರ ಯೋಜನೆಗಳು ನಡೆಯುತ್ತಿದ್ದು ಇದೀಗ ಹೊಸ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ ಎಂದರು.
    ಬಸವೇಶ್ವರರ ಪುತ್ಥಳಿ ಅನಾವರಣ: ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದ ಮಹಾತ್ಮಗಾಂಧಿ ಉದ್ಯಾನದ ಪ್ರವೇಶ ದ್ವಾರದಲ್ಲಿ ಮೂರಡಿ ಎತ್ತರದ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿಯನ್ನು ಜು.24ರಂದು ಬೆಳಗ್ಗೆ 10.30ಕ್ಕೆ ಅನಾವರಣಗೊಳಿಸಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದರು.
    ಲಂಡನ್‌ನಿಂದ ಬಸವೇಶ್ವರರ ಪುತ್ಥಳಿಯನ್ನು ತರಿಸಲಾಗಿತ್ತು. ಆದರೆ ಪ್ರತಿಷ್ಠಾಪನೆಗೆ ಅನೇಕ ಸಮಸ್ಯೆಗಳು ಎದುರಾಗಿದ್ದವು. ಪುತ್ಥಳಿ ಅನಾವರಣಕ್ಕಿದ್ದ ತೊಡಕು ನಿವಾರಿಸಲಾಗಿದ್ದು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಸಿಎಂ ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡುವರು. ಮಹಾನಗರ ಪಾಲಿಕೆಯಿಂದ ಕುವೆಂಪು ರಂಗಮಂದಿರದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts